ವಿಧಾನಸಭೆ: ಕನ್ನಡವನ್ನು ಆಡಳಿತದಲ್ಲಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಏಕೀಕೃತ ಕಾಯ್ದೆ ಇರಬೇಕು ಎಂಬ ಸುಮಾರು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರಕಿದೆ.
ವಿಧಾನಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ವಿಧೇಯಕವನ್ನು ಮಂಡಿಸಿದರು. ಮಂಡನೆ ಮಾಡಿದ ಕೆಲವೇ ಕ್ಷಣದಲ್ಲಿ ಯಾವುದೇ ಚರ್ಚೆ, ವಿವರಣೆ ಇಲ್ಲದೆ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು. ವಿಧೇಯಕವನ್ನು ಸೂಕ್ತವಾಗಿ ಅನುಷ್ಠಾನ ಮಾಡಿದರೆ ಕನ್ನಡ ಭಾಷಾ ಅಭಿವೃದ್ಧಿಗೆ ಅನೇಕ ಅನುಕೂಲಗಳು ಆಗುತ್ತವೆ ಎನ್ನಲಾಗುತ್ತಿದೆ.
ಆಡಳಿತ ಕನ್ನಡ ಜಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದು ಸೇರಿ ಶಿಸ್ತು ಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಜಾರಿ ಪ್ರಾಧಿಕಾರ ರಚನೆ ಮಾಡುವುದಕ್ಕೆ ಈ ವಿಧೇಯಕದ ಮೂಲಕ ಅವಕಾಶ ನೀಡಲಾಗಿದೆ.
ಮುಖ್ಯವಾಗಿ ರಾಜ್ಯದಲ್ಲಿ ಭೂಮಿ, ತೆರಿಗೆ ರಿಯಾಯಿತಿ, ಅನುದಾನ ಹಾಗೂ ಇತರೆ ಸೌಲಭ್ಯ ಪಡೆಯುತ್ತಿರುವ ಕೈಗಾರಿಕೆಗಳು, ಕಾರ್ಯ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಕಾಯಿದೆಯ ಮೇಲ್ವಿಚಾರಣೆಗೂ ಈ ವಿಧೇಯಕ ಬಲ ನೀಡಲಿದೆ.
ಕಾಯಿದೆಯ ಮುಖ್ಯಾಂಶಗಳು
೧. ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವುದು.
೨ . ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉನ್ನತ , ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ.
೩. ರಾಜ್ಯ ಸರ್ಕಾರ, ಸ್ಥಳೀಯ ಪ್ರಾಧಿಕಾರ, ಶಾಸನಬದ್ಧ ಸಂಸ್ಥೆಗಳು, ಸಹಕಾರ ಸಂಘಗಳ ನೇಮಕ ಪ್ರಕ್ರಿಯೆಯಲ್ಲಿ ಕನ್ನಡ ಭಾಷಾ ಜ್ಞಾನ ಕಡ್ಡಾಯ.
೪. ಅಧೀನ ನ್ಯಾಯಾಲಯ ಹಾಗೂ ನ್ಯಾಯ ಮಂಡಳಿಗಳಲ್ಲಿ ಕನ್ನಡ ಭಾಷಾ ಬಳಕೆ.
೫. ಕನ್ನಡದ ಬಳಕೆ ಮತ್ತು ಪ್ರಸಾರಕ್ಕೆ ನೀತಿ.
೬. ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶದಲ್ಲಿ ಕನ್ನಡ ಬಳಕೆಗೆ ಕ್ರಮ.
೭ . ರಾಜ್ಯ ಸರ್ಕಾರದಿಂದ ತೆರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯ ಪಡೆದ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡುವುದು.
೮. ಉದ್ಯೋಗ ಪೋರ್ಟಲ್ ಸ್ಥಾಪನೆ.
೯ . ಅನುಷ್ಠಾನಗಳ ಮೇಲ್ವಿಚಾರಣೆಗೆ ಕಾರ್ಯ ವ್ಯವಸ್ಥೆ ಸ್ಥಾಪನೆ.
ದಂಡ ವ್ಯವಸ್ಥೆ
ಕನ್ನಡ ಅನುಷ್ಠಾನ ಉಲ್ಲಂಘನೆ ಮಾಡಿದ ವ್ಯಕ್ತಿ, ಸಂಘ- ಸಂಸ್ಥೆಗಳಿಗೆ ಈ ಕಾಯಿದೆಯ ಮೂಲಕ ದಂಡ ವಿಧಿಸುವ ಉಪಬಂಧವನ್ನು ಈ ಕಾಯಿದೆಯ ಮೂಲಕ ಪರಿಚಯಿಸಲಾಗುತ್ತಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ ಖಾಸಗಿ ವ್ಯಕ್ತಿ, ಕಾರ್ಖಾನೆ, ಸಂಘಟನೆಗಳಿಗೆ ೫,೦೦೦ ರೂ, ಎರಡನೇ ಬಾರಿಗೆ ೧೦,೦೦೦ ರೂ. ಹಾಗೂ ಮೂರನೇ ಬಾರಿಗೆ ತಪ್ಪೆಸಗಿದವರಿಗೆ ೨೦,೦೦೦ ರೂ.ವರೆಗೆ ದಂಡ ವಿಧಿಸುವ ಅಧಿಕಾರವನ್ನು ವಿವಿಧ ಹಂತದಲ್ಲಿ ಇರುವ ಜಾರಿ ಪ್ರಾಧಿಕಾರಕ್ಕೆ ನೀಡಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ಕನ್ನಡ ಜಾರಿ ವಿಚಾರದಲ್ಲಿ ಎಸಗುವ ತಪ್ಪನ್ನು ಕರ್ತವ್ಯ ಲೋಪ ಎಂದು ಪರಿಗಣಿಸಿ ಶಿಸ್ತುಕ್ರಮ ತೆಗೆದುಕೊಳ್ಳಬಹುದಾಗಿದೆ.
ಇ ಆಡಳಿತ ಇಲಾಖೆಯಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಪರಿಣಾಮಕಾರಿ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಸೃಜನಾತ್ಮಕ ಸಲಹೆ ನೀಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುವುದಕ್ಕೂ ಈ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ.
ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ ಒಪ್ಪಿಗೆ ಪಡೆದ ನಂತರ ರಾಜ್ಯಪಾಲರು ಅಂಕಿತ ಹಾಕಿದರೆ ಮಸೂದೆ ಕಾಯ್ದೆಯಾಗಿ ರೂಪುಗೊಳ್ಳುತ್ತದೆ. ಇದಕ್ಕೆ ನಿಯಮಗಳನ್ನು ರೂಪಿಸಿ ಅನುಷ್ಠಾನ ಮಾಡಿದರೆ ಕನ್ನಡ ಬಳಕೆಗೆ ಒತ್ತು ಲಭಿಸುವ ಸಾಧ್ಯತೆಯಿದೆ.
ಇದನ್ನೂ ಓದಿ | ʼಗೋಡೌನ್ʼ ರೀತಿ ರಂಗಮಂದಿರ ನಿರ್ಮಾಣ | ಕಾರ್ಯಾಂಗದ ಮೇಲೆ ಸ್ಪೀಕರ್ ಬೇಸರ; ಹೊಸ ನೀತಿ ಘೋಷಿಸಿದ ಸುನಿಲ್‌ಕುಮಾರ್