Site icon Vistara News

Kannada Rajyotsava: ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ…

Kannada Rajyotsava

ರಸೊತ್ತಿಗೆಗಳಲ್ಲಿ ರಾಜ್ಯ ವಿಸ್ತರಣೆ ಮತ್ತು ಅಧಿಕಾರದ (Kannada Rajyotsava) ಮಹತ್ವಾಕಾಂಕ್ಷೆಗಳು ಸರ್ವೇಸಾಮಾನ್ಯ ಎನಿಸಿದ್ದ ಕಾಲಘಟ್ಟವದು. ಭಾಷೆ, ನೆಲ, ಜಲ, ಸಂಸ್ಕೃತಿ ಎಂಬಂಥ ಯಾವುದೇ ಭಾವನಾತ್ಮಕ ವಿಷಯಗಳಿಗೆ ಸೊಪ್ಪು ಹಾಕದೆ, ಗಡಿಯನ್ನು ಮಾತ್ರವೇ ವಿಸ್ತರಿಸಿಕೊಳ್ಳುವ ಆಳರಸರ ಮೇಲಾಟದಿಂದ ಪೆಟ್ಟಾಗುತ್ತಿದ್ದುದು ಸಾಮಾನ್ಯರಿಗೆ ಎಂಬುದನ್ನು ಚರಿತ್ರೆಯ ಪುಟಗಳು ಚೀರಿ ಹೇಳುತ್ತವೆ. ಹೊಯ್ಸಳರ ಮತ್ತು ಸೇವುಣರ ಇಂಥದ್ದೇ ರಾಜಕೀಯ ಜಿದ್ದಾಜಿದ್ದಿಯಲ್ಲಿ ವಿಸ್ತಾರವಾಗಿದ್ದ ಕನ್ನಡ ನಾಡು ತುಂಡಾಗಿದ್ದು. ಹೀಗೆ 13ನೇ ಶತಮಾನದ ಆದಿಯಲ್ಲಿ ಒಡೆದ ನಾಡು ಒಂದು ಭಾಷೆಯ ಅಸ್ಮಿತೆಯಡಿ, ರಾಜಕೀಯವಾಗಿ ಒಂದುಗೂಡುವುದಕ್ಕೆ ಹಲವಾರು ಶತಮಾನಗಳು, ಬಹಳಷ್ಟು ತ್ಯಾಗ, ಹೋರಾಟಗಳು ಬೇಕಾದವು.

ಭಾರತದ ಉಳಿದೆಲ್ಲಾ ರಾಜ್ಯಗಳಂತೆಯೇ, ಕರ್ನಾಟಕದ ಗಡಿರೇಖೆ ಸಹ ಎಂದೂ ಸ್ಥಿರವಾಗಿರಲಿಲ್ಲ. ಕದಂಬ, ಗಂಗ ಮತ್ತು ಬಾದಾಮಿ ಚಾಳುಕ್ಯರ ಆಳ್ವಿಕೆಯ ದಿನಗಳಲ್ಲಿ, ಕನ್ನಡ ಸೀಮೆಯು ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ ಮತ್ತು ಕಾವೇರಿ ಸಮುದ್ರ ಸೇರುವ ಭಾಗದವರೆಗಿನ ಪ್ರಾಂತ್ಯವನ್ನು ದಕ್ಷಿಣದ ಗಡಿಯಾಗಿಯೂ ಹೊಂದಿತ್ತು. ಇದನ್ನೇ ಶ್ರೀವಿಜಯನು ಕವಿರಾಜ ಮಾರ್ಗದಲ್ಲಿ ಮತ್ತು ನಂಜುಂಡ ಕವಿಯು ರಾಮನಾಥ ಚರಿತೆಯಲ್ಲಿ ಹೇಳಿದ್ದು. ಈಗಿನ ಬಿಜಾಪುರದ ಪಟ್ಟದಕಲ್ಲು, ಕೊಪ್ಪಳ. ಧಾರವಾಡದ ಲಕ್ಷ್ಮೇಶ್ವರ, ಬೆಳಗಾವಿಯ ಒಕ್ಕುಂದ, ಗೋದಾವರಿ ಮತ್ತು ಕೃಷ್ಣಾ ನದಿಗಳು ಹರಿಯುವ ಪ್ರದೇಶಗಳು, ನೀಲಗಿರಿ, ಕೊಯಮತ್ತೂರು ಮತ್ತು ಸೇಲಂನ ಭಾಗಗಳು ಕನ್ನಡ ಭೂಮಿಯಾಗಿತ್ತೆಂದು ಶಾಸನಗಳ ಆಧಾರದ ಮೇಲೆ ಚರಿತ್ರಕಾರರು ಹೇಳಿದ್ದಾರೆ. ಇಷ್ಟು ವಿಶಾಲವಾಗಿ ಹರಡಿದ್ದ ಕನ್ನಡದ ಕಂಪು ಕ್ರಮೇಣ ಸಂಕೋಚಗೊಂಡಿದ್ದೇಕೆ?

