Site icon Vistara News

Kanakapura Election Results : ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಭರ್ಜರಿ ಗೆಲುವು; 8ನೇ ಬಾರಿ ಆಯ್ಕೆ

Kanakapura Karnataka Election Results 2023 winner DK shivakumar

Kanakapura Karnataka Election Results 2023 winner DK shivakumar

ರಾಮನಗರ: ವಿಧಾನಸಭೆ ಚುನಾವಣೆಯ (Kanakapura Election Results) ಫಲಿತಾಂಶ ಹೊರಬಿದ್ದಿದ್ದು, ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಅವರು ಜಯಭೇರಿ ಮೊಳಗಿಸಿದ್ದಾರೆ. ಇವರು ಸಮೀಪದ ಸ್ಪರ್ಧಿ ಜೆಡಿಎಸ್‌ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿ ಬಿ.ನಾಗರಾಜು ವಿರುದ್ಧ 1,22,392 ಮತಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ 8ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಅವರು 1,43,023 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ 19,753 ಮತ, ಬಿಎಸ್‌ಪಿ ಅಭ್ಯರ್ಥಿ ಕೃಷ್ಣ ಎನ್‌.ಎಂ. 1083, ಜೆಡಿಎಸ್‌ ಅಭ್ಯರ್ಥಿ ಬಿ.ನಾಗರಾಜು 20,631 ಮತ, ಎಎಪಿ ಅಭ್ಯರ್ಥಿ ಇ.ಪುಟ್ಟರಾಜು 1144 ಮತಗಳನ್ನು ಪಡೆದಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸಿದ್ದರಿಂದ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಏರ್ಪಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆರಂಭದಿಂದ ಮುನ್ನಡೆ ಕಾಯ್ದುಕೊಂಡಿದ್ದ ಡಿ.ಕೆ.ಶಿವಕುಮಾರ್‌ ಅವರು ಅಂತಿಮವಾಗಿ ವಿಜಯ ಪತಾಕೆ ಹಾರಿಸಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ 1,27,552 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಶಿವಕುಮಾರ್‌ ಅವರು, 79909 ಮತಗಳ ಅಂತರದಿಂದ ಜೆಡಿಎಸ್‌ ಅಭ್ಯರ್ಥಿ ನಾರಾಯಣಗೌಡ (47,643) ವಿರುದ್ಧ ಗೆದ್ದಿದ್ದರು.

ಇದನ್ನೂ ಓದಿ | Karnataka Election Results 2023 : ಸರ್ಕಾರ ರಚನೆಯತ್ತ ಕಾಂಗ್ರೆಸ್‌ ದಾಪುಗಾಲ; ಬಿಜೆಪಿಗೆ ಅನಿರೀಕ್ಷಿತ ಹಿನ್ನಡೆ

ಡಿ.ಕೆ.ಶಿವಕುಮಾರ್‌ ಅವರ ಸಹೋದರ ಡಿ.ಕೆ.ಸುರೇಶ್‌ ನಿವಾಸದಲ್ಲಿ ಸಂಭ್ರಮ

8 ಬಾರಿ ಶಾಸಕರಾಗಿ ಆಯ್ಕೆ

ಡಿ.ಕೆ.ಶಿವಕುಮಾರ್‌ ಅವರು ಸಾತನೂರು ಕ್ಷೇತ್ರದಲ್ಲಿ 4 ಬಾರಿ ಹಾಗೂ ಕನಕಪುರ ಕ್ಷೇತ್ರದಲ್ಲಿ 4 ಬಾರಿ ಸೇರಿ ಒಟ್ಟು 8 ಬಾರಿ ಶಾಸಕರಾಗಿದ್ದಾರೆ. 1985ರಲ್ಲಿ ಮೊದಲ ಬಾರಿಗೆ ಸಾತನೂರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ.ಶಿವಕುಮಾರ್‌ ಸ್ಪರ್ಧಿಸಿ ಸೋತಿದ್ದರು. ಬಳಿಕ 1989ರಲ್ಲಿ ಗೆದ್ದು ವಿಧಾನಸಭೆಗೆ ಆಯ್ಕೆಯಾದರು. ನಂತರ ಕಾಂಗ್ರೆಸ್‌ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ 1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1999ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ನಂತರ 2004ರಲ್ಲಿ ವಿಜಯ ಪತಾಕೆ ಹಾರಿಸಿದ್ದರು.

2008ರಲ್ಲಿ ಸಾತನೂರು ಕ್ಷೇತ್ರ ವಿಂಗಡಣೆಯಾಗಿ ಕನಕಪುರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ವಿಲೀನವಾಗಿ ಅಸ್ತಿತ್ವ ಕಳೆದುಕೊಂಡಿತು. ನಂತರ 2008, 2013, 2018ರಲ್ಲಿ ಸತತವಾಗಿ ಡಿ.ಕೆ.ಶಿವಕುಮಾರ್‌ ಅವರು ವಿಧಾನಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ.

Exit mobile version