Site icon Vistara News

Kalyana Karnataka : ಕಲ್ಯಾಣ ಕರ್ನಾಟಕದ ಶಿಕ್ಷಣಕ್ಕಾಗಿ 750 ಕೋಟಿ ರೂ.: ಸಿಎಂ ಸಿದ್ದರಾಮಯ್ಯ

CM Siddaramaiah in Kalaburagi

ಕಲಬುರಗಿ: ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶ ಅಭಿವೃದ್ಧಿ ಮಂಡಳಿಗೆ ಜಿಲ್ಲೆಯವರೇ ಆದ ಡಾ.ಅಜಯ್ ಸಿಂಗ್ (Dr Ajay Singh) ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ರಚಿಸಲಾಗಿದೆ. ಈ ಭಾಗದ ಜಿಲ್ಲೆಗಳ ಶಿಕ್ಷಣಕ್ಕಾಗಿ (Education Sector) 750 ಕೋಟಿ ರೂಪಾಯಿಯನ್ನು ಮೀಸಲಿಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ-2023 ಅಂಗವಾಗಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಯಾಗಿರುವ ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಐದು ಗ್ಯಾರಂಟಿ ಯೋಜನೆಗಳ (Congress Guarantee Scheme) ಬಗ್ಗೆ ಮಾಹಿತಿ ನೀಡಿದರು.

ಈಗಾಗಲೇ ಡಾ. ಅಜಯ್ ಸಿಂಗ್ ಅವರು ಪ್ರಥಮ ಮಂಡಳಿ ಸಭೆ ನಡೆಸಿ ಪ್ರಸಕ್ತ ಸಾಲಿಗೆ 3,000 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸುತ್ತಿದ್ದಾರೆ. ಜತೆಗೆ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲು ಶೇ.25ರಷ್ಟು (750 ಕೋಟಿ ರೂ.) ಅನುದಾನ ಶಿಕ್ಷಣಕ್ಕೆ ಮೀಸಲಿಟ್ಟಿದ್ದು ಈ ಭಾಗದಲ್ಲಿ ಅಕ್ಷರ ಕ್ರಾಂತಿಗೆ ನಾಂದಿ ಹಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

5,000 ಕೋಟಿ ರೂ. ವೆಚ್ಚದ ಕಾಮಗಾರಿ

ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ 371(ಜೆ) ತಿದ್ದುಪಡಿಯನ್ವಯ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ ತಿಳಿಸಿದಂತೆ 5,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: Weather Report : ಗಣೇಶ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ; ಇನ್ನೊಂದು ವಾರ ಅಲರ್ಟ್‌

ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಗುಣಮಟ್ಟ (Quality of Education) ಕಾಪಾಡಲು ಮತ್ತು ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯು “ಅಕ್ಷರ ಆವಿಷ್ಕಾರ” ಯೋಜನೆ ರೂಪಿಸಿದೆ. ಇದರಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರ್ಕಾರದಿಂದ 16,041 ಅತಿಥಿ ಶಿಕ್ಷಕರ ಭರ್ತಿ ಹೊರತಾಗಿ ಇನ್ನು ಖಾಲಿ ಉಳಿದ ಪ್ರಾಥಮಿಕ ಶಾಲೆ-2,566 ಮತ್ತು ಪ್ರೌಢ ಶಾಲೆ-52 ಸೇರಿದಂತೆ ಒಟ್ಟು 2,618 ಶಿಕ್ಷಕರ ಹುದ್ದೆಗಳಿಗೆ “ಅಕ್ಷರ ಮಿತ್ರ” ಪದನಾಮದಡಿ ಇದೇ ತಿಂಗಳ ಅಂತ್ಯಕ್ಕೆ ಭರ್ತಿ ಮಾಡಲು ಈಗಾಗಲೇ ಮಂಜೂರಾತಿ ನೀಡಿ 18.34 ಕೋಟಿ ರೂ. ಅನುದಾನ ನೀಡಿದೆ. ಇದು ಈ ಸರ್ಕಾರಕ್ಕೆ ಪ್ರದೇಶದಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ನೀಡುತ್ತಿರುವ ಆದ್ಯತೆಗೆ ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇನ್ನು ಸಂವಿಧಾನದ 371(ಜೆ) ಕಲಂ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ಅನುಷ್ಠಾನಕ್ಕಾಗಿ ಹೊರಡಿಸಲಾದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ನುಡಿದಂತೆ ನಡೆಯುವ ಸರ್ಕಾರ

