Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ದ್ರಾವಿಡ ಭಾಷೆಗಳು ಸಂಸ್ಕೃತದ ಸಾಕು ಮಕ್ಕಳು: ಪ್ರಧಾನ್‌ ಗುರುದತ್‌

pradhan gurudath

ಹಾವೇರಿ: ಸಂಸ್ಕೃತದಿಂದ ಪ್ರೇರಿತ ಪೋಷಿತವಾಗಿರುವ ಎಲ್ಲ ಭಾಷೆಗಳೂ ಸಂಸ್ಕೃತದ ಮಕ್ಕಳೇ. ಕೆಲವು ಸ್ವಂತ ಮಕ್ಕಳು, ಕೆಲವು ಸಾಕು ಮಕ್ಕಳು. ಆರ್ಯ ಭಾಷೆಗಳೆಲ್ಲವೂ ಸ್ವಂತ ಮಕ್ಕಳಾದರೆ, ದ್ರಾವಿಡ ಭಾಷೆಗಳು ಸಾಕು ಮಕ್ಕಳು. ಅನೇಕ ಸಲ ಸ್ವಂತ ಮಕ್ಕಳಿಗಿಂತಲೂ ಸಾಕು ಮಕ್ಕಳೇ ಪ್ರತಿಭಾಶಾಲಿಗಳಾಗಿರುತ್ತಾರೆ. ಎಂಟು ಜ್ಞಾನಪೀಠ, ಎರಡು ಸರಸ್ವತಿ ಸಮ್ಮಾನ್‌ ಪಡೆದ ಈ ಕನ್ನಡದ ಕುವರಿ ಭಾರತಮಾತೆಗೆ ಮುದ್ದಿನ ಕುವರಿಯಾಗಿದ್ದಾಳೆ ಎಂದು ಹಿರಿಯ ಸಾಹಿತಿ ಪ್ರಧಾನ್‌ ಗುರುದತ್‌ ಹೇಳಿದರು.

ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ (ಕನಕ- ಶರೀಫ- ಸರ್ವಜ್ಞ ವೇದಿಕೆ) ಯಲ್ಲಿ ನಡೆದ “ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆʼ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯ ವೈಶಿಷ್ಟ್ಯದ ಬಗ್ಗೆ ಮಾತನಾಡಿದರು. ಕನ್ನಡವೂ ಸೇರಿದಂತೆ ಭಾರತದ ಎಲ್ಲ ಭಾಷೆಗಳೂ ʼಭಾರತ ಜನನಿಯ ತನುಜಾತೆʼಯರು. ಈ ಹಾಡಿನ ಮೂಲಕ ಕುವೆಂಪು ಕನ್ನಡಿಗರ ಮನವನ್ನು ಶಾಶ್ವತವಾಗಿ ಗೆದ್ದುಕೊಂಡಿದ್ದಾರೆ. ದೇಶಭಾಷೆಗಳಲ್ಲಿಯೇ ನಾಡಗೀತೆ ತುಂಬಾ ವಿಶಿಷ್ಟವಾದುದು. ಇದು ಕುವೆಂಪು ಅವರ ದೇಶಪ್ರೇಮದ ನಿದರ್ಶನವೂ ಹೌದು. ಇದರ ಮೂಲಕ ಯಾವ ಕವಿಯೂ ಗಳಿಸಲಾಗದ ಸ್ಥಾನವನ್ನು ಜನಮನದಲ್ಲಿ ಅವರು ಗೆದ್ದುಕೊಂಡಿದ್ದಾರೆ ಎಂದರು.

ಕವಿ ರವೀಂದ್ರನಾಥ ಟಾಗೋರರು ವಿಶ್ವಕವಿಯೆಂದು ಕೀರ್ತಿತರಾಗಿದ್ದಾರೆ. ಹಾಗೆಯೇ ಕುವೆಂಪು ಅವರೂ ಬರಿಯ ರಾಷ್ಟ್ರಕವಿಯಲ್ಲ, ಅವರು ವಿಶ್ವಕವಿ. ಅವರನ್ನು 1970ರಷ್ಟು ಹಿಂದೆಯೇ ಕವಿ ದ.ರಾ ಬೇಂದ್ರೆಯವರು ವಿಶ್ವಕವಿಯೆಂದು ಬಣ್ಣಿಸಿದ್ದರು. ʼʼಯುಗದ ಕವಿಗೆ, ಜಗದ ಕವಿಗೆ, ಮಣಿಯದವರು ಯಾರು?ʼʼ ಎಂದಿದ್ದರು. ಹಾಗೆಯೇ ಹದಿನಾಲ್ಕಕ್ಕೂ ಅಧಿಕ ಭಾಷೆಗಳಿಗೆ ಕಾದಂಬರಿಗಳ ಅನುವಾದಗೊಂಡಿರುವ ಎಸ್‌.ಎಲ್ ಭೈರಪ್ಪನವರನ್ನು ʼವಿಶ್ವಸಾಹಿತಿʼ ಎಂದು ಕರೆಯಬಹುದು. ಕುವೆಂಪು ಅವರ ವಿಶ್ವಮಾನವ ಸಂದೇಶ ಹದಿನಾಲ್ಕು ಭಾಷೆಗಳಿಗೆ ಅನುವಾದಗೊಂಡು ಜನಮನ್ನಣೆ ಪಡೆದಿದೆ ಎಂದರು.

