Site icon Vistara News

Road Accident : ಕಲಬುರಗಿ ಗ್ರಾಮೀಣ ಶಾಸಕರ ಕಾರು ಅಪಘಾತ; ಆಸ್ಪತ್ರೆಗೆ ದಾಖಲು

Kalaburagi MLA car Road accident and Hospitalization

ಕಲಬುರಗಿ: ಇಲ್ಲಿನ ಸಣ್ಣೂರ್ ಕ್ರಾಸ್ ಬಳಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಢ್ (Kalaburagi Rural MLA Basavaraj Mattimoodh) ಅವರ ಕಾರು (Road Accident) ಅಪಘಾತಕ್ಕೀಡಾಗಿದೆ. ಚಾಲಕನ‌ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.

ಅಪಘಾತದಲ್ಲಿ ಶಾಸಕ ಬಸವರಾಜ್ ಮತ್ತಿಮೂಢ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಲಬುರಗಿಯ ಸಣ್ಣೂರ್ ಕ್ರಾಸ್ ಬಳಿ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿ ಕಾರು ಪಲ್ಟಿಯಾಗಿ ಬಿದ್ದಿದೆ. ಹೀಗೆ ಪಲ್ಟಿಯಾಗಿದ್ದರಿಂದ ಶಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಲ್ಲದೆ, ಚಾಲಕನಿಗೂ ಗಾಯಗಳಾಗಿವೆ. ಆ ಭಾಗವಾಗಿ ಬರುತ್ತಿದ್ದ ಇತರೆ ವಾಹನಗಳ ಸವಾರರು ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ಚಾಲಕ ಹಾಗೂ ಶಾಸಕರನ್ನು ಕಾರಿನಿಂದ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮಲಗಿದ್ದವರ ಮೇಲೆ ಹರಿದ ಲಾರಿ; ಅಸುನೀಗಿದ ಇಬ್ಬರು ಕುರಿಗಾಯಿಗಳು

ಬಳ್ಳಾರಿ: ಕುರಿಗಾಯಿಗಳು ಇಬ್ಬರು ಮಲಗಿದ್ದ ವೇಳೆ ಲಾರಿ ಹರಿದು ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಬಳ್ಳಾರಿ ತಾಲೂಕಿನ ಏತ್ತಿನಬೂದಿಹಾಳು ಹತ್ತಿರದ ಬೆಂಚಿಕೊಟ್ಟಲ ಗ್ರಾಮದ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಲಾರಿ ಹರಿದು ಮಲಗಿದ್ದಲೇ ಇಬ್ಬರು ಅಸುನೀಗಿದ್ದಾರೆ.

ಚಿತ್ರದುರ್ಗದ ಮೋಳಕಾಲ್ಮುರು ತಾಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ (51), ಎರಿಸ್ವಾಮಿ (20) ಮೃತ ದುರ್ದೈವಿಗಳು. ಇವರಿಬ್ಬರು ಕಬ್ಬಿನ ಹೊಲದಲ್ಲಿ ಕುರಿಗಳನ್ನು ಬಿಟ್ಟು ಮಲಗಿದ್ದರು. ಇದರ ಅರಿವು ಇರದೇ ಚಾಲಕ ಲಾರಿಯಲ್ಲಿ ಕಬ್ಬಿನ ಲೋಡ್ ತುಂಬಿಸಿಕೊಂಡು, ಗಾಡಿ ರಿವರ್ಸ್ ತೆಗೆಯಲು ಮುಂದಾಗಿದ್ದ. ಇದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಲಾರಿ ಹಿಂದೆ ಮಲಗಿದ್ದವರ ಮೇಲೆ ಏಕಾಏಕಿ ಹರಿದ ಪರಿಣಾಮ ಇಬ್ಬರು ಮಲಗಿದ್ದಲೇ ಉಸಿರು ಚೆಲ್ಲಿದ್ದಾರೆ. ಸದ್ಯ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: BBK Season 10: ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ವರ್ತೂರು ಸಂತೋಷ್

ಹುಲ್ಲು ಸಾಗಿಸುವಾಗ ಹೊತ್ತಿ ಉರಿದ ಟ್ರ್ಯಾಕ್ಟರ್‌

ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟುಕರಲಾಗಿದೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಕಾರಣದಿಂದ ಈ ಅವಘಡ ಸಂಭವಿಸಿದೆ.

ಅಗತ್ಯಕ್ಕಿಂತ ಹೆಚ್ಚು ಹುಲ್ಲನ್ನು ಸಾಗಿಸಿದ್ದೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ಹತ್ತಿಕೊಳ್ಳುತ್ತಿದಂತೆ ಟ್ಯಾಕ್ಟರ್ ಚಾಲಕ ಹುಲ್ಲನ್ನ ಲಿಫ್ಟ್ ಮಾಡಿದ್ದ. ಕುಂದಳ್ಳಿ ಗ್ರಾಮದ ಪ್ರವೀಣ್ ಎಂಬವರಿಗೆ ಸೇರಿದ ಟ್ಯಾಕ್ಟರ್ ಇದಾಗಿದ್ದು, ಬೆಟ್ಟದಳ್ಳಿಯಿಂದ ಮಸಗೋಡಿಗೆ ಸಾಗಿಸಲಾಗುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ; ಇಬ್ಬರಿಗೆ ಡಿಕ್ಕಿ

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಮಂಚಕಲ್ ಕುಪ್ಪೆ ಬಳಿ ಕುಡಿದ ಮತ್ತಿನಲ್ಲಿ ಚಾಲಕನೊರ್ವ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದಾನೆ. ಹಿಂಬದಿಯಿದ್ದ ವಾಹನ ಸವಾರನ ಮೊಬೈಲ್‌ ದೃಶ್ಯ ಸೆರೆಯಾಗಿದೆ.

ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೊಲೆರೋ ವಾಹನದ ಚಾಲಕ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಾನೆ. ಈ ವೇಳೆ ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ನಂತರ ಓರ್ವ ಬೈಕ್ ಸವಾರನಿಗೆ ಡಿಕ್ಕಿಯಾಗಿದೆ.

ಇದನ್ನೂ ಓದಿ: Lok Sabha Election 2024: ಮೈಸೂರು ಲೋಕಸಭೆಗೆ ಯದುವೀರ್‌ ಒಡೆಯರ್‌ ಎಂಟ್ರಿ? ಟಿಕೆಟ್‌ ಕೊಡಲು ಬಿಜೆಪಿ, ಕಾಂಗ್ರೆಸ್‌ ಪೈಪೋಟಿ!

ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ನಡುರಸ್ತೆಯಲ್ಲೆ ವಾಹನ ಪಲ್ಟಿಯಾಗಿದೆ. ವಾಹನ ಪಲ್ಟಿ ಹೊಡೆದ ರಭಸಕ್ಕೆ ಬೊಲೆರೋ ವಾಹನದ ಕ್ಲಿನರ್‌ಗೆ ಗಂಭೀರ ಗಾಯಗೊಂಡಿದ್ದಾನೆ. ಕುಡಿದು ವಾಹನ ಚಲಾಯಿಸಿದ ಚಾಲಕನಿಗೆ ಸಾರ್ವಜನಿಕರು ಛೀಮಾರಿ ಹಾಕಿ ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನ ಚಾಲನಕನನ್ನು ವಶಕ್ಕೆ ಪಡೆದು ತನಿಖೆಯನ್ನು ನಡೆಸಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version