ಸಮಾನತೆಯ ಹೊಸ ಹಾದಿಯಲ್ಲಿ ಸಾಗಿದ ಬುದ್ಧ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಅಕ್ಷರಶಃ ಅಳವಡಿಸಿಕೊಂಡಿರುವ ನಮ್ಮ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ದಿನವೇ ಚುನಾವಣೆ ಪೂರ್ವ ನೀಡಿದ ಭರವಸೆಯಂತೆ “ಪಂಚ ಗ್ಯಾರಂಟಿ” ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿ 100 ದಿನಗಳ ಅವಧಿಯಲ್ಲಿ ಪ್ರಮುಖ 4 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಇದು “ನುಡಿದಂತೆ ನಡೆಯುವ ಸರ್ಕಾರ” ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಯೂನಿವರ್ಸಲ್‌ ಬೇಸಿಕ್‌ ಇನ್‌ಕಮ್

ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳಿಂದ ತತ್ತರಿಸಿದ ನಾಡಿನ ಜನತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ Univarsal Basic Income ಎಂಬ ಹೊಸ ಪರಿಕಲ್ಪನೆಯಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜನಸಾಮಾನ್ಯರ ಖರೀದಿಯ ಶಕ್ತಿ ಹೆಚ್ಚಾದರೆ ಆರ್ಥಿಕತೆಯು ಉತ್ತಮಗೊಳ್ಳುತ್ತದೆ. ಇದನ್ನು ಈಗಾಗಲೇ ಜಾರಿಗೊಂಡಿರುವ ನಮ್ಮ ಗ್ಯಾರಂಟಿ ಯೋಜನೆಗಳು ಸಾಬೀತುಪಡಿಸುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯಾದ್ಯಂತ 4 ಸಾರಿಗೆ ನಿಗಮದ ಬಸ್ಸುಗಳಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಪ್ರಯಾಣ ಒದಗಿಸುವ “ಶಕ್ತಿ” ಯೋಜನೆಯಡಿ ಪ್ರತಿ ದಿನ 50 ರಿಂದ 60 ಲಕ್ಷ ಜನ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು, ವಾರ್ಷಿಕವಾಗಿ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ. ವೆಚ್ಚ ಮಾಡಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 5ರ ವರೆಗೆ ದಿನನಿತ್ಯ 6.75 ಲಕ್ಷದಂತೆ 587.36 ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಪ್ರಯಾಣದ ವೆಚ್ಚದ ಪೈಕಿ 93.48 ಕೋಟಿ ರೂ. ನಿಗಮಕ್ಕೆ ಸರ್ಕಾರ ಭರಿಸಿದೆ. ಇದರಿಂದ ಕೆ.ಕೆ.ಆರ್.ಟಿ.ಸಿ. ನಿಗಮಕ್ಕೂ “ಆರ್ಥಿಕ ಶಕ್ತಿ” ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಹಸಿವು ಮುಕ್ತ ಕರ್ನಾಟಕಕ್ಕಾಗಿ “ಅನ್ನ ಭಾಗ್ಯ” ಯೋಜನೆಯಡಿ 10 ಕೆ.ಜಿ. ಆಹಾರ ಧಾನ್ಯ ನೀಡಲು ಘೋಷಿಸಲಾಗಿದ್ದು, ರಾಜ್ಯದ 4.42 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಇದಕ್ಕಾಗಿ ವಾರ್ಷಿಕ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಅಕ್ಕಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ ಕಾರಣ, ಜುಲೈ-2023 ತಿಂಗಳಿನಿಂದಲೇ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆ.ಜಿ.ಗೆ 34 ರೂ. ಗಳಂತೆ ತಲಾ ಸದಸ್ಯರಿಗೆ 170 ರೂ. ಗಳನ್ನು ಡಿ.ಬಿ.ಟಿ. ಮೂಲಕ ಹಣ ಪಾವತಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023 ತಿಂಗಳಿಗೆ 20,44,691 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 76,54,686 ಫಲಾನುಭವಿಗಳು ಇದಕ್ಕಾಗಿ ಅರ್ಹರಿದ್ದು, 124.92 ಕೋಟಿ ರೂ.ಗಳ ಪೈಕಿ 119.50 ಕೋಟಿ ರೂ. ಪಾವತಿಸಿದೆ. ಉಳಿದವರಿಗೆ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಈ ವರೆಗೆ 1.04 ಕೋಟಿ ಕುಟುಂಬಗಳ 3.70 ಕೋಟಿ ಸದಸ್ಯರಿಗೆ 606 ಕೋಟಿಗೂ ಹೆಚ್ಚು ರೂ. ಗಳನ್ನು ನೇರ ನಗದು ವ್ಯವಸ್ಥೆಯ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

