ಗಲಬುರಗಿ: ಸಾಮಾಜಿಕ ನ್ಯಾಯ, ಬದುಕು ಪರಿವರ್ತನೆ ಎಂದು ದೊಡ್ಡ ದೊಡ್ಡ ಭಾಷಣ ಮಾಡಿದವರು ಜನರ ವಿಶ್ವಾಸವನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಂಡರು ಎಂದು ಇತರೆ ಪಕ್ಷಗಳ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮಳಖೇಡ ಗ್ರಾಮದಲ್ಲಿ ಆಯೋಜಿಸಿದ್ದ ʼನೂತನವಾಗಿ ರಚಿಸಲಾಗಿರುವ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ” ಹಾಗೂ “ವಿವಿಧ ಯೋಜನೆಗಳ ಶಿಲಾನ್ಯಾಸ, ಉದ್ಘಾಟನಾ” ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಕಂದಾಯ ಗ್ರಾಮಗಳನ್ನು ರಚಿಸಿ, ಸರ್ಕಾರದ ಸೌಲಭ್ಯಗಳ ಪಡೆಯಲು ಅನುಕೂಲ ಕಲ್ಪಿಸುವ ಕಾರ್ಯಕ್ರಮವಾಗಿದ್ದು, ಈ ಮೂಲಕ ಸಾಮಾಜಿಕ ಪರಿವರ್ತನೆಯ ಚಿಂತನೆಯನ್ನು ಸಾಕಾರಗೊಳಿಸಲಾಗಿದೆ.
ಪ್ರಧಾನಿ ಮೋದಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಚಿಂತನೆಯೇ ಈ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದೆ. ಕೆಲವರು ಸಾಮಾಜಿಕ ನ್ಯಾಯ ಎಂದು ದೊಡ್ಡ ಭಾಷಣ ಮಾಡುತ್ತಾರೆ. ಯಾರ ಬದುಕನ್ನು ಪರಿವರ್ತನೆ ಮಾಡಿದಿರಿ? ಈ ಜನಾಂಗದ ಹೆಸರು ಹೇಳಿ ವೋಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಿಕೊಂಡು ಮುಂದೆ ಹೋದಿದೆ. ಡಬಲ್ ಇಂಜಿನ್ ಸರ್ಕಾರ ಕೇವಲ ಭಾಷಣ ಮಾತ್ರವಲ್ಲ, ಪರಿವರ್ತನೆ ಮಾಡಿದ್ದೇವೆ. ಸಾಮಾಜಿಕ ನ್ಯಾಯದ ಹರಿಕಾರರು ನರೇಂದ್ರ ಮೋದಿಯವರು, ಅವರ ಮೂಲಕ ಹಕ್ಕು ಪತ್ರ ಸಿಗುತ್ತಿರುವುದು ಜನಾಂಗಕ್ಕೆ ದೊಡ್ಡ ಗೌರವ ತಂದಿದೆ.
ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ನೀಡಿ, ಪ್ರದೇಶವನ್ನು ಕಂದಾಯ ಗ್ರಾಮಗಳೆಂದು ಘೋಷಿಸಿರುವುದರಿಂದ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸುವ ಮೂಲಕ ರಾಜ್ಯದಲ್ಲಿ ಕಂದಾಯ ಕ್ರಾಂತಿಯಾಗುತ್ತಿದೆ. ಸಾಮಾಜಿಕ ಭದ್ರತೆ ಪಿಂಚಣಿ, ಭೂದಾಖಲೆಗಳು, ಗ್ರಾಮ ಒನ್ ,ಪ್ರಮಾಣ ಪತ್ರಗಳು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸವನ್ನು ಡಬಲ್ ಇಂಜಿನ್ ಸರ್ಕಾರ ಮಾಡುತ್ತಿದೆ. ಮಧ್ಯವರ್ತಿಗಳ ಹಾವಳಿಯನ್ನು ನೀಗಿಸುವ ಡಿಜಿಟಲ್ ಕ್ರಾಂತಿಯನ್ನು ಸಾಕಾರಗೊಳಿಸಲಾಗಿದೆ ಎಂದರು.
ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿ
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಮಾನ್ಯತೆ ದೊರೆಯುತ್ತಿದೆ. ಭಾರತ ದೇಶದಲ್ಲಿ ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ ಒದಗಿಸಿ, ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿಯಾಗುತ್ತಿದೆ. ಎಸ್.ಸಿ , ಎಸ್.ಟಿ, ಹಿಂದುಳಿದ ವರ್ಗಗಳ ಶಿಕ್ಷಣ, ಉದ್ಯೋಗ, ಸಬಲೀಕರಣವನ್ನು ಸಾಧಿಸುವುದು ಸರ್ಕಾರದ ಬದ್ಧತೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಡಿಬಿಟಿ ಮೂಲಕ ಪಿಂಚಣಿ ನೀಡುವುದರ ಮೂಲಕ ಮಧ್ಯವರ್ತಿಗಳ ಹಾವಳಿ ನಿರ್ಮೂಲನೆಯಾಗಿದೆ. ಡಿಜಿಟಲ್ ಕ್ರಾಂತಿಯಿಂದ ಇದು ಸಾಧ್ಯವಾಗಿದೆ. ಇ ಆಡಳಿತವನ್ನು ದೇಶದಲ್ಲಿ ತಂದ ಹರಿಕಾರರು ಪ್ರಧಾನಿ ನರೇಂದ್ರ ಮೋದಿ. ಎಸ್‌ಸಿಎಸ್‌ಟಿ ಸಮುದಾಯಕ್ಕೆ 75 ಯೂನಿಟ್ ನೀಡುತ್ತಿದ್ದೇವೆ, ಮಕ್ಕಳಿಗೆ ಹಾಸ್ಟೆಲ್, ಮನೆಗೆ ಹಣ, ಮೆಗಾ ಹಾಸ್ಟೆಲ್ ನಿರ್ಮಾಣ ಮಾಡಿದ್ದೇವೆ, ಹೋಬಳಿಗಳಲ್ಲಿಯೂ ಹಾಸ್ಟೆಲ್ ಇವೆ, ಅಂಬೇಡ್ಕರ್ ಹಾಸ್ಟೆಲ್‌ಗಳಿವೆ, ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ಎಸ್‌ಸಿಎಸ್‌ಟಿ ಸಮುದಾಯಕ್ಕೆ ಭರವಸೆ ತಂದಿದ್ದು ನರೇಂದ್ರ ಮೋದಿಯವರ ಡಬಲ್ ಇಂಜಿನ್ ಸರ್ಕಾರ.
ಮುಂದಿನ ದಿನಗಳು ಭಾರತದ ದಿನಗಳು. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಆಗಬೇಕು. ಇಲ್ಲಿದೆ ಸಾಮಾಜಿಕ ನ್ಯಾಯ, ಬದ್ಧತೆ ಹಾಗೂ ಪರಿವರ್ತನೆ. ಮಹಿಳೆಯರ ಹೆಸರಿನಲ್ಲಿ ಹಕ್ಕುಪತ್ರ ನೀಡಿದ್ದೇವೆ, ನೋಂದಣಿ ಶುಲ್ಕವನ್ನು ಉಚಿತ ಮಾಡಿದ್ದೇವೆ.
ಇದನ್ನೂ ಓದಿ | BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಸಾಕ್ಷ್ಯಚಿತ್ರ, ಕೇಂದ್ರದ ಆಕ್ರೋಶ, ಯುಟ್ಯೂಬ್‌ನಿಂದ ಡಿಲೀಟ್