Site icon Vistara News

Karnataka budget 2023 : ಗೃಹಲಕ್ಷ್ಮಿ ಜತೆಗೆ ಸಮಾನತೆ, ಸ್ವಾವಲಂಬನೆ, ಸಬಲೀಕರಣ ಮಂತ್ರ!

CM siddaramaiah in karnataka budget 2023

ಬೆಂಗಳೂರು: ಕಾಂಗ್ರೆಸ್‌ನ ಐದು ಗ್ಯಾರಂಟಿಯಲ್ಲಿ ಎರಡು ಬಹುಮುಖ್ಯವಾಗಿ ಮಹಿಳೆಯರಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಅದರಲ್ಲಿ “ಶಕ್ತಿ” ಹಾಗೂ ಗೃಹಲಕ್ಷ್ಮಿ ಯೋಜನೆಗಳು ಸೇರಿವೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದರು. ಅದರಂತೆ ಈಗ ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿದೆ. ಜತೆಗೆ ಕುಟುಂಬ ನಿರ್ವಹಣೆಗೆ ಗೃಹಜ್ಯೋತಿಯೂ ಅನುಕೂಲವಾಗಲಿದ್ದು, ಸರಳ ಬದುಕಿಗೆ ಇದು ಸೋಪಾನ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ವಿಶ್ಲೇಷಣೆಯನ್ನು ಮಾಡಿದ್ದಾರೆ. ಅಲ್ಲದೆ, ಸಮಾನತೆ, ಸ್ವಾವಲಂಬನೆ, ಸಬಲೀಕರಣ ನೀಡುವ ದೃಷ್ಟಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಬಜೆಟ್‌ ಭಾಷಣದ ವೇಳೆ ಸಿದ್ದರಾಮಯ್ಯ ಮಾತನಾಡುತ್ತಾ, ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Budget 2023: ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ

ಗೃಹ ಲಕ್ಷ್ಮಿ, ಶಕ್ತಿ ಯೋಜನೆಗಳಿಂದ ಮಹಿಳಾ ಸಬಲೀಕರಣ ಹೇಗೆ?

ಗೃಹ ಲಕ್ಷ್ಮಿ ಮತ್ತು ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣವು ಹೇಗೆ ಆಗುತ್ತದೆ? ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಂಡಿರುವುದರ ದೂರದೃಷ್ಟಿ ಹೇಗೆ ಇದೆ ಎಂಬ ಬಗ್ಗೆ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ವಿವರಣೆ ನೀಡಿದ್ದಾರೆ. ಜತೆ ಇನ್ನಿತರ ಗ್ಯಾರಂಟಿಯಿಂದ ಏನು ಪ್ರಯೋಜನ ಎಂಬುದನ್ನೂ ಅವರು ತಮ್ಮ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.

ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶವೇ ಕೇಂದ್ರ ಸರ್ಕಾರದ ವೈಫಲ್ಯದಿಂದ ಆಗಿರುವ ಅನಿಯಂತ್ರಿತ ಬೆಲೆ ಏರಿಕೆ ಆಗಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಬೆಲೆ ಏರಿಕೆಯಿಂದ ರಾಜ್ಯ ಜನ ತತ್ತರಿಸಿ ಹೋಗಿದ್ದಾರೆ. ಈ ಯೋಜನೆಗಳ ಜಾರಿಯಿಂದ ಅವರ ಕುಟುಂಬಗಳಿಗೆ ತುಸು ನಿರಾಳತೆ ಸಿಗುತ್ತದೆ. ಅಲ್ಲದೆ, ಮಹಿಳೆಯರ ಓಡಾಟಕ್ಕೆ “ಶಕ್ತಿ” ಯೋಜನೆಯು ಬೆಂಬಲವಾಗಿ ನಿಂತಿದೆ. ಇಲ್ಲಿ ಬಹುಮುಖ್ಯವಾಗಿ ಹಣ ಉಳಿತಾಯ ಆಗಲಿದೆ. ಹೀಗಾಗಿ ಮನೆಯಿಂದ ದೂರದ ಸ್ಥಳಗಳಲ್ಲಿಯೂ ಮಹಿಳೆಯರು ಉದ್ಯೋಗವನ್ನು ಕಂಡುಕೊಳ್ಳಲು ಅನುಕೂಲವಾಗುತ್ತದೆ. ಉದ್ಯೋಗ ಲಭಿಸಿದರೆ ಕುಟುಂಬವು ಆರ್ಥಿಕವಾಗಿ ಚೇತರಿಕೆ ಕಾಣುತ್ತದೆ ಎಂದು ಹೇಳಿದ್ದಾರೆ.

