ಕಲಬುರಗಿ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾಸ್ಪದವಾಗಿ ಸಾವಿಗೀಡಾದ ಘಟನೆ (Custodial death) ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ನಡೆದಿದೆ. ಲಾಕಪ್‌ನಲ್ಲಿ ಪೊಲೀಸರು ಕೊಂದಿದ್ದಾರೆ (Lockup death) ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶರಣಸಿರಸಗಿ ಗ್ರಾಮದ ಉದಯ್ (55) ಸಾವನ್ನಪ್ಪಿದ ವ್ಯಕ್ತಿ. ಲಾಕಪ್ ಡೆತ್‌ಗೆ ಸಂಬಂಧಿಸಿ ಐವರು ಪೊಲೀಸರ ಮೇಲೆ ಎಫ್‌ಐಆರ್ ದಾಖಲು ಮಾಡಲಾಗಿದೆ.
ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಯನ್ನು ಅಶೋಕ್ ನಗರ ಪೊಲೀಸರು ಠಾಣೆಗೆ ಕರೆತಂದಿದ್ದರು. ಮನೆಗಳ್ಳತನ ಪ್ರಕರಣವೊಂದರಲ್ಲಿ ಫಿಂಗರ್ ಪ್ರಿಂಟ್ ಹೋಲಿಕೆ ಆಗಿದ್ದರಿಂದ ಪೊಲೀಸರು ಕರೆತಂದಿದ್ದರು. ವಿಚಾರಣೆ ಸಂದರ್ಭದಲ್ಲಿ ಕೆಳಗೆ ಕುಸಿದುಬಿದ್ದು ಉದಯ್ ಸಾವಿಗೀಡಾಗಿದ್ದಾನೆ. ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ಉದಯ್‌ನನ್ನು ಲಾಕಪ್‌ನಲ್ಲಿ ಸಾಯಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡುವುದಾಗಿ ಕಲಬುರಗಿ ಪೊಲೀಸ್ ಕಮಿಷನರ್ ಆರ್. ಚೇತನ್ ಹೇಳಿದ್ದಾರೆ. ಕುಟುಂಬಸ್ಥರು ನೀಡುವ ದೂರಿನನ್ವಯ ಕೇಸ್ ದಾಖಲು ಮಾಡಿಕೊಂಡು ತನಿಖೆಗಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿ ಅಶೋಕ ನಗರ ಠಾಣೆ PSI ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. A1 ಪಿಎಸ್‌ಐ ಶಿವಪ್ಪ, A2 ಕಾನ್‌ಸ್ಟೆಬಲ್ ಶಿವಲಿಂಗಪ್ಪ ಸೇರಿದಂತೆ ಐವರ ವಿರುದ್ಧ FIR ದಾಖಲು ಮಾಡಲಾಗಿದೆ.
ಇದನ್ನೂ ಓದಿ: Custodial death | ಬೆಂಗಳೂರಿನಲ್ಲಿ ಲಾಕಪ್ ಡೆತ್: ಠಾಣೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಆರೋಪಿ