ಕಲಬುರಗಿ: ಕಲಬುರಗಿ ಜಿಲ್ಲೆಯ (Kalaburagi News) ಚಿಂಚೊಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ (Oxygen leakage) ಆಗಿದೆ ಎಂಬ ಸುದ್ದಿ ಕೇಳಿ ರೋಗಿಗಳು ಶಾಕ್ ಆಗಿದ್ದರು. ಆಸ್ಪತ್ರೆ ಹಿಂಭಾಗದಲ್ಲಿದ್ದ ಆಕ್ಸಿಜನ್ ಘಟಕದಿಂದ ಸೋರಿಕೆಯಾಗಿ ಅರ್ಧ ಕಿಮೀ ವ್ಯಾಪ್ತಿವರೆಗೂ ವಾಸನೆ ಮೂಗಿಗೆ ಬಡಿದಿತ್ತು.
ನೋಡನೋಡುತ್ತಿದ್ದ ಒಬ್ಬರಿಂದ ಒಬ್ಬರಿಗೆ ಆಕ್ಸಿಜನ್ ಸೋರಿಕೆ ಸುದ್ದಿ ಹರಿದಾಡಿದೆ. ಬಳಿಕ ಆಸ್ಪತ್ರೆಯೊಳಗೆ ಇದ್ದ ಸಿಬ್ಬಂದಿ, ರೋಗಿಗಳು ಭಯಭೀತರಾಗಿ ಹೊರಗೆ ಓಡಿ ಬಂದು ಆವರಣದೊಳಗೆ ಬಂದು ಕುಳಿತುಕೊಳ್ಳುವಂತಾಯಿತು. ಇತ್ತ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡಿದೆ ಎಂಬ ಸುದ್ದಿಯಿಂದಾಗಿ ವೈದ್ಯರು ಮತ್ತು ಸಿಬ್ಬಂದಿ ತಗ್ಗಿದ ವಸತಿಗೃಹಗಳನ್ನು ಖಾಲಿ ಮಾಡಿದ್ದವು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಂಚೊಳ್ಳಿ ಪೊಲೀಸರು ದೌಡಾಯಿಸಿದ್ದರು. ಪರಿಶೀಲನೆ ನಡೆಸಿದಾಗ ಆಕ್ಸಿಜನ್ ಟ್ಯಾಂಕ್ ತುಂಬಿದ್ದರಿಂದ ಅದರ ಒತ್ತಡವನ್ನು ಹೊರಹಾಕಿದೆ ಎಂದು ಗೊತ್ತಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಲಬುರಗಿ ಡಿ.ಎಚ್.ಓ ಡಾ.ರತಿಕಾಂತ್ ಸ್ವಾಮಿ, ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂಬುದು ಸುಳ್ಳು ಸುದ್ದಿ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ಆಕ್ಸಿಜನ್ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಆಗಿದೆ. ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ಆಮ್ಲಜನಕ ಭರ್ತಿ ಮಾಡಿದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಎ, ಬಿ, ಸಿ ಎಂಬ ಸುರಕ್ಷತೆಯ ವಾಲ್‌ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಹೀಗಾಗಿ ಸಾರ್ವಜನಿಕರು ಯಾರು ಆತಂಕ ಪಡಬೇಕಾಗಿಲ್ಲಾ ಎಂದರು.
ಇದನ್ನೂ ಓದಿ: Leopard attack : ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿ ಕಾಲ್ಕಿತ್ತ ಚಿರತೆ!
ಐದು ಅಂತಸ್ತಿನ ಕಟ್ಟಡ ಧರಾಶಾಹಿ- ಏಳು ಜನ ದಾರುಣ ಸಾವು
ಅಹ್ಮದಾಬಾದ್: ಗೇಮಿಂಗ್ ಜೋನ್(Gaming zone)ನಲ್ಲಿ ಭಾರೀ ಬೆಂಕಿ ಅವಘಡ(Fire Accident)ದ ಬಳಿಕ ಗುಜರಾತ್(Gujarat)ನಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದೆ. ಐದು ಅಂತಸ್ತಿನ ಕಟ್ಟಡ(Building Collapse) ಧರಾಶಾಹಿಯಾಗಿದ್ದು, ಏಳು ಜನ ಧಾರುಣವಾಗಿ ಮೃತಪಟ್ಟಿದ್ದಾರೆ. ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಅವಶೇಷದಡಿಯಲ್ಲಿ ಹಲವು ಜನ ಸಿಲುಕಿರುವ ಸಾಧ್ಯತೆ ಇದೆ.
ಘಟನೆ ಬಗ್ಗೆ ಸೂರತ್‌ನ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ರಾತ್ರಿಯಿಡೀ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಏಳು ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಕನಿಷ್ಠ ಆರರಿಂದ ಏಳು ಜನರು ಇನ್ನೂ ಅವಶೇಷಗಳಲ್ಲಿ ಸಿಕ್ಕಿಬಿದ್ದಿರುವ ಭಯವಿದ್ದು, ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ನಡೆಸುತ್ತಿವೆ ಎಂದು ಹೇಳಿದ್ದಾರೆ.
ಸುಮಾರು ಐದು ಫ್ಲಾಟ್‌ಗಳಿಗಳನ್ನು ಹೊಂದಿರುವ ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ಈ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದಾಗ, ಒಳಗೆ ಸಿಲುಕಿರುವವರ ಧ್ವನಿಯನ್ನು ನಾವು ಕೇಳಿದ್ದೇವೆ. ನಾವು ಮಹಿಳೆಯನ್ನು ಜೀವಂತವಾಗಿ ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದೇವೆ. ಸುಮಾರು ಐದು ಜನರು ಇನ್ನೂ ಒಳಗೆ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಜರಾತ್‌ನ ರಾಜ್‌ಕೋಟ್ (Rajkot) ನಗರದಲ್ಲಿರುವ ಗೇಮಿಂಗ್ ಜೋನ್ (Gaming Zone) ಒಂದರಲ್ಲಿ ಮೇ 25ರಂದು ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 9 ಮಕ್ಕಳು, ಮಹಿಳೆಯರು ಸೇರಿ 32 ಮಂದಿ ಮೃತಪಟ್ಟಿರುವ ಪ್ರಕರಣವು ದೇಶವನ್ನೇ ಬೆಚ್ಚಿಬೀಳಿಸಿತ್ತು.
ಗೇಮಿಂಗ್ ಜೋನ್ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿ ದುರಂತ ಸಂಭವಿಸಿದ ಕಾರಣ 32 ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಗೇಮಿಂಗ್ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ.
ರಾಜ್‌ಕೋಟ್ ಅಗ್ನಿ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನೂ ಘೋಷಣೆ ಮಾಡಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನೂ (SIT) ರಚಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