ಕವಿ ಬಂಕಿಮಚಂದ್ರ ಚಟರ್ಜಿಯವರ ʼವಂದೇ ಮಾತರಂʼ ಹಾಡಿಗೆ ಅಧಿಕೃತ ರಾಷ್ಟ್ರಗೀತೆಯ ಸ್ಥಾನಮಾನ ಸಿಗಲಿಲ್ಲ. ಆದರೆ ಅದು ಜನಮನ್ನಣೆ ಪಡೆಯಿತು. ವಂದೇಮಾತರಂ ಹಾಡಿನಂತೆಯೇ ಕುವೆಂಪುರವರ ಜೈ ಭಾರತ ಜನನಿಯ ಹಾಡು ಕೂಡ ವಿವಾದಕ್ಕೆ ಒಳಗಾಯಿತು. ಶಂಕರ ರಾಮಾನುಜರ ಹೆಸರಿದ್ದು ಮಧ್ವರ ಹೆಸರಿಲ್ಲವೆಂದು ವಿವಾದವಾಯಿತು. ಆದರೆ ಇದು ನಾಮಸೂಚಿಯಲ್ಲ. ವಂದೇ ಮಾತರಂ ಗೀತೆಯನ್ನು ಹಾಡುವುದನ್ನು ವಿರೋಧಿಸಿ 2017ರಲ್ಲಿ ಮೊಕದ್ದಮೆ ಹೂಡಲಾಯಿತು. ಆಗ ನ್ಯಾಯಪೀಠ ನ್ಯಾಯಪ್ರಜ್ಞೆಯಿಂದ, ವಂದೇಮಾತರಂ ಕೂಡ ಪರ್ಯಾಯ ರಾಷ್ಟ್ರಗೀತೆ, ಅದನ್ನೂ ಹಾಡಬೇಕು ಎಂದಿತು. ಇತ್ತೀಚೆಗೆ ಹಿಜಾಬ್‌ ವಿಚಾರದಲ್ಲಿ ವಿದ್ಯಾರ್ಥಿನಿಯರನ್ನು ಮುಂದಿಟ್ಟುಕೊಂಡು ಹೋದಂತೆ ಇದೂ ಆಗಿತ್ತು. ಇದನ್ನು ನೋಡಿದರೆ ಭಾರತೀಯತೆ. ಹಿಂದುತ್ವ ಎಂಥ ಅಪಾಯದಲ್ಲಿದೆ ಎಂಬುದು ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶತಮಾನದ ಧೀಮಂತ ಪುರುಷರ ಸ್ಮರಣೆ

