ಬೆಂಗಳೂರು: ನಾಡಿನ ಖ್ಯಾತ ಸಾಹಿತಿ, ನಾಡೋಜ ಪ್ರೊ. ಕಮಲಾ ಹಂಪನಾ (Kamala Hampana) (89) ಅವರು ಇಂದು (ಜೂನ್ 22) ನಿಧನ ಹೊಂದಿದರು. ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅನೇಕ ಬಂಧು ಮಿತ್ರರು, ಅಪಾರ ಸಾಹಿತ್ಯಾಭಿಮಾನಿಗಳನ್ನು ಅವರು ಅಗಲಿದ್ದಾರೆ. ಸಂಜೆಯ ತನಕ ರಾಜಾಜಿನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
60 ವರ್ಷಗಳ ಕಾಲ ಸಾಹಿತ್ಯ ಕೃಷಿ
ತಮ್ಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿರುವ ಪ್ರೊ. ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿ. ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕರ್ನಾಟಕ ಸರ್ಕಾರ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ ಲಭಿಸಿದೆ.
ಡಾ.ಕಮಲಾ ಹಂಪನಾ ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಸುಮಾರು 60ಕ್ಕೂ ಹೆಚ್ಚು ಕೃತಿಗಳು ಇದುವರೆಗೆ ಪ್ರಕಟವಾಗಿದ್ದು, ಇದರಲ್ಲಿ ಸೃಜನಕೃತಿಗಳೂ ಇವೆ. ʼಬಿಂದಲಿʼ, ʼಬುಗುಡಿʼ ಹಾಗೂ ʼಬಯಲುʼ ಇವು ಕಮಲಾ ಹಂಪನಾ ಅವರ ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ Attimabbe and Chalukyas ಹಾಗೂ Jainism and Other Essays- ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ಬರೆದಿದ್ದಾರೆ.
ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸ್ಕೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಅವರ ಸಾಕ್ಷ್ಯಚಿತ್ರವನ್ನು ಕರ್ನಾಟಕ ಸರ್ಕಾರ ಸಿದ್ಧಪಡಿಸಿದೆ. ಜಗತ್ತಿನ ಅಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್ ನಿರ್ದೇಶಿಸಿರುವ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರಕ್ಕೆ ಇಡೀ ಭಾರತದಿಂದ ಕಮಲಾ-ಹಂಪನಾ ಜೋಡಿ ಆಯ್ಕೆಯಾಗಿದ್ದು ವಿಶೇಷ. ʼಬೇರು ಬೆಂಕಿ ಬಿಳಲುʼ ಎನ್ನುವುದು ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನ. ಕಮಲಾ ಹಂಪನಾ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Sagri Raghavendra Upadhyaya: ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