ನವ ದೆಹಲಿ: ನಾನು ನಿಮ್ಮಲ್ಲೊಂದು ಸಂಗತಿಯನ್ನು ಕೇಳುವೆ. ನೀವು ಎಂಟ್ರೆಪ್ರೆನ್ಯೂರ್ (Entrepreneurs) ಎಂಬುದನ್ನು ಕೇಳಿರಬಹುದು. ಆದರೆ ಮಿಲೆಟ್‌ಪ್ರೆನ್ಯೂರ್ (Milletpreneur) ಬಗ್ಗೆ ಕೇಳಿದ್ದೀರಾ? ಒಡಿಶಾ, ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಇವತ್ತು ಮಿಲೆಟ್‌ಪ್ರೆನ್ಯೂರ್‌ಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 97ನೇ ಮನ್ ಕಿ ಬಾತ್ (Mann Ki Baat) ಬಾನುಲಿ ಕಾರ್ಯಕ್ರಮದಲ್ಲಿ ತಿಳಿಸಿದರು. ಹಾಗೂ ಉದಾಹರಣೆಯಾಗಿ ಕರ್ನಾಟಕದ ಕಲಬುರಗಿಯ ತಡಕಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಳಂದ ಭೂತಾಯಿ (Aland Bhutai millets farmers producer company limited) ಕಿರುಧಾನ್ಯ ರೈತರ ಉತ್ಪಾದಕ ಕಂಪನಿಯನ್ನು ಪ್ರಸ್ತಾಪಿಸಿದರು. ಈ ಸಂಸ್ಥೆಯು ಕಿರುಧಾನ್ಯಗಳಿಂದ ಲಡ್ಡು, ಬಿಸ್ಕತ್, ಕುರುಕುಲು ತಿಂಡಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು, ಜನಪ್ರಿಯತೆ ಗಳಿಸುತ್ತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಿರುಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುವ ರೈತರ ಕಂಪನಿ
ಆಳಂದ ಭೂತಾಯಿ ಕಿರುಧಾನ್ಯ ರೈತ ಉತ್ಪಾದಕ ಕಂಪನಿಯು ಕಳೆದ ವರ್ಷದಿಂದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚ್ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿಯ ತಡಕಲ್‌ನಲ್ಲಿರುವ ಆಳಂದ ಭೂತಾಯಿ ಮಿಲ್ಲೆಟ್ಸ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿಯು ಸಿರಿಧಾನ್ಯಗಳಿಂದ ಲಡ್ಡು, ಕುರುಕಲು ತಿಂಡಿಗಳನ್ನು ತಯಾರಿಸಿ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಮಾರಾಟ ಮಾಡುತ್ತದೆ. 500 ಜನ ಷೇರುದಾರರು ಕಂಪನಿಯಲ್ಲಿ ಇದ್ದಾರೆ. ಸಿರಿ ಧಾನ್ಯದ ಉತ್ಪನ್ನಗಳಿಗೆ ಅಪಾರ ಬೇಡಿಕೆ ಇದೆ. ನೇರವಾಗಿ ಸಿರಿ ಧಾನ್ಯ ಮಾರಾಟ ಮಾಡಿದಾಗ ಕ್ವಿಂಟಾಲ್‌ಗೆ 2-2.5 ಸಾವಿರ ರೂ. ಆದಾಯ ಸಿಗಬಹುದು. ಆದರೆ ಒಂದು ಕ್ವಿಂಟಾಲ್ ಸಿರಿ ಧಾನ್ಯದ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟದಿಂದ 10 ಸಾವಿರ ರೂ. ಆದಾಯ ಗಳಿಸಬಹುದು ಎಂದು ವಿಸ್ತಾರನ್ಯೂಸ್‌ಗೆ ಸಂಸ್ಥೆಯ ಸಿಇಒ ರಕ್ಷಿತಾ ತಿಳಿಸಿದ್ದಾರೆ.
ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದಕ್ಕೆ ಸಂತಸ: ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ನಮ್ಮ ಆಳಂದ ಭೂತಾಯಿ ರೈತರ ಕಂಪನಿ ಬಗ್ಗೆ ಪ್ರಸ್ತಾಪ ಮಾಡಿ ಪ್ರೋತ್ಸಾಹಿಸಿರುವುದನ್ನು ಕೇಳಿ ತುಂಬ ಸಂತಸವಾಯಿತು. ನಮಗೆ ಹೆಮ್ಮೆ ಎನ್ನಿಸುತ್ತಿದೆ ಎಂದು ಸಿಇಒ ರಕ್ಷಿತಾ ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದರು.