ಉಡುಪಿ: ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ. ಅವರಿಗೆ, ನಿಯಮಕ್ಕೆ ವಿರುದ್ಧವಾಗಿ ಹಿಜಾಬ್ ಧರಿಸಿದ್ದು ತಪ್ಪಾಗಲಿಲ್ಲ, ಆದರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ ಎಂದು ಉಡುಪಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ ಭರಿತ ಭಾಷಣ ಮಾಡಿದ್ದಾರೆ.
ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಹಿಜಾಬ್ ವಿವಾದದ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಉಡುಪಿಯಲ್ಲಿ ಭಾಷಣ ಮಾಡಿದ್ದಾರೆ. ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಹಿಜಾಬ್ ವಿವಾದದ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಇದನ್ನು ಓದಿ| ನಾಳೆ ಪಿಯು ಕಾಲೇಜು ಆರಂಭ: ಹಿಜಾಬ್ ವಿವಾದ ಮತ್ತೆ ಶುರು?
ಹಿಜಾಬ್ ಕೇವಲ ಒಂದು ಬಟ್ಟೆ. ಅದು ಹೋರಾಟವೇ ಅಲ್ಲ. ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿವಾದ ಸುದ್ದಿಯಾಗಿತ್ತು. ಆಕ್ಷನ್‌ಗೆ ರಿಯಾಕ್ಷನ್ ತೋರಿಸದೇ ಇದ್ದಿದ್ದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೀ ಈ ವಿವಾದ ಸುದ್ದಿಯಾಯಿತು. ಇದರಿಂದಾಗಿ ನಮ್ಮ ಹಿಂದೂ ಸಮಾಜ ಸೋಲುವಂತಾಯಿತು. ಹೊಡೆದರೂ ಬಡಿದರೂ ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕಂತೆ. ಇನ್ನು ಮುಂದೆ ಹಿಂದೂಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹಿಂದೂ ಸಮಾಜ ರಿಯಾಕ್ಷನ್ ತೋರಿಸುವ ಅಗತ್ಯ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್- ಪ್ರಗತಿಪರರ ವಿರುದ್ಧ ಕಲ್ಲಡ್ಕ ಪ್ರಭಾಕರ್ ಭಟ್ ವಾಗ್ದಾಳಿ ನಡೆಸಿದ್ದಾರೆ.
ಈ ಹಿಜಾಬ್ ವಿವಾದದ ಮೂಲಕ ದೇಶ ವಿಭಜನೆ ಮಾಡುವ ಹುನ್ನಾರ ಇದೆ. ಜಗತ್ತಿನ ಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂ ಧರ್ಮದಲ್ಲಿ ಮಾತ್ರ. ನಾವು ಹಿಂದೂಗಳು ದೇವಸ್ಥಾನಗಳ ಬಳಿ ಸರ್ವಧರ್ಮ ಸಮ್ಮೇಳನ ಮಾಡಿ ಬೇರೆ ಧರ್ಮದವರನ್ನ ಕರೆದು ಮಾತನಾಡಲು ಅವಕಾಶ ನೀಡುತ್ತೇವೆ. ಅವರು ನಮಗೆ ಬೋಧನೆ ಮಾಡುವ ಅವಶ್ಯಕತೆ ಇಲ್ಲ. ಸರ್ವಧರ್ಮ ಸಮ್ಮೇಳನದಲ್ಲಿ ಮುಸಾಲ್ಮಾನರು ಭಾಗಿಯಾಗುವುದು ನಾಚಿಕೆಗೇಡು ಎಂದು ಕಲ್ಲಡ್ಕ ಪ್ರಭಾಕರ ಭಟ್ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ|ಹಿಜಾಬ್ ಕಳಚಿ ತರಗತಿಗೆ ಹಾಜರಿ: ಪಟ್ಟು ಸಡಿಲಿಸಿದ ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿನಿಯರು
ಒಂದು ದೇವರನ್ನು ಪೂಜೆ ಮಾಡಿ ಅಂತ ಹೇಳುವುದು ಧರ್ಮವಾಗಲ್ಲ. ಒಂದೇ ದೇವರು ಎನ್ನುವ ಕ್ರೈಸ್ತ ಮತ್ತು ಇಸ್ಲಾಂ ಧರ್ಮವಾಗಲು ಸಾಧ್ಯವಿಲ್ಲ. ನಿಯಮ ಪಾಲಿಸದವರನ್ನು ಕತ್ತರಿಸುವ ಮತ, ಧರ್ಮವಾಗಲು ಸಾಧ್ಯವಿಲ್ಲ. ಒಪ್ಪಿಕೋ ಇಲ್ಲವೇ ಮತಾಂತರ ಆಗು, ಇಲ್ಲದಿದ್ದರೆ ಓಡಿಹೋಗು ಎಂಬ ನಿಯಮ ಇರುವ ಧರ್ಮ ಧರ್ಮವೇ ಅಲ್ಲ ಎಂದು ಕಿಡಿಕಾರಿದ್ದಾರೆ.