ಹೊಸಕೋಟೆ: ಚುನಾವಣೆ ನಂತರ ಗಲಾಟೆಯಲ್ಲಿ ಮೃತಪಟ್ಟಿದ್ದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಮನೆಗೆ ತೆರಳಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಾಂತ್ವನ ಹೇಳಿದ್ದಾರೆ. ಹೊಸಕೋಟೆಯ ಡಿ.ಶೆಟ್ಟಿ ಹಳ್ಳಿಯಲ್ಲಿರುವ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ 5 ಲಕ್ಷ ರೂ. ನೀಡಿದ್ದಾರೆ.
ನಂತರ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಹೊಸಕೋಟೆಯನ್ನ ಮಿನಿ ಬಿಹಾರ್ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಗೂಂಡಾ ಸಾಮ್ಯಾಜ್ಯ ಮಾಡುತ್ತಿದ್ದಾರೆ. ಒಂದು ತಾಲಿಬಾನ್ ಪಡೆ ಎದ್ದು ನಿಂತಿದ್ದೆ ಕಾಂಗ್ರೆಸ್ ಮನಸ್ಥಿತಿ ಗೊತ್ತಾಗುತ್ತೆ. ಇದನ್ನ ಭಾರತೀಯ ಜನತಾ ಪಾರ್ಟಿ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ.
ಇವತ್ತು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ, ಇದನ್ನು ನಾನು ಮೊದಲೇ ಹೇಳಿದ್ದೇನೆ. ಯಾರು ಮುಖ್ಯಮಂತ್ರಿಯಾಗಬೇಕು ಅನ್ನೋ ಕಿತ್ತಾಟ ನಡೆಯುತ್ತಿದೆ. ಅವರನ್ನು ಸಮಾಧಾನ ಮಾಡುವುದೇ ದೊಡ್ಡ ಕೆಲಸ. ರಾಜ್ಯದಲ್ಲಿ ಅರಾಜಕತೆ ಈಗಾಗಲೇ ಪ್ರಾರಂಭವಾಗಿದೆ. ಇವರಿಗೆ ಜನರ ಹಿತ ಬೇಕಾಗಿಲ್ಲ, ಕೇವಲ ಅಧಿಕಾರ ಮಾತ್ರ ಬೇಕು.
ಅಂಬೇಡ್ಕರ್‌ರಂತಹ ಶ್ರೇಷ್ಠ ವ್ಯಕ್ತಿಯ ವಿಗ್ರಹಕ್ಕೆ ಬೆಂಕಿ ಹಚ್ಚಿದ್ದಾರೆ. ಇವರ ಮಾನಸಿಕತೆ ಇದರಲ್ಲಿ ಸ್ಪಷ್ಟವಾಗಿ ತಿಳಿಯುತ್ತೆ. ದಲಿತ ವಿರೋಧಿ ಕಾಂಗ್ರೆಸ್, ದಲಿತರನ್ನ ದಮನ ಮಾಡಬೇಕು ಎಂದು ಮುಂದಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಯಾಗಿದೆ, ಇದರ ಬಗ್ಗೆ ಈ ದೇಶದ ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ ಈ ಬಗ್ಗೆ ಏನು ಹೇಳುತ್ತಾರೆ? ಮಲ್ಲಿಕಾರ್ಜುನ ಖರ್ಗೆ, ಡಿಕೆಶಿ ಏನು ಹೇಳ್ತಾರೆ? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ, ನಾವು ಯಾವಾಗಲೂ ಕಾರ್ಯಕರ್ತರ ಜೊತೆಯಲ್ಲಿದ್ದೇವೆ. ಈ ರೀತಿಯಾಗಿ ಮುಂದುವರಿದರೆ ನಾವು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. 40 ವರ್ಷಗಳಿಂದ ರಾಜಕಾರಣ ಮಾಡಿ ಗೂಂಡಾ ರಾಜಕಾರಣ ಸೃಷ್ಟಿಸಿದ್ದಾರೆ. ಈಗ ಅಧಿಕಾರಕ್ಕೆ ಪುನಃ ಬಂದ ತಕ್ಷಣ ಪ್ರಾರಂಭ ಮಾಡಿದ್ದಾರೆ.
ಆದರೆ ನಾವು ಇದ್ಯಾವುದಕ್ಕೂ ಹೆದರುವುದಿಲ್ಲ. ನಮ್ಮ ಮುಖಂಡರ ಜೊತೆ ಸೇರಿ ಉಗ್ರ ಹೋರಾಟ ರೂಪಿಸುತ್ತೇವೆ. ಪೊಲೀಸರು ನಿಸ್ಪಪಕ್ಷತವಾಗಿ ತನಿಖೆ ಮಾಡಬೇಕು, ಇಬ್ಬರನ್ನು ಕೂಡ ಬಂಧಿಸಬೇಕು ಎಂದರು. ಜತೆಗೆ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಭೈರತಿ ಬಸವರಾಜು ಇದ್ದರು.
ಇದನ್ನೂ ಓದಿ: MTB Nagaraj: ಹೊಸಕೋಟೆಯಲ್ಲಿ ಮುಂದುವರಿದ ರಾಜಕೀಯ ವೈಷಮ್ಯ; ವೃತ್ತದಲ್ಲಿ ಅಳವಡಿಸಿದ್ದ ಎಂಟಿಬಿ ಬೋರ್ಡ್ ಧ್ವಂಸ