Site icon Vistara News

Bomb Hoax: ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಮೇಲ್, ಮುಂದುವರಿದ ಶೋಧ

kalaburagi airport bomb hoax

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ (Kalaburagi Airport) ಬಾಂಬ್‌ ಬೆದರಿಕೆ (Bomb Hoax, Bomb threat) ಕರೆ ಬಂದಿದ್ದು, ಏರ್‌ಪೋರ್ಟ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಏರ್‌ಪೋರ್ಟ್‌ನ ಇ-ಮೇಲ್‌ಗೆ ಅಜ್ಞಾತ ಮೇಲ್‌ ಐಡಿಯಿಂದ ಬೆದರಿಕೆ ಬಂದಿದೆ.

ಬೆದರಿಕೆ ಮೇಲ್ ಕಳಿಸಿರುವ ಅನಾಮಧೇಯ ವ್ಯಕ್ತಿ, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಸ್ಥಳಕ್ಕೆ ಪೊಲೀಸರ ಜೊತೆಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ದೌಡಾಯಿಸಿದ್ದು, ಏರ್‌ಪೋರ್ಟ್‌ನ ಇಂಚಿಂಚು ಸ್ಥಳವನ್ನೂ ಬಿಡದೆ ಪರಿಶೀಲನೆ ನಡೆಸಲಾಯಿತು. ಪ್ರಯಾಣಿಕರ ಬ್ಯಾಗ್‌ಗಳ ತಪಾಸಣೆ ಮಾಡಲಾಗಿದೆ. ಬೆದರಿಕೆ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರಯಾಣಿಕರ ತಪಾಸಣೆಯಲ್ಲಿ ಹೆಚ್ಚಿನ ಕಟ್ಟುನಿಟ್ಟು ಮಾಡಲಾಗಿದೆ. ಆದರೆ ಯಾವುದೇ ವಿಮಾನದ ಕಾರ್ಯಚರಣೆ ವೇಳಾಪಟ್ಟಿಯಲ್ಲಿ ವ್ಯತ್ಯಾಸವಾಗಿಲ್ಲ.

ನಿಲ್ದಾಣಕ್ಕೆ ಬೆದರಿಕೆ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಭೈರೇಗೌಡ, ʼಇದಕ್ಕೆ ಆತಂತಕಪಡುವ ಅವಶ್ಯಕತೆಯಿಲ್ಲʼ ಎಂದಿದ್ದಾರೆ. ʼಇಂತಹ ಬೆದರಿಕೆ ಬರುತ್ತಿರುತ್ತವೆ. ಆತಂಕ ಪಡುವ ಅವಶ್ಯಕತೆ ಇಲ್ಲ. ಅದೊಂದು ‌ಅನಾಮಧೇಯ‌ ಕರೆ. ಕೆಲ ಹೊತ್ತು ಎಲ್ಲವನ್ನೂ ಪರಿಶೀಲನೆ ‌ಮಾಡಿದ್ದಾರೆ. ಸೆಕ್ಯುರಿಟಿ ಜತೆ ಸಹಕರಿಸಬೇಕಾಗಿದ್ದು ನಮ್ಮ ಕರ್ತವ್ಯ ಅಷ್ಟೆʼ ಎಂದು ತಿಳಿಸಿದ್ದಾರೆ.

