Site icon Vistara News

Kanakapura Row : ಕನಕಪುರ ಬೆಂಗಳೂರಿಗೆ ಸೇರ್ಪಡೆ; ಡಿಕೆಶಿ ಹೇಳಿಕೆ ಬೆನ್ನಿಗೇ ಕೋಲಾಹಲ

Kanakapura DK Shivakumar

ಬೆಂಗಳೂರು: ಈಗ ರಾಮನಗರ ಜಿಲ್ಲೆಯಲ್ಲಿರುವ ಕನಕಪುರ (Kanakapura row) ಬೆಂಗಳೂರಿಗೆ ಸೇರಿದ್ದು, ಇಂದಲ್ಲ ನಾಳೆ ಅದು ಬೆಂಗಳೂರಿಗೇ ಸೇರುತ್ತದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ವಿವಾದ ಹುಟ್ಟುಹಾಕಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ ಈ ಹೇಳಿಕೆಯನ್ನು ತೀವ್ರವಾಗಿ ಆಕ್ಷೇಪಿಸಿದ್ದು, ಇದು ಕನಕಪುರದಲ್ಲಿರುವ ತಮ್ಮ ಭೂಮಿಯ ಬೆಲೆ ಹೆಚ್ಚಿಸಿಕೊಳ್ಳುವ ಡಿ.ಕೆ. ಶಿವಕುಮಾರ್‌ ಕುತಂತ್ರ ಎಂದು ಆರೋಪಿಸಿವೆ. ಜತೆಗೆ ಇದು ರಾಮನಗರ ಜಿಲ್ಲೆಗೆ ಮಾಡುತ್ತಿರುವ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಕನಕಪುರ ತಾಲೂಕಿನ ಶಿವನಹಳ್ಳಿಯ ದೇವಸ್ಥಾನ ಜೀರ್ಣೋದ್ಧಾರದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌ ಅವರು, ʻʻನಿಮ್ಮ ಜೇಬಿಗೆ ನಾನು ನೇರವಾಗಿ ದುಡ್ಡು ಹಾಕಲು, ಮನೆ ಕಟ್ಟಿಸಿಕೊಡಲು ಆಗುವುದಿಲ್ಲ, ನಿಮ್ಮ ಆಸ್ತಿ ಮೌಲ್ಯಗಳನ್ನು ಹತ್ತು ಪಟ್ಟು ಹೆಚ್ಚು ಮಾಡುವ ಶಕ್ತಿ ದೇವರು ನೀಡಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ವಿದ್ಯೆ ನೀಡಬಹುದು ಅಷ್ಟೇ. ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿʼʼ ಎಂದು ಕಿವಿಮಾತು ಹೇಳಿದರು. ಜತೆಗೆ ʻʻಒಂದಲ್ಲ ಒಂದು ದಿನ ಇಲ್ಲಿನ ಗ್ರಾಮಗಳು ಬೆಂಗಳೂರು ಆಗೇ ಆಗುತ್ತವೆ, ಪ್ರತಿ ಅಡಿ ಲೆಕ್ಕದಲ್ಲಿ ಬೆಲೆ ಕಟ್ಟಲಾಗುತ್ತದೆ. ಆದ ಕಾರಣ ನನ್ನ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ,ʼʼ ಎಂದು ಹೇಳಿದರು.

ಡಿ.ಕೆ. ಶಿವಕುಮಾರ್‌ ಅವರ ಈ ಮಾತು ಕನಕಪುರವನ್ನು ರಾಮನಗರ ಜಿಲ್ಲೆಯಿಂದ ಕಿತ್ತು ಬೆಂಗಳೂರಿಗೆ ಸೇರಿಸುವ ಹುನ್ನಾರ ಎಂಬ ಆರೋಪ ತಕ್ಷಣವೇ ಕೇಳಿಬಂತು.

