ಬೆಂಗಳೂರು: ಹಾವೇರಿಯಲ್ಲಿ ಜನವರಿ 6,7 ಹಾಗೂ 8ರಂದು ನಡೆಯುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗೋಷ್ಠಿಗಳಲ್ಲಿ ಹಾಗೂ ಸನ್ಮಾನಿತರಲ್ಲಿ ಮುಸ್ಲಿಮರನ್ನು ಪರಿಗಣಿಸಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ, ಈ ರೀತಿ ಮಾಡುವುದು ಕನ್ನಡ ಸಾಹಿತ್ಯದ ಪರಂಪರೆಗೆ ಮಾಡುವ ಅವಮಾನ ಎಂದಿದ್ದಾರೆ.
ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದವರನ್ನು ಕಡೆಗಣಿಸಲಾಗಿದೆ ಎಂದು ಎಡಪಂಥೀಯ ಲೇಖಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಪರ್ಯಾಯ ಸಮ್ಮೇಳನ ನಡೆಸುವ ಕುರಿತೂ ಚರ್ಚೆಗಳು ನಡೆಯುತ್ತಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಹೇಶ್ ಜೋಶಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಯಾವುದೇ ಜಾತಿ, ಧರ್ಮ ಅಥವಾ ಸಿದ್ಧಾಂತಕ್ಕೆ ಸೀಮಿತವಾದದಲ್ಲ. ಇಲ್ಲಿರುವುದು ಕನ್ನಡ ಜಾತಿ ಮತ್ತು ಕನ್ನಡ ಧರ್ಮ ಮಾತ್ರ. ಜಾತಿ ಮತದ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಯನ್ನು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಈ ರೀತಿ ಮಾಡುವುದು, ಕನ್ನಡವನ್ನು ಸಾರ್ವಭೌಮವಾಗಿಸುವ ಉನ್ನತ ಆಶಯದಿಂದ ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿದ ಕನ್ನಡ ಸಾಹಿತ್ಯ ಪರಂಪರೆಗೆ ಮಾಡುವ ಅವಮಾನ.
ಕನ್ನಡ ಸಾಹಿತ್ಯ ಪರಿಷತ್ ಎಡ ಪಂಥ, ಬಲ ಪಂಥ, ಮೇಲ್ಪಂಥ, ಕೆಳ ಪಂಥ, ಮಧ್ಯ ಪಂಥ ಹೀಗೆ ಯಾವ ಚೌಕಟ್ಟಿಗೂ ಸಿಲುಕುವಂತಹದಲ್ಲ. ಇದು ‘ಕನ್ನಡ ಪಂಥ’ಕ್ಕೆ ಸೇರಿದ್ದು. ಇಲ್ಲಿ ಅತಿ ಹೆಚ್ಚಿನ ಮಹತ್ವವಿರುವುದು ಕನ್ನಡ ನಾಡು-ನುಡಿ-ಕನ್ನಡಿಗರಿಗೆ. ಕನ್ನಡಿಗ ಎನ್ನುವುದೊಂದೇ ಆಯ್ಕೆಯಲ್ಲಿ ಬಳಸಿದ ಮಾನದಂಡ ಎಂದು ಮಹೇಶ್ ಜೋಶಿ ಸ್ಪಷ್ಟ ಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯು ಅನೇಕ ವಿಶೇಷತೆಗಳನ್ನು ಸಾಹಿತ್ಯ ಪರಿಷತ್‌ನಿಂದ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಸಲ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ ಎಂದು ಹೇಳಿದೆ.
ಕನ್ನಡ ತಾಯಿಯ ಭುವನೇಶ್ವರಿಯ ಚಿತ್ರವು ಮುಖಪುಟದಲ್ಲಿದ್ದು, ಕನ್ನಡ ಬಾವುಟದ ಜತೆಯಲ್ಲಿ ಭಕ್ತಿ ಭಾವ ಮೂಡಿ ಬರುವ ಭಂಗಿಯ ಈ ಚಿತ್ರವು ಆಹ್ವಾನ ಪತ್ರಿಕೆಯ ವಿಶೇಷತೆಯನ್ನು ಹೆಚ್ಚು ಮಾಡಿದೆ. ಇಡೀ ಆಹ್ವಾನ ಪತ್ರಿಕೆಯ ವಿನ್ಯಾಸವು ಕನ್ನಡದ ಧ್ವಜದ ನೆನಪನ್ನು ತರುವಂತಿದ್ದು, ಇದರ ಸ್ವರೂಪವೇ ಕನ್ನಡಮಯವಾಗಿದೆ.
ಇದೇ ಮೊಟ್ಟ ಮೊದಲ ಸಲ ಪ್ರಧಾನ ವೇದಿಕೆಗೆ ‘ಕನಕ-ಶರೀಫ-ಸರ್ವಜ್ಞ’ ಮೂವರ ಹೆಸರನ್ನು ಇಡಲಾಗಿದ್ದು “ಸಾಮರಸ್ಯದ ಭಾವ-ಕನ್ನಡದ ಜೀವ” ಎನ್ನುವ ಧ್ಯೇಯ ವಾಕ್ಯವನ್ನೂ ನೀಡಲಾಗಿದೆ. ಇದು ಸಮ್ಮೇಳನ ಹೊಂದಿರುವ ಉನ್ನತ ಆಶಯದ ದ್ಯೋತಕವಾಗಿದೆ.
ಪ್ರಧಾನ ವೇದಿಕೆ ಎನ್ನುವ ಪರಿಕಲ್ಪನೆಯನ್ನು ಮೀರಿ ಇದೇ ಮೊದಲ ಸಲ ಮೂರು ಸಮಾನ ವೇದಿಕೆಗಳನ್ನು ರೂಪಿಸಲಾಗಿದೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿಯೇ ಇದೇ ಮೊದಲ ಸಲ 32 ಗೋಷ್ಠ್ಠಿಗಳು ಏರ್ಪಾಟಾಗಿದ್ದು ಒಟ್ಟು 154 ಗಣ್ಯರು ಭಾಗವಹಿಸುತ್ತಿದ್ದಾರೆ. ಇದು ನಿಜಕ್ಕೂ ದಾಖಲೆಯಾಗಿದ್ದು ಹಿಂದಿನ ಸಮ್ಮೇಳನಗಳಲ್ಲಿ ಇದ್ದ ಗೋಷ್ಠಿ ಮತ್ತು ಭಾಗವಹಿಸಿದವರ ಗಣ್ಯರ ಪಟ್ಟಿ ನೋಡಿದರೆ ಇದರ ಮಹತ್ವ ಅರಿವಾಗುತ್ತದೆ.
ಗೋಷ್ಠಿಗಳ ವಿವರ
ಸ್ಥಳ | ಒಟ್ಟು ಗೋಷ್ಠಿಗಳು | ಭಾಗವಹಿಸಿದವರು |
ಕಲಬುರಗಿ | 21 | 94 |
ಧಾರವಾಡ | 22 | 89 |
ಮೈಸೂರು | 20 | 110 |
ರಾಯಚೂರು | 17 | 95 |
ಶ್ರವಣಬೆಳಗೊಳ | 14 | 55 |
ಗಂಗಾವತಿ | 12 | 59 |
ಗೋಷ್ಠಿಗಳಲ್ಲಿ ಈವರೆಗೂ ಚರ್ಚೆಯಾಗದ ವಿಷಯಗಳ ಕುರಿತು ಆದ್ಯತೆಯನ್ನು ನೀಡುರುವುದು ಮಹತ್ವದ ಸಂಗತಿಯಾಗಿದೆ. ಈ ಹಿಂದೆ ಸಮ್ಮೇಳನಾಧ್ಯಕ್ಷರಾದವರು ವಿಶೇಷ ಅತಿಥಿಗಳಾಗಿರುತ್ತಿದ್ದವರು ಪ್ರಬಂಧ ಮಂಡಿಸಿದ ಉದಾಹರಣೆಗಳಿಲ್ಲ. ಇದೇ ಮೊದಲ ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದ ಡಾ. ಎಸ್.ಎಲ್. ಭೈರಪ್ಪನವರು ವಿಶೇಷ ಉಪನ್ಯಾಸ ನೀಡುತ್ತಿದ್ದು, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಅವರ ಜೊತೆಗೆ ಈ ಗೋಷ್ಠಿಯಲ್ಲಿ ಇನ್ನೊಬ್ಬರು ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಶ್ರೀ ವೀರಪ್ಪ ಮೊಯಲಿಯವರೂ ಇರುತ್ತಿದ್ದು, ಇಬ್ಬರೂ ಸರಸ್ವತಿ ಸಮ್ಮಾನ ಪುರಸ್ಕೃತರ ಕುರಿತಾಗಿ ಪುಸ್ತಕಗಳು ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.
86ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 86 ಜನ ಸಾಧಕರಿಗೆ ಸನ್ಮಾನ ಮಾಡಲಾಗುತ್ತಿದ್ದು ನಾಡಿನ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶದಿಂದ ಕೂಡ ಸಾಧಕರು ಬರುತ್ತಿರುವುದು ವಿಶೇಷ. ಫೀಲ್ಡ್ ಮಾರ್ಷಲ್ ಕಾರಿಯಪ್ಪನವರ ಮಗ ಏರ್ ಮಾರ್ಷಲ್ ಕೆ.ಸಿ. ಕಾರಿಯಪ್ಪ, ಕನ್ನಡಕ್ಕೆ ಮೊದಲ ನಿಘಂಟು ನೀಡಿದ ಫರ್ಡಿನೆಂಡ್ ಕಿಟಲ್ ಅವರ ಮರಿ ಮೊಮ್ಮಗ ಯಾರ್ಕ್ ಕಿಟಲ್, ಮಾಲ್ಡಿವ್ ದೇಶದ ಗೌರವ ಕೌನ್ಸಿಲ್ ಜನರಲ್ ಡಾ. ವಿ.ಜಿ. ಜೋಸೆಪ್, ಜರ್ಮನಿ ನಗರಸಭಾ ಸದಸ್ಯರಾದ ವಿದುಷಿ ನಂದಿನಿ ನಾರಾಯಣ್, ಕತಾರ್ ದೇಶದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಹಿರಿಯ ಚಿತ್ರ ಕಲಾವಿದ ಶ್ರೀ ಬಿ.ಕೆ.ಎಸ್. ವರ್ಮ, ವಿಶ್ವ ಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ ಡಾ. ಕೆ.ಪಿ. ಅಶ್ವಿನಿ, ಹಿರಿಯ ಕಲಾವಿದ ಶ್ರೀ ವೈಜನಾಥ ಬಿರಾದಾರ ಮೊದಲಾದ ಅನೇಕ ವಿಶಿಷ್ಟ ಸಾಧಕರು ಇದರಲ್ಲಿ ಸೇರಿರುವುದು ವಿಶೇಷವಾಗಿದೆ. ಸಮಾಜದ ಎಲ್ಲಾ ಕ್ಷೇತ್ರಗಳಿಂದಲೂ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದ್ದು, ಅರ್ಜಿಯನ್ನು ಆಹ್ವಾನಿಸದೆ ಎಲೆಮರೆಯ ಕಾಯಿಯಂತೆ ಇರುವ ಅನೇಕ ಸಾಧಕರನ್ನು ಈ ಸಲ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಸನ್ಮಾನವು ಮೂರೂ ದಿನವು ನಡೆಯಲಿದ್ದು ಎಲ್ಲಾ ಸನ್ಮಾನಿತರ ಸಾಧನೆಗೆ ಮಹತ್ವ ದೊರಕಲಿದೆ.
ಆಹ್ವಾನ ಪತ್ರಿಕೆಯನ್ನು ರೂಪಿಸುವಲ್ಲಿ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವಲ್ಲಿ ಹದಿನಾಲ್ಕು ಜನರ ಗಣ್ಯರ ಆಯ್ಕೆ ಸಮಿತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದ್ದು ಈ ಸಮಿತಿಯು ಹಲವು ಸಭೆಗಳನ್ನು ನಡೆಸಿ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ ಮತ್ತು ಪ್ರತಿಭಾ ನ್ಯಾಯಕ್ಕೆ ಮಹತ್ವ ನೀಡಿ ಪಾರದರ್ಶಕವಾಗಿ ಆಯ್ಕೆಯನ್ನು ಮಾಡಲಾಗಿದೆ. ಕಳೆದ ಸಾಹಿತ್ಯ ಸಮ್ಮೇಳನಗಳಲ್ಲಿ ಅವಕಾಶವನ್ನು ಪಡೆದವರನ್ನು ಹೊರತು ಪಡಿಸಿ ಸಮ್ಮೇಳನದಲ್ಲಿ ಇದುವರೆಗೂ ಅವಕಾಶವನ್ನು ಪಡೆಯದ ಎಲೆ ಮರೆಯ ಕಾಯಿಯಂತಿರುವ ಪ್ರತಿಭಾವಂತರಿಗೆ ಅವಕಾಶವನ್ನು ನೀಡಲು ಪ್ರಯತ್ನಿಸಲಾಗಿದೆ, ಇಲ್ಲಿಯೂ ಕೂಡ ಯುವ ಪ್ರತಿಭೆಗಳಿಗೆ ಮಹತ್ವವನ್ನು ನೀಡಲಾಗಿದೆ.
ಇದು ಏಕ ವ್ಯಕ್ತಿಯ ಆಯ್ಕೆಯಲ್ಲದೆ ಸಮಾಜದ ಎಲ್ಲಾ ಸ್ತರಗಳಿಂದ ಬಂದ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸನ್ಮಾನಿತರನ್ನು ಆಯ್ಕೆ ಮಾಡುವ ಸಮಿತಿಯ ಗಣ್ಯರು ಮಾಡಿದ ಪ್ರಜಾಸತ್ತಾತ್ಮಕವಾದ ಆಯ್ಕೆಯಾಗಿದೆ ಎನ್ನುವುದು ಗಮನಾರ್ಹವಾಗಿದೆ ಎಂದು ಸಾಹಿತ್ಯ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | Kannada Sahitya Sammelana | ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳ ನೋಂದಣಿ ಅವಧಿ ವಿಸ್ತರಣೆ, ನೇರ ನೋಂದಣಿಗೆ ಅವಕಾಶ