ದಿಲ್ಲಿ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ ಹಾಕಿದ ಬಾಲಕ ಬಂಧನ

ದಿಲ್ಲಿ ವಿಮಾನ ನಿಲ್ದಾಣಕ್ಕೆ (Delhi Airport) ಬಾಂಬ್‌ ಬೆದರಿಕೆಯೊಡ್ಡಿದ್ದ ಬಾಲಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 13 ವರ್ಷದ ಬಾಲಕನೋರ್ವ ದಿಲ್ಲಿ ವಿಮಾನ ನಿಲ್ದಾಣಕ್ಕೆ ಇ-ಮೇಲ್‌ ಮೂಲಕ ಹುಸಿಬಾಂಬ್‌ ಕರೆ ಮಾಡಿದ್ದ ಎನ್ನಲಾಗಿದೆ. ಡೆಪ್ಯೂಟಿ ಪೊಲೀಸ್‌ ಕಮಿಷನರ್‌ ಉಷಾ ರಂಗ್ನಾನಿ ಮಾಹಿತಿ ನೀಡಿದ್ದು, ದುಬೈನಿಂದ ಬಂದಿದ್ದ ವಿಮಾನದಲ್ಲಿ ಬಾಂಬ್‌ ಇಟ್ಟಿರೋದಾಗಿ ಬಾಲಕ ಕೆಲವು ದಿನಗಳ ಹಿಂದೆ ಇ-ಮೇಲ್‌ ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಮಾಶೆಗಾಗಿ ಮೇಲ್‌ ಕಳುಹಿಸಿದಾಗ ಹೇಳಿದ್ದಾನೆ. ಇಮೇಲ್‌ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪ್ರಮುಖ ನಗರಗಳಲ್ಲಿ ಬಾಂಬ್‌ ದಾಳಿಗಳ ಬೆದರಿಕೆಗಳು ಜಾಸ್ತಿಯಾಗಿವೆ. ಬೆಂಗಳೂರಿನ ಶಾಲೆಗಳು ಸೇರಿ ಮುಂಬೈ, ದೆಹಲಿ ಏರ್‌ಪೋರ್ಟ್‌ಗಳು, ಸರ್ಕಾರದ ಕಟ್ಟಡಗಳಿಗೆ ಹುಸಿ ಬೆದರಿಕೆ ಕರೆಗಳು, ಇ-ಮೇಲ್‌ಗಳು ರವಾನೆಯಾಗುತ್ತಲೇ ಇವೆ. ಇದರ ಬೆನ್ನಲ್ಲೇ, ಮಂಗಳವಾರ (ಜೂನ್‌ 18) ಮುಂಬೈನಲ್ಲಿರುವ 50ಕ್ಕೂ ಅಧಿಕ ಆಸ್ಪತ್ರೆಗಳನ್ನು ಸ್ಫೋಟಿಸುವುದಾಗಿ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಲಾಗಿತ್ತು.

ದೇಶದ 41 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂಬುದಾಗಿ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಆಗಲೂ ಭದ್ರತಾ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯ ಪರಿಶೀಲನೆ ನಡೆಸಿದ್ದರು. ಇದಾದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗಳಿಗೂ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬಾಂಬ್‌ ಬೆದರಿಕೆಯ ಕುರಿತು ಪೊಲೀಸರೇ ಮಾಹಿತಿ ನೀಡಿದ್ದಾರೆ. ವಿಪಿಎನ್‌ ನೆಟ್‌ವರ್ಕ್‌ ಬಳಸಿ ಬಾಂಬ್‌ ದಾಳಿಯ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿರುವ ಪ್ರತಿಷ್ಠಿತ ಜಸ್ಲೋಕ್‌ ಹಾಸ್ಪಿಟಲ್‌, ರಹೇಜಾ ಹಾಸ್ಪಿಟಲ್‌, ಸೆವೆನ್‌ ಹಿಲ್ಸ್‌, ಕೊಹಿನೂರ್‌, ಕೆಇಎಂ, ಜೆಜೆ ಹಾಸ್ಪಿಟಲ್‌, ಸೇಂಟ್‌ ಜಾರ್ಜ್‌ ಹಾಸ್ಪಿಟಲ್‌ ಸೇರಿ ಹಲವು ಆಸ್ಪತ್ರೆಗಳ ಮೇಲೆ ಬಾಂಬ್‌ ದಾಳಿ ಮಾಡಲಾಗುವುದು ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಇ-ಮೇಲ್‌ ಮೂಲಕ ಬೆದರಿಕೆ ಒಡ್ಡುತ್ತಲೇ ಪೊಲೀಸರು ಹಾಗೂ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ಆಸ್ಪತ್ರೆಗಳಿಗೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ, ದೇಶದ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸಲಾಗುವುದು ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿಗೆ ಬೆದರಿಕೆಯ ಮೇಲ್‌ ಬಂದಿತ್ತು. ಬೆಂಗಳೂರು, ದೆಹಲಿ, ಅಹಮದಾಬಾದ್‌, ಚೆನ್ನೈ ಸೇರಿ ಹಲವು ನಗರಗಳ ಶಾಲೆಗಳನ್ನೂ ಸ್ಫೋಟಿಸುವ ಬೆದರಿಕೆ ಕರೆಗಳು ಬಂದಿದ್ದವು. ಬಳಿಕ ನಕಲಿ ಬಾಂಬ್‌ ಬೆದರಿಕೆ ಎಂಬುದಾಗಿ ತಿಳಿದುಬಂದಿತ್ತು. ಬೆಂಗಳೂರಿನಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಾಗಲಂತೂ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದಾದ ಬಳಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡುವಂತಾಗಿತ್ತು.

ಇದನ್ನೂ ಓದಿ: Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Exit mobile version