ನವ ದೆಹಲಿ: ಕಿತ್ತೂರು ಕರ್ನಾಟಕ ಭಾಗದ ಜನತೆ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ, ಕುಡಿಯುವ ನೀರಿನ ಯೋಜನೆಯಾದ ಕಳಸಾ ಬಂಡೂರಿ (Kalasa Banduri) ನಾಲಾ ತಿರುವು ಯೋಜನೆಯ (ಮಹದಾಯಿ) ಅನುಷ್ಠಾನಕ್ಕೆ ಅಗತ್ಯವಾಗಿದ್ದ ವಿಸ್ತೃತ ಯೋಜನಾ ವರದಿ(ಡಿಪಿಆರ್)ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ.
ಈ ವಿಷಯವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪ್ರಕಟಿಸಿದ್ದಾರೆ. ಮಹದಾಯಿ ನದಿಯಿಂದ 3.90 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಉದ್ದೇಶಿತ ಈ ಯೋಜನೆಯ ಜಾರಿಗೆ ಇದ್ದ ಅಡೆ-ತಡೆಗಳು ಈಗ ದೂರವಾದಂತಾಗಿದೆ. “ಡಿಪಿಆರ್‌ಗೆ ಅನುಮತಿ ಸಿಗುವುದೇ ಇಲ್ಲ ಎಂಬ ವಾತಾವರಣ ಸೃಷ್ಟಿಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ವಿಶೇಷವಾದ ಆಸಕ್ತಿ ತೋರಿ ಇದಕ್ಕೆ ಅನುಮತಿ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ಪ್ರಲ್ಹಾದ್ ಜೋಷಿ ಹೇಳಿದ್ದಾರೆ.
ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಚಿವ ಪ್ರಲ್ಹಾದ್ ಜೋಷಿ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ ಸೂಕ್ತ ರೀತಿಯ ಡಿಪಿಆರ್ ಸಿದ್ಧಪಡಿಸಿ, ಈ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೂ ಸಚಿವ ಜೋಷಿ ಅಭಿನಂದನೆ ಸಲ್ಲಿಸಿದ್ದಾರೆ.
ಕುಡಿಯುವ ನೀರಿನ ಈ ಯೋಜನೆಯನ್ನು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅನಾವಶ್ಯಕವಾಗಿ ನ್ಯಾಯಾಧೀಕರಣಕ್ಕೆ ಒಪ್ಪಿಸಿತ್ತು. ಈ ಹಿಂದೆ ನ್ಯಾಯಾಧೀಕರಣದ ತೀರ್ಪು ಬಂದಿದ್ದು, ಕೇಂದ್ರ ಸರ್ಕಾರ ಈ ಸಂಬಂಧ ಅಧಿಸೂಚನೆ ಕೂಡ ಹೊರಡಿಸಿದೆ. ಇದೀಗ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗದ ಅನುಮತಿ ನೀಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಷಿ ವಿವರಿಸಿದ್ದಾರೆ.
ಕಳೆದ ಜುಲೈನಲ್ಲಿ ರಾಜ್ಯ ಸರಕಾರ ಸಲ್ಲಿಸಿದ್ದ 1,300 ಕೋಟಿ ರೂಪಾಯಿ ಮೊತ್ತದ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ(ಡಿಪಿಆರ್) ಅಂತಾರಾಜ್ಯ ನದಿ ನೀರು ವಿವಾದ ಪ್ರಾಧಿಕಾರದ ಅನುಮೋದನೆ ಈಗಾಗಲೇ ದೊರಕಿದೆ. ಕೇಂದ್ರ ಜಲಶಕ್ತಿ ಸಚಿವಾಲಯವೂ ಅನುಮತಿ ನೀಡಿದೆ. ಈಗ ಕೇಂದ್ರ ಜಲ ಆಯೋಗವೂ ಅನುಮತಿ ನೀಡಿದೆ. ಇದರ ಸಮ್ಮತಿ ಪತ್ರ ರಾಜ್ಯ ಸರ್ಕಾರದ ಕೈಸೇರುತ್ತಿದ್ದಂತೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ರಾಜ್ಯ ಸರಕಾರ ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ. ಈ ಉದ್ದೇಶಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 1,000 ಕೋಟಿ ರೂ. ಹಣ ಮೀಸಲಿಡಲಾಗಿದೆ.
ಇದನ್ನೂ ಓದಿ | CM Bommai | ಕೇಂದ್ರ ಜಲಶಕ್ತಿ ಸಚಿವರ ಜತೆ ಸಿಎಂ ಬೊಮ್ಮಾಯಿ ಚರ್ಚೆ: ರಾಜ್ಯದ ಯೋಜನೆಗಳಿಗೆ ಶೀಘ್ರ ಅನುಮತಿ ಕೋರಿಕೆ