ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರಿನಲ್ಲಿ ಬಿಲ್ಲವ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಕೋರಿದ್ದರೆ, ಕರ್ನಾಟಕ ಸರ್ಕಾರ ಕಾಟಾಚಾರಕ್ಕೆ ಕೋಶ ರಚನೆ ಮಾಡಿದೆ ಎಂದು ಕಲಬುರಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಬೇರೆ ಸಮುದಾಯಗಳು ನಿಗಮವನ್ನು ಕೇಳಿದ್ದವು. ಅವರಿಗೆ ನಿಗಮ ನೀಡಿದರು. ನಾವು ನಿಗಮ ಕೇಳಿದೆವು. ಬಿಲ್ಲವ ಸಮುದಾಯದವರೇ ಅದಕ್ಕೆ ಅಧ್ಯಕ್ಷರಾಗಬೇಕು, ಬಿಲ್ಲವ ಸಮುದಾಯದವರೇ ಅದಕ್ಕೆ ನಿರ್ದೇಶಕರಾಗಬೇಕು, 500 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದೆವು.
ಆದರೆ ಈಗ ಕಾಟಾಚಾರಕ್ಕೆ ಕೋಶವನ್ನು ರಚನೆ ಮಾಡಲಾಗಿದೆ. ಇದರಲ್ಲಿ ಒಬ್ಬ ನಿವೃತ್ತ ನ್ಯಾಯಾಧೀಶ ಅಥವಾ ನಿವೃತ್ತ ಅಧಿಕಾರಿ ಇರುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಬಿಲ್ಲವ ಸಮುದಾಯಕ್ಕೆ ದ್ರೋಹ ಬಗೆಯುವ ಸರ್ಕಾರದ ನಡೆಯನ್ನು ಖಂಡಿಸುತ್ತೇವೆ. ನಮಗೆ ನಾರಾಯಣ ಗುರು ಅಭಿವೃದ್ಧಿ ಕೋಶದ ಅವಶ್ಯಕತೆ ಇಲ್ಲ.
ನಮ್ಮ ಸಮುದಾಯದ ಇಬ್ಬರು ಮಂತ್ರಿಗಳು ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮೌನವೇ ಇದಕ್ಕೆ ಕಾರಣ ಎಂದರು. ಕೋಶ ರಚನೆ ಕುರಿತು ಸರ್ಕಾರ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹರಿದು ಹಾಕಿದರು.
ಇದನ್ನೂ ಓದಿ | ರಾಜ್ಯದ ಬಿಲ್ಲವ, ಈಡಿಗ ಸಮುದಾಯಗಳಿಗೆ ಶೀಘ್ರವೇ ಬೊಮ್ಮಾಯಿ ಸಿಹಿ ಸುದ್ದಿ, ಏನದು?