ಕನಕಪುರ ಶಿವಕುಮಾರ್‌ ಅವರ ಕಾರ್ಯಕ್ಷೇತ್ರವಾಗಿದ್ದು, ಅವರು ಇಲ್ಲಿ ಸಾಕಷ್ಟು ಭೂಮಿಯನ್ನು ಹೊಂದಿದ್ದಾರೆ. ಕನಕಪುರವನ್ನು ರಾಮನಗರದಿಂದ ಕಿತ್ತು ಬೆಂಗಳೂರಿಗೆ ಸೇರಿಸಿದರೆ ಅದರ ಮೌಲ್ಯ ಹತ್ತಾರು ಪಟ್ಟು ಹೆಚ್ಚುತ್ತದೆ ಎಂಬ ಉದ್ದೇಶದಿಂದ ಇಂಥಹುದೊಂದು ಹುನ್ನಾರವನ್ನು ಅವರು ಹೆಣೆಯುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್‌ ನೇರವಾಗಿ ಆರೋಪಿಸಿವೆ.

ಕುಟುಂಬವನ್ನು ಶ್ರೀಮಂತಗೊಳಿಸುವ ಹುನ್ನಾರ ಎಂದ ಎನ್‌. ರವಿ ಕುಮಾರ್‌

ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮೇಲ್ಮನೆ ಸದಸ್ಯ ಎನ್‌. ರವಿಕುಮಾರ್‌ (N Ravi kumar) ಅವರು, ಅವರಿಗೆ, ಅವರ ಕುಟುಂಬಕ್ಕೆ ಈಗಿರೋ ಹಣ ಸಾಕಾಗ್ತಿಲ್ಲ. ಅವರ ಕುಟುಂಬವನ್ನು ಮತ್ತಷ್ಟು ಶ್ರೀಮಂತಗೊಳಿಸಲು ಚಿಂತನೆ ಇದು ಎಂದು ಆರೋಪಿಸಿದರು.

ʻʻನಾನು ಅವರು ಹೇಳಿರೋದನ್ನ ಕೇಳಿದ್ದೇನೆ. ಅವರಿಗೆ ರಾಮನಗರ ಜಿಲ್ಲೆ ಉದ್ಧಾರ ಆಗೋದು ಇಷ್ಟ ಇಲ್ಲ‌. ರಾಮನಗರ ಜಿಲ್ಲೆಯನ್ನು ಹೇಗೆ ಕ್ಷೀಣ ಮಾಡಬಹುದು ಅಂತ ಯೋಚನೆ ಮಾಡ್ತಿದ್ದಾರೆ. ಕನಕಪುರವನ್ನ ಬೆಂಗಳೂರು ಗ್ರಾಮಾಂತರ ಅಷ್ಟೇ ಅಲ್ಲ. ನಗರಕ್ಕೆ ಸೇರಿಸಬೇಕು ಅನ್ನೋದು ಅವರ ಚಿಂತನೆ. ಅವರಿಗೆ, ಅವರ ಕುಟುಂಬಕ್ಕೆ ಈಗಿರೋ ಹಣ ಸಾಕಾಗ್ತಿಲ್ಲ. ಅವರ ಕುಟುಂಬ ಮತ್ತಷ್ಟು ಶ್ರೀಮಂತಗೊಳಿಸಲು ಚಿಂತನೆ ಇದುʼʼ ಎಂದು ಹೇಳಿದರು.

ಅವರ ಆಡಿದ ಮಾತಿನ ಹಿಂದೆ ಇರುವುದು ಕನಕಪುರ ಉದ್ಧಾರದ ಕನಸಲ್ಲ. ಕನಕಪುರದಲ್ಲಿ ಬೇರೆಯವರ ಕುಟುಂಬದ ಆಸ್ತಿ 20 ಎಕರೆ ಇರಬಹುದು. ಇವರ ಕುಟುಂಬದ್ದೇ ಆಸ್ತಿ ಹೆಚ್ಚಾಗಿರುವುದು. ತಮ್ಮ ಕುಟುಂಬ ಸಂಮೃದ್ಧ ಮಾಡೋದಕ್ಕೆ ಪ್ರಯತ್ನ ಮಾಡ್ತಿದ್ದಾರೆʼʼ ಎಂದು ಹೇಳಿದ ರವಿ ಕುಮಾರ್‌, ʻʻಅಭಿವೃದ್ಧಿ ಮಾಡಬೇಕು ಅಂದ್ರೆ ರಾಮನಗರ ಜಿಲ್ಲೆ ಅಭಿವೃದ್ಧಿ ಮಾಡಲಿʼʼ ಎಂದು ಸವಾಲು ಹಾಕಿದರು.