“ಉಚಿತ ಬೆಳಕು, ಸುಸ್ಥಿರ ಬದುಕು” ಘೋಷವಾಕ್ಯದ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ “ಗೃಹ ಜ್ಯೋತಿ” ಯೋಜನೆಯಡಿ ರಾಜ್ಯಾದ್ಯಂತ 2.14 ಕೋಟಿ ವಿದ್ಯುತ್ ಗ್ರಾಹಕರು ಲಾಭ ಪಡೆಯಲಿದ್ದು, ಆಗಸ್ಟ್ 28ರ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ 20,38,245 ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 18,80,286 ಗ್ರಾಹಕರು ಯೋಜನೆಯ ಲಾಭ ಪಡೆದಿದ್ದಾರೆ. ಒಟ್ಟು ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ 1.31 ಕೋಟಿ ಗ್ರಾಹಕರು ಶೂನ್ಯ ವಿದ್ಯುತ್ ಬಿಲ್ ಸೌಲಭ್ಯವನ್ನು ಪಡೆದಿರುತ್ತಾರೆ. ಇದಕ್ಕಾಗಿ ಎಲ್ಲ ಎಸ್ಕಾಂಗಳಿಗೆ ಒಟ್ಟು 661 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ 30 ಸಾವಿರ ಕೋಟಿ

ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಒದಗಿಸುವ “ಗೃಹ ಲಕ್ಷ್ಮಿ” ಯೋಜನೆಯಡಿ ರಾಜ್ಯದ 1.28 ಕೋಟಿ ಜನ ಮಹಿಳೆಯರು ಇದರ ಫಲಾನುಭವಿಗಳಾಗಲಿದ್ದಾರೆ. ವಾರ್ಷಿಕವಾಗಿ ಇದಕ್ಕೆ ಸರ್ಕಾರವು 30 ಸಾವಿರ ಕೋಟಿ ರೂ. ವೆಚ್ಚ ಮಾಡಲಿದೆ. ಈ ಯೋಜನೆಯಡಿ ಕಲಬುರಗಿ ವಿಭಾಗದ 7 ಜಿಲ್ಲೆಗಳಲ್ಲಿ ಆಗಸ್ಟ್-2023ರ ಮಾಹೆಯ ಅಂತ್ಯದವರೆಗೆ ನೊಂದಾಯಿಸಿದ 20,89,653 ಫಲಾನುಭವಿಗಳ ಪೈಕಿ 19,44,015 ಮಹಿಳೆಯರಿಗೆ ತಲಾ 2,000 ರೂ. ಹಣ ಡಿ.ಬಿ.ಟಿ. ಮೂಲಕ ಪಾವತಿಸಿದೆ. ಇನ್ನುಳಿದವರಿಗೆ ಹಣ ಪಾವತಿ ಪ್ರಗತಿಯಲ್ಲಿದೆ. ರಾಜ್ಯದಲ್ಲಿ ಒಟ್ಟು ಈಗಾಗಲೇ 1.13 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ. ಕುಟುಂಬಗಳ ಯಜಮಾನಿಯರಿಗೆ ಏಕಕಾಲದಲ್ಲಿ ತಲಾ 2000 ರೂಗಳಂತೆ ಈವರೆಗೂ ಒಟ್ಟು ರೂ. 1,436 ಕೋಟಿಗಳನ್ನು ಜಮೆ ಮಾಡಲಾಗಿರುತ್ತದೆ. ಇದೊಂದೇ ಯೋಜನೆಗೆ ನಾವು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಯುವಕರಿಗಾಗಿ ಯುವ ನಿಧಿ

