Site icon Vistara News

ಕವಿ, ಕತೆಗಾರ ಕೆ.ವಿ ತಿರುಮಲೇಶ್‌ ಇನ್ನಿಲ್ಲ

KV Tirumalesh

ಬೆಂಗಳೂರು: ಕನ್ನಡದ ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆ.ವಿ. ತಿರುಮಲೇಶ್‌ (82) ಇನ್ನಿಲ್ಲ. ಇಂದು ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

ಅಲ್ಪಕಾಲದ ಅಸೌಖ್ಯದಿಂದ ಅವರು ಬಳಲಿದ್ದರು. ಹೃದಯ ಕಾಯಿಲೆ ಹೊಂದಿದ್ದ ಅವರಿಗೆ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಳೆದ ವಾರದವರೆಗೂ ಆಸ್ಪತ್ರೆಯಲ್ಲಿದ್ದ ಅವರು ನಿನ್ನೆ ಡಿಸ್‌ಚಾರ್ಜ್‌ ಆಗಿ ಮನೆಗೆ ಬಂದಿದ್ದರು. ಅವರಿಗೆ ಪತ್ನಿ, ಮೂವರು ಹೆಣ್ಣುಮಕ್ಕಳಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ಕೆ.ವಿ. ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕ. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಆಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದು ನಿವೃತ್ತಿ ಹೊಂದಿದ್ದರು. ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿದ್ದರು. ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದ ಅವರು ವಿವಿಧ ಪತ್ರಿಕೆಗಳಿಗೆ, ಜಾಲತಾಣಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದರು. ಕಳೆದ ವಾರದವರೆಗೂ ಅವರು ಬರೆದದ್ದನ್ನು ಕಾಣಬಹುದು.

Exit mobile version