ಕಡೂರು: ಕಡೂರು ವಿಧಾನಸಭಾ ಕ್ಷೇತ್ರ ಈ ಬಾರಿಯ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತ್ರಿಕೋನ ಸ್ಪರ್ಧೆ ಎಂದೇ ಬಿಂಬಿತವಾಗಿದ್ದ ಈ ಕ್ಷೇತ್ರದಲ್ಲಿ ಚುನಾವಣಾ ಫಲಿತಾಂಶ (Kadur Election Results) ಹೊರಬಿದ್ದಿದ್ದು, ಕಾಂಗ್ರೆಸ್‌ನ ಕೆ.ಎಸ್. ಆನಂದ್ ಅವರು ಜಯಗಳಿಸಿದ್ದಾರೆ.
ಗೆದ್ದು ಬೀಗಿದ ಕೆ.ಎಸ್. ಆನಂದ್
ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹಾಗೂ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತಾ ನಡುವೆ ನೇರಾ ನೇರ ಪೈಪೋಟಿ ಎಂದೇ ಬಿಂಬಿತವಾಗಿತ್ತು. ಆದರೆ, ಕ್ಷೇತ್ರದಲ್ಲಿ ಎಲ್ಲವೂ ಉಲ್ಟಾ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಆನಂದ್ ಅವರು ಸೈಲೆಂಟ್ ಆಗಿಯೇ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಗೆಲುವಿನ ಆನಂದವನ್ನು ಪಡೆದುಕೊಂಡಿದ್ದಾರೆ. ಇವರು ಒಟ್ಟು 75476 ಮತಗಳನ್ನು ಪಡೆಯುವ ಮೂಲಕ ಸಮೀಪ ಸ್ಪರ್ಧಿ ಬಿಜೆಪಿಯ ಬೆಳ್ಳಿ ಪ್ರಕಾಶ್ ಅವರನ್ನು 12007 ಮತಗಳಿಂದ ಸೋಲಿಸಿದ್ದಾರೆ. ಬೆಳ್ಳಿ ಪ್ರಕಾಶ್ ಅವರು 63469 ಮತಗಳನ್ನು ಪಡೆದುಕೊಂಡಿದ್ದಾರೆ.
ಎಡವಿದ ಬೆಳ್ಳಿ ಪ್ರಕಾಶ್
ಕಳೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಬೀಗಿದ್ದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಅವರು ಈಗ ಅದೇ ಮಾದರಿಯಲ್ಲಿ ಮುಗ್ಗರಿಸಿದ್ದಾರೆ. ಕಳೆದ ಬಾರಿ 15,372 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ 12007 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಬೆಳ್ಳಿ ಪ್ರಕಾಶ್ ಅವರು ಗೆಲ್ಲುವ ವಿಶ್ವಾಸದಲ್ಲಿಯೇ ಇದ್ದರು. ಆದರೆ, ಕೊನೇ ಕ್ಷಣದಲ್ಲಿ ಅವರು ಸೋಲು ಕಂಡಿದ್ದಾರೆ.
ಸೋಲು ಕಂಡ ದತ್ತ
ಕಳೆದ ಕೆಲವು ತಿಂಗಳ ಹಿಂದಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹಾರಿದ್ದ ಮಾಜಿ ಸಚಿವ ವೈಎಸ್‌ವಿ ದತ್ತಾ, ಕಾಂಗ್ರೆಸ್ ಟಿಕೆಟ್ ಸಿಗದೆ ಇದ್ದಿದ್ದರಿಂದ ಮರಳಿ ಜೆಡಿಎಸ್‌ಗೆ ಬಂದು ಪಕ್ಷದ ಅಭ್ಯರ್ಥಿಯಾಗಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮಾನಸ ಪುತ್ರ ದತ್ತಾ 2013ರ ವಿಜಯಮಾಲೆಯನ್ನು ಮತ್ತೆ ಧರಿಸಲು ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಮತದಾರರ ಓಲೈಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಕಡೂರು ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯತ ಹಾಗೂ ಕುರುಬ ಮತಗಳನ್ನು ಪಡೆಯುವ ಅವರ ಲೆಕ್ಕಾಚಾರ ತಪ್ಪಿದೆ. ಟಿಕೆಟ್ ನೀಡುವುದಾಗಿ ಕರೆಸಿಕೊಂಡಿದ್ದ ಕಾಂಗ್ರೆಸ್ ಕೊನೇ ಘಳಿಗೆಯಲ್ಲಿ ಕೈ ಎತ್ತಿದ್ದ ಅನುಕಂಪವೂ ಇವರಿಗೆ ಸಿಗಲಿಲ್ಲ.
ಇದನ್ನೂ ಓದಿ: Karnataka Election Results 2023 : ಕಾಂಗ್ರೆಸ್ ಅಧಿಕಾರಕ್ಕೆ; ಐದು ಉಚಿತ ಯೋಜನೆಗಳ ಜಾರಿಗೆ ಕೌಂಟ್‌ಡೌನ್
ಕಳೆದ ಚುನಾವಣೆಯ ಫಲಿತಾಂಶ ಏನು?
ಬೆಳ್ಳಿ ಪ್ರಕಾಶ್ (ಬಿಜೆಪಿ): 62,232- ವೈ ಎಸ್ ವಿ ದತ್ತಾ (ಜೆಡಿಎಸ್) : 46,860- ಕೆ.ಎಸ್ ಆನಂದ್ (ಕಾಂಗ್ರೆಸ್): 46,142- ಗೆಲುವಿನ ಅಂತರ: 15,372
ಈ ಬಾರಿಯ ಚುನಾವಣಾ ಫಲಿತಾಂಶ
ಕೆ.ಎಸ್ ಆನಂದ್ (ಕಾಂಗ್ರೆಸ್): 75476 | ಬೆಳ್ಳಿ ಪ್ರಕಾಶ್ (ಬಿಜೆಪಿ): 63469 | ವೈ ಎಸ್ ವಿ ದತ್ತಾ (ಜೆಡಿಎಸ್): 26837 | ಗೆಲುವಿನ ಅಂತರ: 12007
ಕರ್ನಾಟಕ ಚುನಾವಣೆಯ ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