ಕಲಬುರಗಿ: ಬಿಸಿಲ ನಾಡು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2019ರ ಲೋಕಸಭೆ ಚುನಾವಣೆ (Kalaburagi Election Result 2024) ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. ಕಲಬುರಗಿಯಲ್ಲಿ ಬಿಜೆಪಿಯ ಉಮೇಶ್ ಜಾಧವ್ (Umesh Jadhav) ಅವರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬಲ ಹೆಚ್ಚಾದಂತಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲಿನ ಕಹಿಯನ್ನು ಮರೆಮಾಚಲು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇನ್ನು, ನರೇಂದ್ರ ಮೋದಿ ಅವರ ಅಲೆ, ಭಾರತ್ ಮಾಲಾ ಯೋಜನೆ, ವಂದೇ ಭಾರತ್ ರೈಲು ಸೇರಿ ಹಲವು ಯೋಜನೆಗಳನ್ನು ಮುಂದಿಟ್ಟುಕೊಂಡು ಉಮೇಶ್ ಜಾಧವ್ ಅವರು ಚುನಾವಣೆ ಎದುರಿಸಿದ್ದರು. ಆದರೂ ಅದು ಫಲ ನೀಡಿಲ್ಲ.
ರಾಧಾಕೃಷ್ಣ ದೊಡ್ಡಮನಿ ಅವರು ಇದುವರೆಗೆ ಚುನಾವಣೆಗಳ ವೇಳೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರ ಬೆನ್ನಿಗೆ ನಿಂತು ಕೆಲಸ ಮಾಡಿದ್ದರು. ಇನ್ನು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರೂ ಆಗಿದ್ದು, ಸ್ಥಳೀಯವಾಗಿ ಹಿಡಿತ ಸಾಧಿಸಲು ಅಳಿಯನ ಗೆಲುವು ನಿರ್ಣಾಯಕವಾಗಿತ್ತು. ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಇನ್ನಷ್ಟು ಬಲಿಷ್ಠವಾಗಲು ಈ ಗೆಲುವು ಸಹಕಾರಿ ಆಗುತ್ತಿತ್ತು. ಹಾಗಾಗಿ, ಪ್ರಸಕ್ತ ಲೋಕಸಭೆ ಚುನಾವಣೆಯಲು ಖರ್ಗೆ ಕುಟುಂಬಕ್ಕೆ ಪ್ರತಿಷ್ಠೆಯ ಕಣವಾಗಿತ್ತು.
2019ರ ಚುನಾವಣೆ ಫಲಿತಾಂಶ ಏನಾಗಿತ್ತು?
ಪ್ರಸಕ್ತ ಸಾರ್ವತ್ರಿಕ ಚುನಾವಣೆಯಂತೆ 2019ರಲ್ಲೂ ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಷ್ಠಿತ ಕ್ಷೇತ್ರದಲ್ಲಿ ಬಿಜೆಪಿಯ ಉಮೇಶ್ ಜಾಧವ್ ಅವರು ಗೆಲುವು ಸಾಧಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ನರೇಂದ್ರ ಮೋದಿ ಅವರ ಅಲೆಯಿಂದಾಗಿ ಉಮೇಶ್ ಜಾಧವ್ ಅವರು 6,20,192 ಮತಗಳನ್ನು ಪಡೆದರೆ, ಮಲ್ಲಿಕಾರ್ಜುನ ಖರ್ಗೆ ಅವರು 5,24,740 ಮತಗಳನ್ನು ಪಡೆದು ಸೋಲನುಭವಿಸಿದರು. ಸೋಲಿನ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಪ್ರವೇಶಿಸಿಸಿದರು. ಇನ್ನು, 2014ರಲ್ಲಿ ಕಲಬುರಗಿಯಲ್ಲಿ ಬಿಜೆಪಿ ರೇವು ನಾಯಕ್ ಬೆಳಮಗಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Dharwad Election Result 2024: ಪ್ರಲ್ಹಾದ್ ಜೋಶಿಗೆ ‘ಧಾರವಾಡ ಪೇಡಾ’; ಅಸೂಟಿಗೆ ಸೋಲು