ʻʻರಾಮನಗರ ಜಿಲ್ಲೆಗೆ ಏನು ಕೊಡುಗೆ ನಿಮ್ಮದು.? ಕನಕಪುರ ತಾಲೂಕಿನ ಬಗ್ಗೆ ಯಾಕೆ ಇಷ್ಟು ಕಾಳಜಿ? ಇಷ್ಟು ಸ್ವಾರ್ಥ ರಾಜಕಾರಣಿಯನ್ನ ನಾನು ನೋಡಿಲ್ಲ. ಮೋಸ್ಟ್ ಸೆಲ್ಫಿಶ್ ಪೊಲಿಟಿಶಿಯನ್ ಅವರುʼʼ ಎಂದು ಹೇಳಿದರು.

ʻʻನಾನು ರಾಜ್ಯದ ಡಿಸಿಎಂ ಅವರನ್ನ ಪ್ರಶ್ನೆ ಮಾಡುತ್ತೇನೆ. ನಿಮ್ಮ ಸರ್ಕಾರದ ಅಭಿವೃದ್ಧಿ ಮಂತ್ರ ಏನು? ಕನಕಪುರವನ್ನು ಬೆಂಗಳೂರಿಗೆ ಸೇರಿಸೋದಾ ಅಥವಾ ಬೆಂಗಳೂರನ್ನೇ ಕನಕಪುರಕ್ಕೆ ಸೇರಿಸೋದಾ.? ಬೀದರ್ ಜಿಲ್ಲೆಯನ್ನ ಬೆಂಗಳೂರು ರೀತಿಯಲ್ಲಿ ಡೆವಲಪ್ಮೆಂಟ್ ಮಾಡೋದಾ.? ಹಿಂದುಳಿದ ತಾಲ್ಲೂಕಿನ ರೀತಿಯಲ್ಲಿ ಬೆಂಗಳೂರು ಮಾಡೋದಾ.? ನಿಮ್ಮ ಆಲೋಚನೆ ಏನು?ʼʼ ಎಂದು ಪ್ರಶ್ನಿಸಿದ ಅವರು, ಕನಕಪುರ ಒಂದನ್ನೇ ಬೆಂಗಳೂರಿಗೆ ಸೇರಿಸೋದು ಸರಿಯಲ್ಲ. ಪ್ರತೀ ತಾಲ್ಲೂಕನ್ನ ಬೆಂಗಳೂರು ರೀತಿ ಅಭಿವೃದ್ಧಿ ಮಾಡಬೇಕು. ಬೆಂಗಳೂರಿಗೆ ವಿಪರೀತ ಸೇರಿಸಿ, ಇಲ್ಲಿ ಸಮಸ್ಯೆ ತರೋದು ಸರಿಯಲ್ಲ ಎಂದರು.

ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳುವ ಹುನ್ನಾರ, ರಾಮನಗರಕ್ಕೆ ದ್ರೋಹ

ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಜೆಡಿಎಸ್‌ ನಾಯಕ ಎಚ್.ಡಿ ಕುಮಾರಸ್ವಾಮಿ ಅವರು, ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ ಮಾತು ರಾಮನಗರ ಜಿಲ್ಲೆಗೆ ಎಸಗುವ ಮಹಾದ್ರೋಹ. ಅಷ್ಟೇ ಅಲ್ಲ; ಕನಕಪುರ ಜನರಿಗೆ ಮಂಕುಬೂದಿ ಎರಚುವ ಹುನ್ನಾರ ಎಂದು ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version