Site icon Vistara News

Death Politics: ಸಚಿವ ಶರಣಪ್ರಕಾಶ್‌ ಹೆಸರು ಹೇಳಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ; ಮತ್ತೊಂದು ವಿವಾದ

BJP Activist Shivakumar death

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಶಿವಕುಮಾರ್‌ ಎಂಬ ಬಿಜೆಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆ (BJP Activist Suicide) ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಅವರು ಮಾಡಿರುವ ಆಡಿಯೊವೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಚಿವ ಶರಣಪ್ರಕಾಶ್‌ ಪಾಟೀಲ್‌ (Sharan Prakash Pateel) ಅವರೇ ಸಾವಿಗೆ ಕಾರಣ ಎಂದು ಹೇಳಿರುವುದು ಭಾರಿ ಸದ್ದು ಮಾಡಿದೆ. ಈ ನಡುವೆ ಆತನ ಪತ್ನಿ ನೀಡಿದ ದೂರಿನಲ್ಲಿ ಸಾವಿನ ವಿಚಾರದಲ್ಲಿ ಯಾರ ಮೇಲೂ ಸಂಶಯವಿಲ್ಲ ಎಂದು ಉಲ್ಲೇಖಿಸಲಾಗಿದೆ. ಬಿಜೆಪಿ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು, ತನಿಖೆ ನಡೆಸಬೇಕು (Death politics) ಎಂದು ಒತ್ತಾಯಿಸಿದೆ.

ಶಿರೊಳ್ಳಿಯ ಬಸ್‌ ಸ್ಟಾಂಡ್‌ ಹಿಂಬದಿ ಇರುವ ಶೆಲ್ಟರ್‌ನಲ್ಲಿ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಕ್ಕೆ ಮುನ್ನ ಆತ ವೈರಲ್‌ ಮಾಡಿರುವ ಆಡಿಯೊದಲ್ಲಿ ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಕಾರಣವೆಂದು ಆರೋಪಿಸಿದ್ದಾನೆ. ʻʻನಾನು ಹಿಂದೂ ಹುಲಿಯಾಗಿದ್ದೇನೆ, ಹಿಂದೂ ಹುಲಿಯಾಗಿ ಸಾಯುತ್ತೇನೆʼʼ ಎಂದು ಹೇಳಿರುವ ಆತ, ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಹಿಂದೂ ಧರ್ಮದ ಬಗ್ಗೆ ಮಾತಾಡಬಾರದು. ಮಾತನಾಡಿದರೆ ಇವರಿಗೆ ಬೆಂಕಿ ಬೀಳುತ್ತದೆʼʼ ಎಂದು ಹೇಳಿದ್ದಾನೆ.

ಆತನ ಈ ಮಾತು ಇದರ ಹಿಂದೆ ಶರಣಪ್ರಕಾಶ್‌ ಪಾಟೀಲ್‌ ಅವರ ಕೈವಾಡವಿದೆ ಎಂಬ ಅಭಿಪ್ರಾಯವನ್ನು ಮೂಡಿಸಿದ್ದು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಕೆರಳಿ ನಿಂತಿದ್ದಾರೆ.

BJP Activist Shivakumar death

ಸಚಿವರಾದ ಶರಣಪ್ರಕಾಶ್‌ ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಮೇಲೆ ಆಕ್ರೋಶ

ʻʻರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ದೌರ್ಜನ್ಯ, ಅಧರ್ಮದ ಚಟುವಟಿಕೆ ನಡೆಯುತ್ತಿದೆ. ಧರ್ಮಕ್ಕಾಗಿ ಹೋರಾಟ ಮಾಡುವವರನ್ನು ಹತ್ತಿಕ್ಕಿ ಕಾಂಗ್ರೆಸ್ ತಂತ್ರಗಾರಿಕೆ ಮಾಡ್ತಾ ಇದೆ. ಕರ್ನಾಟಕದ ಜನತೆ ಈಗಾಗಲೆ ಸರ್ಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದೆʼʼ ಎಂದು ಬಿಜೆಪಿ ಕಾರ್ಯರ್ತರು ಹೇಳಿದ್ದಾರೆ.

ಶಿವಕುಮಾರ್‌ ಇತ್ತೀಚೆಗೆ ಸಂಬಂಧಿಕ ನರಸಪ್ಪ ಪೂಜಾರಿ ಅವರ ಜಮೀನಿಗೆ ಹೋಗಿದ್ದಾಗ ಕಾಂಗ್ರೆಸ್ ನ ಕಾರ್ಯರ್ತರು ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ದೂರು ನೀಡಿದ್ದರೂ ಸ್ಪಂದಿಸಿಲ್ಲ. ಇದರಿಂದ ನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದು ಬಿಜೆಪಿ ಕಾರ್ಯಕರ್ತರ ಆರೋಪ.

ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡರೂ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮೌನವಾಗಿದ್ದಾರೆ ಎಂದು ಆಪಾದಿಸಿರುವ ಬಿಜೆಪಿ ಕಾರ್ಯಕರ್ತರು ತಕ್ಷಣಕ್ಕೆ ಕೊಲೆಗಡುಕರನ್ನ ಬಂಧಿಸಬೇಕು ಆಗರ್ಹಿಸಿದ್ದಾರೆ.

ʻʻಬಡ ಜನರಿಗೆ ಆಸೆ ಆಮಿಷ ತೋರಿಸಿ ಸಾಕ್ಷಿ ನಾಶ ಮಾಡುವ ಕೆಲಸ ನಡೆಯುತ್ತಿದೆ. ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರು ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಉಸ್ತುವಾರಿ ಸಚಿವ ಪ್ರಿಯಾಂಕ್ ಮೃತನ ಮನೆಗೆ ಭೇಟಿ ನೀಡಿ ಪರಿಹಾರ ನೀಡಬೇಕು. ಶಿವಕುಮಾರ್ ಕುಟುಂಬಕ್ಕೆ ನ್ಯಾಯ ಸಿಗದೇ ಇದ್ದಲ್ಲಿ ಬಿಜೆಪಿ ಹೋರಾಟ ನಡೆಸುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಮುತುವರ್ಜಿ ವಹಿಸಿ ಶಿವಕುಮಾರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ನಾಯಕ ಡಾ.ಅಶ್ವತ್ಥ್ ನಾರಾಯಣ ಅವರು ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಚಿವರ ಹೆಸರು ಬಂದಿದೆ ಅಂದರೆ ಸೂಕ್ತ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Love Case : ತಮ್ಮನ ಲವ್‌ ಅಫೆರ್‌ಗೆ ಬೇಸತ್ತು ಅಣ್ಣ ಆತ್ಮಹತ್ಯೆಗೆ ಯತ್ನ!

ಗ್ರಾಮದಲ್ಲಿ ನಡೆದ ಶವ ಮೆರವಣಿಗೆ

ಆದರೆ, ದೂರಿನಲ್ಲಿ ಇರುವುದೇ ಬೇರೆ!

ಒಂದು ಕಡೆ ಬಿಜೆಪಿ ಕಾರ್ಯಕರ್ತರು ಶಿವಕುಮಾರ್‌ನ ಆಡಿಯೊ ಆಧರಿಸಿ ಶರಣ್‌ ಪ್ರಕಾಶ್‌ ಪಾಟೀಲ್‌ ಮೇಲೆ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಆದರೆ, ಮೃತ ಶಿವಕುಮಾರ್ ಪತ್ನಿ ಮಲ್ಲಮ್ಮ ರಿಂದ‌ ದಾಖಲಾಗಿರುವ ದೂರಿನಲ್ಲಿ ಈ ಯಾವ ಮಾಹಿತಿಯೂ ಇಲ್ಲ. ಶಿವಕುಮಾರ್‌ ಸಾಲ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.

ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಮಲ್ಲಮ್ಮ ದಾಖಲಿಸಿದ ದೂರಿನಲ್ಲಿ, ಶಿವಕುಮಾರ್‌ಗೆ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಲವಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಮದುವೆಯಾಗಿ 13 ವರ್ಷವಾದರೂ ಮಕ್ಕಳಾಗಿಲ್ಲ, ಅವನಿಗೆ ಕುಡಿತದ ಚಟವಿತ್ತು. ಭೂಮಿ ಮಾರಿದರೂ ಸಾಲ ತೀರಿಸಲು ಆಗಿಲ್ಲ. ಮಳೆ ಇಲ್ಲದೆ ಕೃಷಿಯೂ ಕೈ ಕೊಟ್ಟಿದೆ ಎಂಬೆಲ್ಲ ಅಂಶಗಳ ಉಲ್ಲೇಖವಿದೆಯಾದರೂ ಸಚಿವರ ಮೇಲೆ ಆರೋಪ ಮಾಡಲಾಗಿಲ್ಲ.

ಹಾಗಿದ್ದರೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಸಾವಿನ ಹೆಸರಿನಲ್ಲಿ ರಾಜಕೀಯ ಶುರು ಮಾಡಿದರಾ? ಹಾಗಿದ್ದರೆ ಆಡಿಯೊದಲ್ಲಿ ಇರುವ ಧ್ವನಿ ಯಾರದ್ದು? ಮನೆಯವರಿಗೆ ಒತ್ತಡ ಹಾಕಿ ಸಾಲ ಬಾಧೆಯ ಕಾರಣ ಹೇಳಿಸಿದರಾ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ತನಿಖೆಯ ವೇಳೆ ಈ ಎಲ್ಲ ವಿಚಾರಗಳಿಗೂ ದಾಖಲೆ ಸಿಗಲಿದೆ ಎನ್ನಲಾಗಿದೆ.

Exit mobile version