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಬೇಕಿದ್ದ ಹಿರಿಯ ಕಾದಂಬರಿಕಾರ ಎಸ್‌. ಎಲ್‌ ಭೈರಪ್ಪ ಅವರ ಅನುಪಸ್ಥಿತಿಯಲ್ಲಿ, ಅವರ ಸಂದೇಶವನ್ನು ಪ್ರಧಾನ್‌ ಗುರುದತ್‌ ವಾಚಿಸಿದರು. ʼʼಕುವೆಂಪು ಕವನದಲ್ಲಿ ಕನ್ನಡವನ್ನು ಉದ್ದೇಶಿಸಿ ಜೈ ಭಾಋತ ಜನನಿಯ ತನುಜಾತೆ ಎಂದಿದ್ದರೂ, ಭಾರತದ ಎಲ್ಲ ಭಾಷೆಗಳೂ ಸಂಸ್ಕೃತದ ತನುಜಾತೆಯರೇ ಆಗಿದ್ದಾರೆ. ಭಾರತದ ಎಲ್ಲ ಭಾಷೆಗಳಿಗೂ ಮಾತೃ ಸ್ಥಾನದಲ್ಲಿದ್ದುಕೊಂಡು ಅದು ಪ್ರೇರಕ- ಪೋಷಕವಾಗಿದೆ. ಅವುಗಳ ಸಾಹಿತ್ಯದ ಸಂವರ್ಧನೆಗೆ ಕಾರಣವಾಗಿದೆ. ರಾಮಾಯಣ ಮಹಾಭಾರತ ಸೇರಿದಂತೆ ಅಲ್ಲಿನ ಎಲ್ಲ ಪ್ರಮುಖ ಸಂಸ್ಕೃತ ಕೃತಿಗಳೂ ಕನ್ನಡಕ್ಕೆ ಬಂದಿವೆ. ಹಾಗೆಯೇ ನನ್ನ ಅನೇಕ ಕೃತಿಗಳೂ ಹಿಂದಿ ಸೇರಿದಂತೆ ಹದಿನಾಲ್ಕಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿ ಭಾರತದ ಜನಗಳಿಗೆ ತಲುಪಿವೆ. ಹೀಗೆ ತಲುಪಲು ಕಾರಣವಾಗಿರುವುದು ಸಂಸ್ಕೃತದ ಅನ್ವಯತೆ. ಭಾರತೀಯ ಭಾಷೆಗಳ ಬಹುತೇಕ ಶಬ್ದಸಂಪತ್ತು ಸಂಸ್ಕೃತದಿಂದಲೇ ಪಡೆದಿವೆ. ಈ ಕಾರಣದಿಂದಲೇ ನಾನು ಗುಜರಾತಿಗೆ ಹೋದಾಗ ಗುಜರಾತಿ ಭಾಷೆಯನ್ನು ಸ್ಥೂಲವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಭಾರತದ ಭಾಷೆಗಳ ಶಬ್ದಕೋಶ ಮಾತ್ರವಲ್ಲ ವ್ಯಾಕರಣವೂ ಸಂಸ್ಕೃತವನ್ನೇ ಆಶ್ರಯಿಸಿವೆ. ಮೊದಲ ಹಂತದಲ್ಲಿ ದೇಶ ಭಾಷೆಗಳ ಸಮೃದ್ಧಿಗೆ ಸಂಸ್ಕೃತ ಕಾರಣವಾಗಿದ್ದರೆ, ಎರಡನೆಯ ಹಂತದಲ್ಲಿ ಸಂಸ್ಕೃತ ಭಾಷೆಯ ಸಂವರ್ಧನೆಗೆ ದೇಶ ಭಾಷೆಗಳಿಂದ ಅನುವಾದಿತವಾಗಿರುವ ಸಾಹಿತ್ಯಗಳ ಕೊಡುಗೆಯೂ ಕಾರಣವಾಗಿದೆ. ನನ್ನ ಏಳು ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿವೆ. ಎಲ್ಲ ಭಾಷೆಗಳಿಗೂ ಹಿರಿಯಳಾಗಿ ನಿಂತಿರುವ ಸಂಸ್ಕೃತ ಮಾತೆಯಿಂದ ಸೌಹಾರ್ದ, ಸಾಮರಸ್ಯಗಳು ನಮ್ಮಲ್ಲಿ ನೆಲೆಯೂರುವಂತಾಗಿದೆ. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳೊಂದಿಗೆ ಭಾರತ ಮಾತೆಯ ಸೌಹಾರ್ದ ಸಂಬಂಧ ಸಂತೋಷಪೂರ್ವಕವಾಗಿ ಮುಂದುವರಿಯಲಿʼʼ ಎಂದು ಭೈರಪ್ಪ ಸಂದೇಶ ನೀಡಿದರು.

ಪ್ರಸ್ತಾವನೆ ಮಾಡಬೇಕಿದ್ದ ಕಾದಂಬರಿಕಾರ ಪ್ರೇಮಶೇಖರ ಹಾಗೂ ಉಪಸ್ಥಿತರಿರಬೇಕಿದ್ದ ವೀರಪ್ಪ ಮೊಯ್ಲಿಯವರು ಗೈರುಹಾಜರಾಗಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಕ್ಕೆ ಬಂದಿದ್ದ ಮಂಡ್ಯ ಜಿಲ್ಲೆಯ ಶಿಕ್ಷಕ ಹೃದಯಾಘಾತದಿಂದ ಮೃತ್ಯು

Exit mobile version