ಹಂಚಿಹೋದ ಕನ್ನಡಸೀಮೆ

ಇದರ ಕಾರಣಗಳು ಬಹುತೇಕ ರಾಜಕೀಯ ಸ್ವರೂಪದವು. ವಿಜಯನಗರದ ಆಳ್ವಿಕೆಯು ದಕ್ಷಿಣ ಭಾರತದ ಬಹುದೊಡ್ಡ ಭಾಗದಲ್ಲಿ ವಿಸ್ತರಿಸಿಕೊಂಡಿದ್ದರೂ, ಬೀದರ್‌, ಕಲಬುರ್ಗಿ ಮತ್ತು ರಾಯಚೂರಿನ ಭಾಗಗಳು ಆದಿಲ್‌ ಷಾಹಿಗಳ ಒಡೆತನದಲ್ಲೇ ಇದ್ದವು. ಮುಂದೆ, ಮೈಸೂರು ರಾಜ್ಯವನ್ನು ವಿಸ್ತರಿಸಲು ಹೈದರ್ ಮತ್ತು ಟಿಪ್ಪು ಪ್ರಯತ್ನಿಸಿದರೂ, ವರದಾ ನದಿಯ ಉತ್ತರ ಭಾಗವನ್ನು ಪೇಶ್ವೆಗಳಿಗೂ, ಕೊಡಗು-ಮಲಬಾರ್‌ ಪ್ರಾಂತ್ಯವನ್ನು ಬ್ರಿಟಿಷರಿಗೂ ಬಿಟ್ಟುಕೊಡಬೇಕಾಯಿತು. ನಾಲ್ಕನೇ ಮೈಸೂರು ಯುದ್ಧದ ನಂತರ, ಮೈಸೂರು ಸಂಸ್ಥಾನ ಮಾತ್ರವೇ ಮೈಸೂರು ರಾಜವಂಶಕ್ಕೆ ಉಳಿಯಿತು. ಬೆಳಗಾವಿ, ಬಿಜಾಪುರ, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಅವರ ಮದರಾಸಿನ ಸಂಸ್ಥಾನಕ್ಕೂ ಸೇರಿದರೆ, ಕೊಡಗು ಬ್ರಿಟಿಷರ ಅಧೀನ ರಾಜ್ಯವಾಗಿ ಉಳಿಯಿತು. ಬೀದರ್‌, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಸೇರಿದರೆ, ಕೆಲವು ಚಿಕ್ಕ-ಪುಟ್ಟ ಪಾಳಯಪಟ್ಟುಗಳು ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು.

ಹೀಗೆ ಒಂದು ಭಾಷಿಕರು ಹಲವು ಆಡಳಿತಗಳ ವ್ಯಾಪ್ತಿಯಲ್ಲಿ ಛಿದ್ರವಾಗಿ ಹೋದರು. ಇಷ್ಟೂ ಪ್ರಾಂತ್ಯಗಳ ಬಹುಸಂಖ್ಯಾತರಿಗೆ ಕನ್ನಡ ಮನೆಮಾತಾಗಿ ಉಳಿದಿತ್ತು, ನಿಜ. ಆದರೆ ಆಡಳಿತ, ವಹಿವಾಟು, ವ್ಯಾಪಾರ, ಶಿಕ್ಷಣ ಮುಂತಾದ ಎಲ್ಲಾ ಕಡೆಗಳಲ್ಲಿ ಆಳುವವರಿಗೆ ಬೇಕಾದ ಭಾಷೆಯನ್ನು ಅವರ ಮೇಲೆ ಹೇರಲಾಯಿತು. ತಮ್ಮ ಮಾತು ಪ್ರಜೆಗಳಿಗೆ ತಿಳಿಯಬೇಕೆಂಬ ಆಳುವವರ ಕಳಕಳಿಗಿಂತ, ಬದುಕಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಪ್ರಜೆಗಳು ತಮ್ಮದಲ್ಲದ ಭಾಷೆಯನ್ನೂ ಕಲಿಯುವ ಒತ್ತಡಕ್ಕೆ ಸಿಲುಕಿದ್ದರು. ಉದಾಹರಣೆಗೆ, 1826ರಲ್ಲಿ ಮುಂಬಯಿ ಆಧಿಪತ್ಯದ ಸರ್ಕಾರವು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಮರಾಠಿ ಶಾಲೆಗಳನ್ನು ಆರಂಭಿಸಿತು. ಆಡಳಿತದಲ್ಲಿ ಅದಾಗಲೇ ಮರಾಠಿ ಜಾರಿಗೆ ಬಂದಿದ್ದರಿಂದ ಇಂಥ ಕ್ರಮಗಳಿಗೆ ಪ್ರತಿರೋಧ ಇರಲಿಲ್ಲ. ಆದರೆ ಸರ್‌ ವಾಲ್ಟರ್‌ ಎಲಿಯೆಟ್‌ನಂಥ ಬ್ರಿಟಿಷ್‌ ಅಧಿಕಾರಿಗಳಿಗೆ, ಇಲ್ಲಿನ ಬಹುತೇಕ ಜನರ ತಾಯ್ನುಡಿ ಕನ್ನಡವಾಗಿರುವುದರಿಂದ ಕನ್ನಡವೇ ಆಡಳಿತ ಭಾಷೆಯಾಗುವುದು ಸೂಕ್ತ ಎಂದೆನಿಸಿತ್ತು. ಇದೇ ಕಾರಣದಿಂದ 1830ರಲ್ಲಿ, ಧಾರವಾಡದಲ್ಲಿ ಕನ್ನಡ ಶಾಲೆಯೊಂದನ್ನು ಆತ ಆರಂಭಿಸಿ, ಮುಂದಿನ ಮೂರು ವರ್ಷಗಳ ಕಾಲ ಸ್ವಂತ ಖರ್ಚಿನಲ್ಲಿ ಶಾಲೆ ನಡೆಸಿದರು. ಈ ಕೆಲಸವನ್ನು ಡೆಪ್ಯುಟಿ ಚೆನ್ನಬಸಪ್ಪನವರು ಮುಂದುವರಿಸಿದರು.

ಕನ್ನಡಿಗರ ಸಂಕಷ್ಟ

ಮುಂಬಯಿ ಸಂಸ್ಥಾನದಲ್ಲಿದ್ದ ಕನ್ನಡಿಗರ ಸ್ಥಿತಿ ಹೀಗಾದರೆ, ಹೈದರಾಬಾದ್‌ ಆಳ್ವಿಕೆಯ ಅಡಿಯಲ್ಲಿದ್ದ ಕನ್ನಡಿಗರದ್ದು ಇನ್ನೂ ಶೋಚನೀಯ ಅವಸ್ಥೆ. ಅಲ್ಲಿ ಮರಾಠಿ ಪ್ರಭಾವ ಕಡಿಮೆಯಿರಲಿಲ್ಲ. ಜೊತೆಗೆ ಆಡಳಿತ ಭಾಷೆಯಾಗಿ ಉರ್ದು ಹೇರಲಾಗಿತ್ತು. ಹಾಗಾಗಿ ವ್ಯವಹಾರ ಮತ್ತು ಶಿಕ್ಷಣದಲ್ಲೂ ಉರ್ದು ಪ್ರಭಾವ ಜೋರಾಗಿತ್ತು. ಇರುವುದರಲ್ಲಿ ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡ ಸುರಕ್ಷಿತವಾಗಿತ್ತು. ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ ಬಳಕೆಯಲ್ಲಿತ್ತು. ಕನ್ನಡಿಗರೇ ಅಧಿಕವಾಗಿರುವ ಪ್ರಾಂತ್ಯಗಳ ಹಣೆಬರಹ ಹೀಗಾಗಿದ್ದರಿಂದ, ಕನ್ನಡ ಭಾಷೆಯ ಸುತ್ತ ಹರಡಿದ್ದ ಸಂಸ್ಕೃತಿಯ ಅವಸ್ಥೆ ನಿಜಕ್ಕೂ ಹದಗೆಟ್ಟಿತ್ತು. ಹಾಗಾಗಿ ಕನ್ನಡ ಸೀಮೆಯನ್ನು ರಾಜಕೀಯವಾಗಿ ಒಂದು ಛತ್ರಛಾಯೆಯ ಅಡಿಯಲ್ಲಿ ತರುವ ಅಗತ್ಯವಿತ್ತು. ಇದಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಿದ್ದು, 1905ರ ಬಂಗಾಲ ವಿಭಜನೆಯ ಸಂದರ್ಭದಲ್ಲಿ.
ಬಂಗಾಲವನ್ನು ಬ್ರಿಟಿಷರು ಒಡೆದ ದಿನ ಆ ಪ್ರಾಂತ್ಯದ ಯಾರ ಮನೆಯಲ್ಲೂ ಒಲೆ ಉರಿಯಲಿಲ್ಲ. ಅಂದಿನ ದಿನವನ್ನು ಸಂತಾಪ ದಿನವನ್ನಾಗಿ ಜನ ಆಚರಿಸಿದರು. ವಿಭಜನೆಯನ್ನು ರದ್ದು ಮಾಡುವಂತೆ ಹೊತ್ತಿದ ಕಿಡಿ, ಬಂಗಾಲದೆಲ್ಲೆಡೆ ತೀವ್ರವಾಗಿ ವ್ಯಾಪಿಸಿ, ೧೯೧೨ರಲ್ಲಿ ವಿಭಜನೆಯನ್ನು ಆಡಳಿತ ರದ್ದು ಮಾಡಿತು. ಇಡೀ ದೇಶಕ್ಕೆ ಇದೊಂದು ಪ್ರಬಲ ಸಂದೇಶವನ್ನು ರವಾನಿಸಿತು. ಭಾಷೆ-ಸಂಸ್ಕೃತಿಯ ಆಧಾರದ ಮೇಲೆ ಒಂದುಗೂಡುವುದು, ಜನಹಿತವನ್ನು ಕಾಯ್ದುಕೊಳ್ಳುವುದಕ್ಕೆ ಭೀಮಬಲ ನೀಡುತ್ತದೆ ಎಂಬುದು ಜನತೆಯ ಮನದಲ್ಲಿ ಅಚ್ಚೊತ್ತತೊಡಗಿತು. ಇದೇ ಹಿನ್ನೆಲೆಯಲ್ಲಿ, ಒರಿಸ್ಸಾ, ಅಸ್ಸಾಂ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಭಾಷೆಯ ಆಧಾರದ ಮೇಲೆ ರಾಜಕೀಯ ಗಡಿಗಳು ರಚನೆಯಾಗಬೇಕೆಂಬ ಕೂಗು ಪ್ರಬಲವಾಯಿತು. ಆದರೆ ಇಷ್ಟರಲ್ಲಾಗಲೇ ಕರ್ನಾಟಕದಲ್ಲಿ ಏಕೀಕರಣದ ಭಾವನೆಗಳು ಹೆಪ್ಪುಗಟ್ಟುತ್ತಿದ್ದವು.

ಏಕೀಕರಣದ ಕನಸು

ಒಂದುಗೂಡುವ ಕನಸು ಕಾಣುತ್ತಿದ್ದ ಕನ್ನಡದ ಮನಸ್ಸುಗಳಲ್ಲಿದ್ದ ಕಿಡಿಗೆ ತಿದಿಯೊತ್ತುವಂಥ ಕೆಲವು ಘಟನೆಗಳು ನಡೆದವು. 1890ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡ ನಂತರ, ಮೊದಲಬಾರಿಗೆ ಏಕೀಕರಣದ ಯತ್ನಕ್ಕೆ ಸಾಂಘಿಕ ರೂಪು ದೊರೆಯಿತು. 1903ರಲ್ಲಿ ಧಾರವಾಡದಲ್ಲಿ ಏಕೀಕರಣದ ಕುರಿತಾಗಿ ಬೆನಗಲ್‌ ರಾಮರಾಯರು ಮಾಡಿದ ಭಾಷಣ, 1907ರಲ್ಲಿ ʻವಾಗ್ಭೂಷಣʼ ಪತ್ರಿಕೆಯಲ್ಲಿ ಈ ಕುರಿತಾಗಿ ಆಲೂರು ವೆಂಕಟರಾಯರು ಬರೆದ ಲೇಖನಗಳು ಇಡೀ ಚಳುವಳಿಗೆ ಮೇಲ್ಪಂಕ್ತಿ ಹಾಕಿದವು. ೧೯೦೮ರಲ್ಲಿ, ವಿಕೇಂದ್ರೀಕರಣದ ಬಗ್ಗೆ ನೇಮಕವಾಗಿದ್ದ ರಾಯಲ್‌ ಕಮಿಷನ್‌ ಸಮ್ಮುಖದಲ್ಲಿ ಅಭಿಪ್ರಾಯ ಮಂಡಿಸಿದ್ದ ಬಾಲಗಂಗಾಧರ ತಿಲಕರು, ಭಾಷಾವಾರು ದೃಷ್ಟಿಯಿಂದ ಪ್ರಾಂತ್ಯಗಳನ್ನು ಮರುವಿಂಗಡನೆ ಮಾಡಲೇಬೇಕೆಂದು ಹೇಳಿದ್ದರು. ಕರ್ನಾಟಕದ ಏಕೀಕರಣವನ್ನೇ ಧ್ಯೇಯವಾಗಿ ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡು, ಇಡೀ ಆಶಯಕ್ಕೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ವರೂಪವೂ ಒದಗಿಬಂತು.

ಕರ್ನಾಟಕದ ರಾಜಕೀಯ ಏಕೀಕರಣದ ಗುರಿಯನ್ನೇ ಹೊಂದಿದ್ದ ಕರ್ನಾಟಕ ಸಭೆ 1917ರಲ್ಲಿ ಸ್ಥಾಪನೆಗೊಂಡಿತು. ಶೀಘ್ರದಲ್ಲೇ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ನಿಕಟ ಸಂಪರ್ಕ ಸಾಧಿಸಿದ ಸಭೆ, ಕಾಂಗ್ರೆಸ್‌ ಅಧಿವೇಶನಗಳಲ್ಲೆಲ್ಲಾ ತನ್ನ ಪ್ರತಿನಿಧಿಗಳ ಮೂಲಕ ಕರ್ನಾಟಕ ನಿರ್ಮಾಣದ ಆಗ್ರಹವನ್ನು ಮುಂದಿಡತೊಡಗಿತು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಮಹಾತ್ಮ ಗಾಂಧಿಯವರು ಅಧ್ಯಕ್ಷರಾಗಿದ್ದರು. ಕರ್ನಾಟಕದ ಏಕೀಕರಣದ ಬೇಡಿಕೆ ಸಹಜ ಮತ್ತು ನ್ಯಾಯಸಮ್ಮತವಾದದ್ದು ಎಂಬುದು ಇತರರಿಗೆ ಮನವರಿಕೆ ಮಾಡಲು ಈ ಅಧಿವೇಶನ ವೇದಿಕೆಯಾಯಿತು. 1928ರಲ್ಲಿ, ಕರ್ನಾಟಕ ಏಕೀಕರಣ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್‌ ಸಮಿತಿ ಜಂಟಿಯಾಗಿ, ನೆಹರೂ ಸಮಿತಿಯ ಮುಂದೆ ಈ ಬೇಡಿಕೆಯನ್ನಿಟ್ಟರು. ಅದೇ ವರ್ಷ ಸೈಮನ್‌ ಸಮಿತಿಯ ಮುಂದೆಯೂ ಈ ಬೇಡಿಕೆಯನ್ನು ಮಂಡಿಸಲಾಯಿತು. ಈ ಎಲ್ಲಾ ಕಡೆಗಳಲ್ಲಿ ಏಕೀಕರಣದ ಬೇಡಿಕೆ ನ್ಯಾಯಸಮ್ಮತ ಎಂಬುದನ್ನು ಮನವರಿಕೆ ಮಾಡಲಾಯಿತು. 1931ರಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಇದೇ ಪ್ರಸ್ತಾಪವನ್ನು ಬೆನಗಲ್‌ ರಾಮರಾವ್‌, ಬೆನಗಲ್‌ ಶಿವರಾವ್‌, ಮಿರ್ಜಾ ಇಸ್ಮಾಯಿಲ್‌ ಅವರು ಮಾಡಿದರು.

ಮಾಂಟೆಗೊ-ಚೆಲ್ಮ್ಸ್‌ಫರ್ಡ್‌ ಸಮಿತಿ

ಬಂಗಾಲದ ವಿಭಜನೆ ಮತ್ತು ತದನಂತರದ ಬೆಳವಣಿಗೆಗಳು ಬ್ರಿಟಿಷ್‌ ಸರಕಾರದ ಒಡೆದಾಳುವ ನೀತಿಗೆ ಒದಗಿ ಬರಲಿಲ್ಲ. 1918ರಲ್ಲಿ ಸಂವಿಧಾನ ಪರಿಷ್ಕರಣೆಯ ಸಲುವಾಗಿ ಮಾಂಟೆಗೊ-ಚೆಲ್ಮ್ಸ್‌ಫರ್ಡ್‌ ಸಮಿತಿ ನೇಮಕಗೊಂಡಿತು. ಭಾಷಾವಾರು ಪ್ರಾಂತ್ಯಗಳನ್ನು ರಚಿಸಬೇಕೆಂದು ಕೋರಿ ಕರ್ನಾಟಕದಿಂದಲೂ ಸಮಿತಿಗೆ ಮನವಿಗಳನ್ನು ಸಲ್ಲಿಸಲಾಯಿತು. 1919ರಲ್ಲಿ ವರದಿ ಸಲ್ಲಿಸಿದ ಸಮಿತಿ, ಜನತೆಯ ಅಭಿಪ್ರಾಯವನ್ನು ಮಾನ್ಯ ಮಾಡುವುದಕ್ಕೆ ಮಾತ್ರವಲ್ಲ, ಆಡಳಿತ ದೃಷ್ಟಿಯಿಂದಲೂ ಭಾಷಾವಾರು ಪ್ರಾಂತ್ಯ ವಿಂಗಡಣೆ ಒಳಿತು ಎಂದು ಹೇಳಿತು. ಪ್ರಾಂತೀಯ ಕಾಂಗ್ರೆಸ್‌ ಸಮಿತಿಗಳು ರಚನೆಗೊಳ್ಳುವುದಕ್ಕೆ ಇದೂ ಒಂದು ಹಿನ್ನೆಲೆ.

ಆಡಳಿತಾತ್ಮಕ ಸ್ತರಗಳಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಗಳ ಬೆನ್ನಲ್ಲೇ ಜನಮಾನಸದಲ್ಲೂ ಈ ಬಗ್ಗೆ ಬಹಳಷ್ಟು ಜಾಗೃತಿ ಮೂಡುತ್ತಿತ್ತು. ಹುಯಿಲಗೋಳ ನಾರಾಯಣರಾಯರು, ಬಿ.ಎಂ.ಶ್ರೀ, ಪಂಜೆ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈ, ಕುವೆಂಪು ಅವರಂಥ ಅನೇಕರು ರಚಿಸಿದ ಕವಿತೆಗಳಲ್ಲಿ ಏಕೀಕೃತ ಕರುನಾಡಿನ ಭವ್ಯ ಬಿಂಬ ಜನಮಾನಸದಲ್ಲಿ ಅಚ್ಚಾಗುತ್ತಿತ್ತು. ಈ ಹಂತದಲ್ಲಿ ಹಲವಾರು ಪತ್ರಿಕೆಗಳು ಜನದನಿಯಾಗಿ ಪ್ರೇರಣೆ ನೀಡಿದವು. ಸ್ವತಂತ್ರ ಕರ್ನಾಟಕ, ಕರ್ನಾಟಕ ಧನಂಜಯ, ಜಯ ಕರ್ನಾಟಕ, ಕನ್ನಡಿಗ, ಸಂಯುಕ್ತ ಕರ್ನಾಟಕದಂಥ ಹೆಸರುಗಳೇ ಜನರ ಕಣ್ಣುಗಳಲ್ಲಿ ಕನ್ನಡನಾಡಿನ ಕನಸು ಬಿತ್ತುತ್ತಿದ್ದವು. ಆದರೆ ದೇಶ ಸ್ವಾಯತ್ತವಾಗದ ಹೊರತು, ಕನ್ನಡ ಸೀಮೆಯನ್ನು ಒಂದು ಆಡಳಿತಕ್ಕೆ ತರುವುದು ಸಾಧ್ಯವಿಲ್ಲ ಎಂಬುದು ಇಷ್ಟರಲ್ಲಾಗಲೇ ಖಾತ್ರಿಯಾಗಿತ್ತು. ಇದೇ ಕಾಲದಲ್ಲಿ ದೇಶದೆಲ್ಲೆಡೆ ಸ್ವಾತಂತ್ರ್ಯ ಚಳುವಳಿ ತೀವ್ರಗೊಂಡಿತ್ತು.

ಕರ್ನಾಟಕ ಏಕೀಕರಣ ಪರಿಷತ್ತುಗಳು

ಕನ್ನಡ ಸೀಮೆಯನ್ನು ಒಂದುಗೂಡಿಸುವುದನ್ನೇ ಧ್ಯೇಯವಾಗಿ ಇಟ್ಟುಕೊಂಡು, 1924ರಿಂದ 1946ರವರೆಗೆ ಕರ್ನಾಟಕ ಏಕೀಕರಣದ 10 ಪರಿಷತ್ತುಗಳು ನಡೆದವು. ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಈ ಪರಿಷತ್ತುಗಳು ಏಕೀರಣವನ್ನು ಬಿಟ್ಟು ಬೇರೆ ವಿಚಾರದ ಪ್ರಸ್ತಾಪವೇ ಆದಂತೆ ತೋರುವುದಿಲ್ಲ. ಹತ್ತನೇ ಪರಿಷತ್ತಿನ ಉದ್ಘಾಟಕರಾಗಿದ್ದ ಸರ್ದಾರ್‌ ವಲ್ಲಭಬಾಯಿ ಪಟೇಲರು, ಭಾಷಾವಾರು ಪ್ರಾಂತ್ಯಗಳ ರಚನೆ ಆಗಲಿದೆ ಮತ್ತು ಅದರಲ್ಲಿ ಕರ್ನಾಟಕದ ರಚನೆಯೂ ಆಗಲಿದೆ ಎಂದು ತಿಳಿಸಿದ್ದರು. ಭಾರತಕ್ಕೆ ಸ್ವಾತಂತ್ರ ಬರುವ ದಿನಗಳು ಇನ್ನು ದೂರವಿಲ್ಲ ಎಂಬುದು ಜನಮಾನಸಕ್ಕೆ ಸ್ಪಷ್ಟವಾಗುತ್ತಿತ್ತು.

1946ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಮಹಾಸಮ್ಮೇಳನದಲ್ಲಿ ಗಂಭೀರ ಸಮಸ್ಯೆಯೊಂದು ಎದುರಾಗಿತ್ತು. ರಾಜಪ್ರಭುತ್ವದಲ್ಲಿದ್ದ ಮೈಸೂರು ಸಂಸ್ಥಾನವನ್ನು ಹೊರತುಪಡಿಸಿ, ಬ್ರಿಟಿಷ್‌ ಆಡಳಿತದಲ್ಲಿದ್ದ ಎಲ್ಲಾ ಕನ್ನಡ ಸೀಮೆಗಳನ್ನು ಒಂದುಗೂಡಿಸಿ ಕರ್ನಾಟಕ ನಿರ್ಮಾಣವಾಗಲಿ ಎಂಬ ಒಡಕು ತಲೆದೋರಿತ್ತು. ಮೈಸೂರನ್ನು ಬಿಟ್ಟು ಕರ್ನಾಟಕ ನಿರ್ಮಾಣ ಸಾಧ್ಯವಿಲ್ಲ, ಸಾಧುವಲ್ಲ ಎಂಬುದು ಮೈಸೂರು ಜನತೆಯ ವಾದವಾಗಿತ್ತು. ಬ್ರಿಟಿಷ್‌ ಕರ್ನಾಟಕ ಮತ್ತು ಸಂಸ್ಥಾನ ಕರ್ನಾಟಕವೆಂಬ ಭಿನ್ನತೆ ಬೇಡ ಎಂಬ ಬೇಡಿಕೆಗೆ ಪೂರಕವಾಗಿ, ಸ್ವಾತಂತ್ರ್ಯ ಬರುವ ಮುನ್ನವೇ, ಭಾರತ ಒಕ್ಕೂಟಕ್ಕೆ ಸೇರುವ ಒಪ್ಪಂದಕ್ಕೆ ಮೈಸೂರು ಅರಸರು ಅಂಕಿತ ಹಾಕಿದ್ದರು. ಹಾಗಾಗಿ ಸ್ವಾತಂತ್ರ್ಯ ಬಂದ ಮೇಲೆ, ಜವಾಬ್ದಾರಿಯ ಸರಕಾರ ಮೈಸೂರಿನಲ್ಲಿ ಅಸ್ತಿತ್ವಕ್ಕೆ ಬಂತು. ಕೆ.ಸಿ. ರೆಡ್ಡಿ ಅವರು ಮೊದಲ ಮುಖ್ಯಮಂತ್ರಿಯಾದರು. ಮಾತ್ರವಲ್ಲ, ಕರ್ನಾಟಕ ರಚನೆಗೆ ಮೈಸೂರು ರಾಜ್ಯವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಾಷಾವಾರು ಪ್ರಾಂತ್ಯಗಳ ರಚನೆಗೆ ಇನ್ನಷ್ಟೇ ಅಡಿಪಾಯ ರೂಪುಗೊಳ್ಳಬೇಕಿತ್ತು. ಈ ಕುರಿತು ವಿಸ್ತೃತ ವರದಿ ನೀಡುವಂತೆ, ಅಲಹಾಬಾದ್‌ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಸ್‌.ಕೆ. ಧರ್‌ ಅವರ ನೇತೃತ್ವದಲ್ಲಿ ಆಯೋಗವೊಂದು ನೇಮಕಗೊಂಡಿತು. ಆಂಧ್ರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಭಾಷಾ ಪ್ರಾಂತ್ಯ ನಿರ್ಮಾಣಗಳ ಸಾಧಕ-ಬಾಧಕಗಳು ಮತ್ತು ಗಡಿಯನ್ನು ನಿರ್ಧರಿಸುವ ಗುರುತರ ಅಧ್ಯಯನದ ಹೊಣೆ ಈ ಸಮಿತಿಯ ಮೇಲಿತ್ತು. ಹಲವಾರು ತಿಂಗಳುಗಳ ಕಾಲ ಈ ಪ್ರದೇಶಗಳಲ್ಲಿ ಸಂಚರಿಸಿ ಜನಾಭಿಪ್ರಾಯ ಸಂಗ್ರಹಿಸಿದ ಸಮಿತಿಯು, ಭಾಷಾ ಸಂಸ್ಥಾನಗಳ ವಿಂಗಡಣೆ ಮತ್ತು ವಿಲೀನಕ್ಕೆ ಸರ್ಕಾರವಾಗಲೀ ಜನರಾಗಲೀ ಸಿದ್ಧರಿಲ್ಲ. ಹಾಗಾಗಿ ಇದನ್ನು ತಡೆ ಹಿಡಿಯಬೇಕು ಎಂದು ವರದಿ ನೀಡಿತು. ಧರ್‌ ಸಮಿತಿಯ ಇಂಥ ವರದಿಯಿಂದ ದೇಶದ ಹಲವೆಡೆಗಳಲ್ಲಿ ಅಸಮಾಧಾನ ತೀವ್ರವಾಗತೊಡಗಿತ್ತು. ಇದನ್ನು ಶಮನಗೊಳಿಸುವ ಸಲುವಾಗಿ ಜವಹರಲಾಲ್‌ ನೆಹರೂ, ಸರ್ದಾರ್‌ ಪಟೇಲ್‌ ಮತ್ತು ಪಟ್ಟಾಭಿ ಸೀತಾರಾಮಯ್ಯ ಅವರ (ಜೆ.ವಿ.ಪಿ ಸಮಿತಿ) ಸಮಿತಿಯನ್ನು ರಚಿಸಲಾಯಿತು. ಆದರೆ ಧರ್‌ ವರದಿಯನ್ನು ಜೆ.ವಿ.ಪಿ ಸಮಿತಿ ಅನುಮೋದಿಸಿದ್ದು, ಸಮಸ್ಯೆ ಮತ್ತಷ್ಟು ಬೆಳೆಯಿತು. ಭಾಷೆಗಳ ಆಧಾರದ ಮೇಲೆ ಪ್ರಾಂತ್ಯಗಳನ್ನು ನಿರ್ಮಿಸಬೇಕೆಂಬ ಕೂಗು ದೇಶದ ಹಲವೆಡೆಯಲ್ಲಿ ಬಲವಾಗಿತ್ತು.

ಮೈಸೂರು ಸಂಸ್ಥಾನದೊಂದಿಗೆ ಕರ್ನಾಟಕ

ಕರ್ನಾಟಕ ಏಕೀಕರಣ ಸಮ್ಮೇಳನದಲ್ಲಿ ಈ ಕುರಿತು ಕೆಲವು ಮಹತ್ವದ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು. ಮೈಸೂರನ್ನೊಳಗೊಂಡು ಕರ್ನಾಟಕ ಸ್ಥಾಪನೆಯಾಗಬೇಕು ಮತ್ತು ಮೈಸೂರು ಮಹಾರಾಜರೇ ಮುಖ್ಯಸ್ಥರಾಗಬೇಕು ಎಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು. 1951ರಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಬೆಂಗಳೂರಿಗೆ ಬಂದಿದ್ದಾಗ, ಕರ್ನಾಟಕ ಏಕೀಕರಣದ ಬಗ್ಗೆ ಮನವಿಯನ್ನೂ ಸಲ್ಲಿಸಲಾಯಿತು. 1952ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ, ಕಾಂಗ್ರೆಸ್‌ ಬಹುಮತ ಸಾಧಿಸಿತ್ತು. ಆದರೆ ಭಾಷಾ ಪ್ರಾಂತ್ಯಗಳ ನಿರ್ಮಾಣ ಸದ್ಯಕ್ಕೆ ಆದ್ಯತೆಯಲ್ಲ ಎಂಬ ಕಾಂಗ್ರೆಸ್‌ ಅಧಿವೇಶನದ ನಿರ್ಣಯ ಜನರಲ್ಲಿ ತೀವ್ರ ಅಸಮಾಧಾನ ಕೆರಳಿಸಿತು. 1953ರಲ್ಲಿ, ಎಸ್.‌ ಫಜಲ್‌ ಅಲಿ, ಎಚ್.‌ ಎನ್.‌ ಕುಂಜ್ರು ಮತ್ತು ಕೆ.ಎಂ. ಫಣಿಕ್ಕರ್‌ ಅವರ ಸಮಿತಿಯನ್ನು ನೇಮಿಸಲಾಯಿತು. ಈ ಕುರಿತು ವಿಸ್ತೃತ ಅಧ್ಯಯನ ನಡೆಸಿದ ಸಮಿತಿ, ಕರ್ನಾಟಕ ರಾಜ್ಯ ನಿರ್ಮಾಣ ಆಗಬೇಕೆಂದು ಸಲಹೆ ನೀಡಿತು. ನೂತನ ರಾಜ್ಯಕ್ಕೆ ಕರ್ನಾಟಕ ಎಂದೇ ಹೆಸರಿಡಬೇಕೆಂದು ಶಿಫಾರಸು ಮಾಡಿತು. ರಾಜ್ಯದ ಗಡಿಯ ಕುರಿತಾಗಿಯೂ ಕೆಲವು ನಿಶ್ಚಿತ ಸಲಹೆಗಳನ್ನು ನೀಡಿತ್ತು. ಭಾರತದಲ್ಲಿ ಒಟ್ಟು 15 ರಾಜ್ಯಗಳನ್ನೂ 7 ಕೇಂದ್ರಾಡಳಿತ ಪ್ರದೇಶಗಳನ್ನೂ ರಚಿಸಲು ಸಮಿತಿ ಶಿಫಾರಸು ಮಾಡಿತ್ತು. ಈ ಸಮಿತಿಯ ಸಲಹೆಗಳ ಬಗ್ಗೆ ಕರ್ನಾಟಕದ ಜನ ಬಹುಪಾಲು ಸಂತೋಷ ವ್ಯಕ್ತಪಡಿಸಿದ್ದರೂ, ಕಾಸರಗೋಡನ್ನು ಕೇರಳಕ್ಕೆ ಸೇರಿಸುವ ಮತ್ತು ಬಳ್ಳಾರಿಯ ಕೆಲ ಭಾಗಗಳನ್ನು ಆಂಧ್ರಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ವಿರೋಧಿಸಿದ್ದರು.

1956ರ ಜನವರಿ 16ರಂದು, ರಾಜ್ಯಗಳ ಪುನರ್ನಿರ್ಮಾಣ ಕುರಿತ ವಿಧೇಯಕವನ್ನು ಸಿದ್ಧಪಡಿಸಿದ ಕೇಂದ್ರ ಸರಕಾರ, ಮಾರ್ಚ್‌ 16ರಂದು ಅದನ್ನು ಲೋಕಸಭೆ ಮತ್ತು ರಾಜ್ಯಸಭೆಗಳ ಮುಂದಿಟ್ಟಿತು. ಲೋಕಸಭೆ 1956ರ ಜೂನ್‌ 10ರಂದು ಇದನ್ನು ಅಂಗೀಕರಿಸಿದರೆ, ರಾಜ್ಯಸಭೆಯಲ್ಲಿ ಆಗಸ್ಟ್‌ ೨೫ರಂದು ಅಂಗೀಕರಿಸಲಾಯಿತು. ಆಗಸ್ಟ್‌ ೩೧ರಂದು ರಾಷ್ಟ್ರಪತಿಗಳ ಅಂಕಿತವೂ ಆಗಿ, ಕಾಯಿದೆಯಾಗಿ ಜಾರಿಯಾಯಿತು. ಅದೇ ವರ್ಷ ನವೆಂಬರ್‌ 1ರಂದು ಅಸ್ತಿತ್ವಕ್ಕೆ ಬಂದ ʻವಿಶಾಲ ಮೈಸೂರುʼ ರಾಜ್ಯಕ್ಕೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದರು ಶುಭ ಕೋರಿದರು. ಏಕೀಕೃತ ಕನ್ನಡನಾಡಿನ ಪ್ರಥಮ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್‌ ಮತ್ತು ಮೊದಲ ಮುಖ್ಯಮಂತ್ರಿಯಾಗಿ ಎಸ್‌. ನಿಜಲಿಂಗಪ್ಪನವರು ಅಧಿಕಾರ ವಹಿಸಿಕೊಂಡರು. 1973ರ ನವೆಂಬರ್‌ 1ರಂದು ವಿಶಾಲ ಮೈಸೂರು ರಾಜ್ಯವು ಕರ್ನಾಟಕವಾಗಿ ಬದಲಾಯಿತು.

ಇದನ್ನೂ ಓದಿ: Kannada Rajyotsava : ಕನ್ನಡ ರಾಜ್ಯೋತ್ಸವ ದಿನ ಪಂಚ ಗೀತೆಗಳ ಗಾಯನ ಕಡ್ಡಾಯ

Exit mobile version