ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ಬೆಂಗಳೂರು ಹಾಗೂ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಕಡ್ಡಾಯ (Kannada signboard rules) ಮಾಡಲಾಗಿದ್ದು, ಇದನ್ನು ಅಳವಡಿಸಲು ಫೆ.28 ಕೊನೆಯ ದಿನವಾಗಿತ್ತು. ಈ ಅವಧಿ ಇಂದು ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕಠಿಣ ನಿರ್ಧಾರಕ್ಕೆ ಮುಂದಾಗಿದೆ. ಇನ್ನೊಂದು ದಿನ ಅವಕಾಶವನ್ನು ನೀಡುತ್ತಿದ್ದು, ಗುರುವಾರ ಸಂಜೆಯೊಳಗೆ ಮಳಿಗೆಗಳ ಮುಂದೆ ಕನ್ನಡ ಬೋರ್ಡ್ ಅಳವಡಿಸದಿದ್ದರೆ ಅಂಗಡಿ ಬಂದ್ ಮಾಡುವುದಾಗಿ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಕನ್ನಡ ಬೋರ್ಡ್ ಅಳವಡಿಸದಿದ್ದರೆ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಕಡ್ಡಾಯ ಕನ್ನಡ ನಾಮಫಲಕ ಬಳಸದವರಿಗೆ ಮತ್ತೊಂದು ದಿನ ಅವಕಾಶವನ್ನು ಕೊಡುತ್ತೇವೆ. ನಾಳೆ (ಗುರುವಾರ) ಸಂಜೆವರೆಗೆ ನಾಮಫಲಕ ಬದಲಾವಣೆಗೆ ಅವಕಾಶವನ್ನು ಕೊಡುತ್ತೇವೆ. ನಾಳೆಯೊಳಗೆ ಬದಲಾಯಿಸದಿದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಠಿಣ ಕ್ರಮದ ವಾರ್ನಿಂಗ್ ಕೊಟ್ಟ ಬಿಬಿಎಂಪಿ ಕಮಿಷನರ್
ಈಗಾಗಲೇ ಶೇಕಡಾ 90ರಷ್ಟು ನಾಮಫಲಕ ಬದಲಾಗಿದೆ. ಇನ್ನು ಉಳಿದಿರುವುದು 3 ಸಾವಿರ ನಾಮಫಲಕ ಮಾತ್ರ. ಅವರು ನಾಳೆ ಸಂಜೆಯೊಳಗೆ ಬದಲಾಯಿಸಬೇಕು. ಇಲ್ಲದಿದ್ದರೆ ಅಂಗಡಿ ಬಂದ್ ಮಾಡ್ತೇವೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಅವಧಿ ಕೇಳಿದ ಎಸ್‌ಬಿಐ, ಕೆನಾರಾ ಬ್ಯಾಂಕ್‌ಗಳು!
ಕೆಲವು ಅಂತರರಾಷ್ಟ್ರೀಯ ಕಂಪನಿಗಳು ಹಾಗೂ ಎಸ್‌ಬಿಐ, ಕೆನರಾ ಬ್ಯಾಂಕ್‌ಗಳು ಸಹ ಇಂಗ್ಲಿಷ್ ಬೋರ್ಡ್‌ಗಳನ್ನು ಹಾಕಿಕೊಂಡಿವೆ. ಹೀಗಾಗಿ ಅವರು ನಾಮಫಲಕ ಅಳವಡಿಕೆಗೆ ಮತ್ತಷ್ಟು ಗಡುವು ಕೇಳಿದ್ದಾರೆ. ಈ ಬಗ್ಗೆ ನಾಳೆ ಸಂಜೆ ಅಂತಿಮ ತೀರ್ಮಾನವನ್ನು ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಾಮಫಲಕ ಅಳವಡಿಕೆಗೆ ವೆಚ್ಚ ಅಧಿಕ
ನಾಮಫಲಕವನ್ನು ಕನ್ನಡದಲ್ಲಿ ಅಳವಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ. ಆದರೆ, ಹೊಸ ಬೋರ್ಡ್ ಅಳವಡಿಕೆಗೆ ಸುಮಾರು 30,000 ರೂಪಾಯಿಗಳವರೆಗೆ ವೆಚ್ಚ ತಗುಲುತ್ತದೆ. ಹೀಗಾಗಿ ಕೆಲವರಿಗೆ ಹಣ ಹೊಂದಿಸಲು ವಿಳಂಬವಾಗುತ್ತಿದೆ. ಹೀಗಾಗಿ ಗಡುವಿನ ಅವಧಿವರೆಗೆ ಸಮಯಾವಕಾಶ ನೀಡಬೇಕು ಎಂದು ವಾರದ ಹಿಂದೆ ಕೆಲವು ವ್ಯಾಪಾರಸ್ಥರು ಕೋರಿದ್ದರು. ಜಯನಗರದಲ್ಲಿ ಕೆಲವು ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಕೆ ಮಾಡಿರದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ದಾಳಿ ನಡೆಸಿದ್ದವು. ಇದರಿಂದ ಸಾಕಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಕ್ಷಣೆ ಬೇಕು ಎಂದು ಬಿಬಿಎಂಪಿಗೆ ವ್ಯಾಪಾರಿಗಳು ಮನವಿ ಮಾಡಿದ್ದರು. ಆದರೆ, ಗಡುವು ಈಗ ಅಂತ್ಯವಾಗಿರುವುದರಿಂದ ಇನ್ನೊಂದು ದಿನ ಮಾತ್ರ ಅವಕಾಶ ನೀಡುವುದಾಗಿ ಬಿಬಿಎಂಪಿ ಹೇಳಿದೆ.
ಇದನ್ನೂ ಓದಿ: Sedition case: ಭಾರತದಲ್ಲಿ ಪಾ’ಕೈ’ಸ್ತಾನ ಬೆಂಬಲಿಸುವವರ ‘ಕೈಗಳ ಹೆಡೆಮುರಿ ಕಟ್ಟಿ; ಕಾಂಗ್ರೆಸ್ ಮೇಲೆ ಬಿಜೆಪಿ ಕಿಡಿ
ಮಾ. 5ರಂದು ಮತ್ತೆ ಬೀದಿಗಿಳಿಯುತ್ತೇವೆ: ಕರವೇ ನಾರಾಯಣಗೌಡ ಎಚ್ಚರಿಕೆ
ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಲೇಬೇಕು. ಬೆಂಗಳೂರು ಮಾತ್ರವಲ್ಲ, ರಾಜ್ಯದ 31 ಜಿಲ್ಲೆಗಳಲ್ಲೂ ಈ ಕಾನೂನು ಜಾರಿಗೆ ಬರಬೇಕು. ಬಿಬಿಎಂಪಿ ನೀಡಿದ ಗಡುವು ಬುಧವಾರಕ್ಕೆ ಮುಗಿದಿದೆ. ಮಾರ್ಚ್ 1ರವರೆಗೆ ನಾವು ಕಾದು ನೋಡುತ್ತೇವೆ. ಮಾರ್ಚ್ 5ರಂದು ಮತ್ತೆ ಬೀದಿಗಿಳಿದು, ಬಿಬಿಎಂಪಿ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡರು ಎಚ್ಚರಿಕೆ ನೀಡಿದ್ದಾರೆ.