2022-23ನೇ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೋಮಾ ಪದವಿ ಉತ್ತೀರ್ಣರಾದ ನಿರುದ್ಯೋಗಿಗಳಿಗೆ ಮಾಸಿಕ 1,500 ಮತ್ತು ಪದವಿ ತೇರ್ಗಡೆಯಾದ ನಿರುದ್ಯೋಗಿಗಳಿಗೆ ಮಾಸಿಕ 3,000 ಭತ್ಯೆ ನೀಡುವ “ಯುವ ನಿಧಿ” ಯೋಜನೆ ಈ ವರ್ಷದ ಅಂತ್ಯದೊಳಗೆ ಜಾರಿಗೆ ತರಲಾಗುತ್ತದೆ. ಜಿಲ್ಲೆಯವರೇ ಆಗಿರುವ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗ್ಯಾರಂಟಿಯಿಂದ ಪ್ರತಿ ಕುಟಂಬಕ್ಕೆ ವಾರ್ಷಿಕ 60 ಸಾವಿರ ರೂ.

ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 48 ರಿಂದ 60 ಸಾವಿರ ರೂ. ಸೌಲಭ್ಯ ಲಭಿಸಲಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಸ್ಥಿರತೆ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿಗೆ ಮತ್ತು “ಸರ್ವೋದಯ ಸಮಾಜ” ನಿರ್ಮಾಣಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಪೂರಕವಾಗಿದೆ. ಜಾತಿ-ಧರ್ಮ ರಹಿತವಾದ ಸರ್ವ ಜನಾಂಗದ ಅಭಿವೃದ್ಧಿಯೇ ಈ ಜನಪರ ಸರ್ಕಾರದ ಧ್ಯೇಯವಾಗಿದ್ದು, ಇದುವೇ ಕರ್ನಾಟಕ ಮಾದರಿ ಆಡಳಿತದ ಪರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕೂಸಿನ ಮನೆಗೆ ಚಾಲನೆ

ರಾಜ್ಯಾದ್ಯಂತ 4,000 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ “ಕೂಸಿನ ಮನೆ’ ಶಿಶುಪಾಲನಾ ಕೇಂದ್ರಗಳು ಪ್ರಾರಂಭಿಸಲಾಗುತ್ತಿದೆ. ಇದಕ್ಕಾಗಿ ಈ ಪ್ರದೇಶದಲ್ಲಿ 881 ಕೇಂದ್ರ ಸ್ಥಾಪನೆಗೆ ಸ್ಥಳ ಗುರುತಿಸಿದೆ. ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಪಡೆದ “ಕೇರ್ ಟೇಕರ್” ಸಹ ಇರಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ‌ ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ ಪ್ರಸಕ್ತ ಆಯವ್ಯಯದಲ್ಲಿ 100 ಕೋಟಿ ರೂ. ಅನುದಾನ ಒದಗಿಸಿದೆ. ತಲಾ 25 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಇದುವರೆಗೆ 7 ಜಿಲ್ಲೆಗಳಲ್ಲಿ 218 ಗ್ರಾಮಗಳಲ್ಲಿ ಸಮುದಾಯ ಶೌಚಾಲಯ ಸಂಕೀರ್ಣ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Kalyana Karnataka : ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ; ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, .ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ. ಅಜಯ್ ಸಿಂಗ್ ಸೇರಿದಂತೆ ಜಿಲ್ಲೆಯ ಇತರೆ ಶಾಸಕರು ಜತೆಗಿದ್ದರು.

Exit mobile version