Site icon Vistara News

Kantara Movie | ನಟ ಚೇತನ್‌ ಅಹಿಂಸಾ ವಿರುದ್ಧದ ಕೇಸ್‌ ವಜಾಗೊಳಿಸಲು ಹೈಕೋರ್ಟ್‌ ನಕಾರ

chetan kantara

ಬೆಂಗಳೂರು: ಭೂತದ ಕೋಲ ಹಿಂದು ಧರ್ಮದ ಭಾಗವಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್‌ ಅಹಿಂಸಾ ವಿರುದ್ಧ ದಾಖಲಾದ ಪ್ರಕರಣವನ್ನು ವಜಾಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ. ಕಾಂತಾರ ಸಿನಿಮಾದ (kantara movie) ವಿಚಾರದಲ್ಲಿ ಮಾತನಾಡಿದ್ದ ಚೇತನ್‌ ಅವರು ʻಭೂತಾರಾಧನೆ ಹಿಂದು ಸಂಸ್ಕೃತಿʼ ಎಂಬ ನಿರ್ದೇಶಕ ರಿಷಬ್‌ ಶೆಟ್ಟಿ ಅವರ ಹೇಳಿಕೆಯನ್ನು ಆಕ್ಷೇಪಿಸಿದ್ದರು. ಈ ಬಗ್ಗೆ ಟ್ವೀಟ್‌ ಮಾಡಿದ ಅವರು, ʻನಮ್ಮ ಕನ್ನಡ ಚಿತ್ರ ಕಾಂತಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ತಂದಿದೆ. ಆದರೆ, ಭೂತ ಕೋಲ ಹಿಂದೂ ಸಂಸ್ಕೃತಿ ಎಂದು ಹೇಳಿರುವ ರಿಷಬ್‌ ಶೆಟ್ಟಿ ಅವರ ಮಾತು ಸುಳ್ಳು. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ಇವು ವೈದಿಕ-ಬ್ರಾಹ್ಮಣೀಯ ಹಿಂದು ಧರ್ಮಕ್ಕಿಂತ ಹಿಂದಿನವು ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆ ಮತ್ತು ಹೊರಗೆ ಸತ್ಯವಾಗಿ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆʼʼ ಎಂದು ಹೇಳಿದ್ದರು.

ಈ ಹೇಳಿಕೆಯ ಬಳಿಕ ಚೇತನ್‌ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದ ಹಲವು ಕಡೆಗಳಲ್ಲಿ ಚೇತನ್‌ ವಿರುದ್ಧ ದೂರುಗಳು ದಾಖಲಾಗಿದ್ದವು. ಚೇತನ್‌ ಹಿಂದು ಧರ್ಮವನ್ನು ಅವಹೇಳನ ಮಾಡಿದ್ದಾರೆ, ಭೂತ ಕೋಲವನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಬೆಂಗಳೂರಿನಲ್ಲಿ ಶಿವಕುಮಾರ್ ಎಂಬುವರು ಶೇಷಾದ್ರಿಪುರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಅದರಂತೆ ಐಪಿಸಿ ಸೆಕ್ಷನ್‌ 505 ಅಡಿ ಎಫ್ಐಆರ್ ದಾಖಲಾಗಿತ್ತು. ಈ ಎಫ್‌ಐಆರ್‌ನ್ನು ರದ್ದುಗೊಳಿಸಿ ಕೇಸನ್ನು ವಜಾಗೊಳಿಸುವಂತೆ ಕೋರಿ ಚೇತನ್‌ ಅಹಿಂಸಾ ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು.

ಸಮಾಜದಲ್ಲಿ ಅಶಾಂತಿ ಮೂಡಿಸಿದ ಆರೋಪವನ್ನು ಹೊರಿಸಿ ಈ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡದಂತೆ ಮನವಿ ಶಿವಕುಮಾರ್‌ ಅವರ ಪರವಾಗಿ ಕೋರ್ಟ್‌ನಲ್ಲಿ ವಾದ ಮಾಡಲಾಗಿತ್ತು. ನಟ ಚೇತನ್ ಅವರ ಮನವಿಯನ್ನು ಪುರಸ್ಕರಿಸಬಾರದು, ಅರ್ಜಿ ವಜಾ ಮಾಡಬೇಕು ಎಂದುಸರ್ಕಾರಿ ವಕೀಲರ ಮನವಿ ಮಾಡಿದರು. ಇದರ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ಐ. ಅರುಣ್‌ ಅವರು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದರು.

ಹೀಗಾಗಿ ಚೇತನ್‌ ಅಹಿಂಸಾ ಅವರ ವಿರುದ್ಧದ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.

ಇದನ್ನೂ ಓದಿ | Kantara Movie | ನಟ ಚೇತನ್‌ ಮೇಲೆ ಮತ್ತೊಂದು ಕೇಸ್‌; ಭೂತಕೋಲ ಹಿಂದು ಸಂಸ್ಕೃತಿಯಲ್ಲವೆಂದಿದ್ದಕ್ಕೆ ವಿರೋಧ

Exit mobile version