ಕಲಬುರಗಿ: ಹಣಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಮತ್ತು ಆತನ ಸ್ನೇಹಿತರಿಬ್ಬರನ್ನು ಅಪಹರಿಸಿರುವ (Kidnap Case) ಘಟನೆ ನಡೆದಿದೆ. ರೂಮಿನಲ್ಲಿ ಮೂವರನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿ, ಹಣವನ್ನು ಲಪಟಾಯಿಸಿರುವ ಘಟನೆ (Assault Case) ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿ ಅರ್ಜುನ್ ಮಡಿವಾಳ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ. ಅರ್ಜುನ್ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮೇ 5ರಂದು ಪರಿಚಯಸ್ಥನಾಗಿದ್ದ ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಅರ್ಜುನ್ ತನ್ನಿಬ್ಬರು ಸ್ನೇಹಿತರಾದ ಎಂ.ಡಿ ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಜತೆಗೆ ಹೋಗಿದ್ದರು.
ಇದನ್ನೂ ಓದಿ: Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್
ಈ ವೇಳೆ ಆರೋಪಿ ರಮೇಶ್ ಕಾರಿನ ಟೆಸ್ಟ್ ಡ್ರೈವ್ ಮಾಡಿ, ಕಾರಿಗೆ ಹಣ ನೀಡುವವರು ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಇದ್ದಾರೆ. ಅಲ್ಲಿಗೆ ಹೋಗೋಣಾ ಎಂದು ಮೂವರನ್ನು ಕರೆದುಹೋಗಿದ್ದಾರೆ. ನಂತರ ಯಾವುದೋ ಮನೆ ಬಳಿ ಕಾರು ನಿಲ್ಲಿಸಿದಾಗ ಸುಮಾರು ಹತ್ತಾರು ಮಂದಿ ಅರ್ಜುನ್ ಹಾಗೂ ಮತ್ತಿಬ್ಬರನ್ನು ಬಲವಂತದಿಂದ ಎಳೆದುಹೋಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ರಮೇಶ್ ಸೇರಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ.
ಕಿರಾತಕರು ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಬಳಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿ ಹಣ ಹಾಕಿಸಿಕೊಂಡು, ಬಳಿಕ ಪ್ರತಿ ಬಾರಿ ಕಾರು ಮಾರಾಟ ಮಾಡಿದಾಗ ಕಮಿಷನ್ ರೂಪದಲ್ಲಿ ಒಂದು ಲಕ್ಷ ರೂ. ಹಣ ಕೊಡಬೇಕು ಎಂದಿದ್ದಾರೆ. ಕೊಡದೆ ಹೋದರೆ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