ಸ್ವಾವಲಂಬನೆ, ಸಮಾನತೆ, ಸಬಲೀಕರಣ ಮಂತ್ರ

ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ಮಾತನಾಡುವಾಗ “ಸ್ವಾವಲಂಬನೆ, ಸಮಾನತೆ, ಸಬಲೀಕರಣ ಮಂತ್ರ”ವನ್ನು ಜಪಿಸಿದ್ದಾರೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಆದರೆ, ಗಂಡು-ಹೆಣ್ಣು, ಮೇಲು-ಕೀಳು ಎಂಬ ತಾರತಮ್ಯ ಸಮಾಜದಲ್ಲಿ ಇನ್ನೂ ಹಾಸುಹೊಕ್ಕಾಗಿ ಬೆಳೆದಿದೆ. ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಈ ತಾರತಮ್ಯ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ.ಗಳ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ನೀಡಿ ನಮ್ಮ ಸರ್ಕಾರ ಮಹಿಳೆಯರನ್ನು ನಿಜವಾದ ಅರ್ಥದಲ್ಲಿ ʻಗೃಹಲಕ್ಷ್ಮಿʼಯಾಗಿಸಿದೆ ಎಂದು ಹೇಳಿದ್ದಾರೆ.

ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬಿಸಿಯೂಟ ತಯಾರಕರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿಯರೂ ಸಹ ಈ ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರುತ್ತಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಾಗುತ್ತದೆ. ಬಡತನದಲ್ಲಿ ಗಣನೀಯ ಇಳಿಕೆಯಾಗುತ್ತದೆ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಕುಟುಂಬಗಳಿಗೆ ತುಸು ನೆಮ್ಮದಿ ಸಿಗುವಂತಾಗುತ್ತದೆ. ಖರೀದಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಮತ್ತು ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ. ಪಶುಪಾಲನೆ, ಗುಡಿ ಕೈಗಾರಿಕೆಯಂತಹ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಗರ್ಭಿಣಿಯರು, ತಾಯಂದಿರು, ಮಹಿಳಾ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತ ಮಹಿಳೆಯರು ಕೆಲಸ ಮಾಡುವ ಅನಿವಾರ್ಯತೆಯನ್ನು ನಿವಾರಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಮಹಿಳೆಯರಿಗೆ ಬದುಕಿನ ನಿರ್ವಹಣೆಯನ್ನು ಇನ್ನಷ್ಟು ಸುಗಮಗೊಳಿಸಲು ಮತ್ತು ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದ್ದು, ಮಹಿಳೆಯರ ಖಾತೆಗೆ ನೇರವಾಗಿ ಮಾಸಿಕ 2,000 ರೂ.ಗಳನ್ನು ವರ್ಗಾಯಿಸಲಾಗುವುದು. ಈ ಯೋಜನೆಗಾಗಿ ವಾರ್ಷಿಕ ಸುಮಾರು 30,000 ಕೋಟಿ ರೂ. ವೆಚ್ಚವಾಗಲಿದ್ದು, ಇದು ಇಡೀ ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ವಿಶೇಷ ಚೇತನರಿಗೆ ಕೊಡುಗೆ

ವಿಶೇಷಚೇತನರಿಗೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸದೃಢತೆಯನ್ನು ಒದಗಿಸಲು ಇಲಾಖೆಯಲ್ಲಿ ನೋಂದಣಿಯಾಗಿರುವ ಸುಮಾರು 4,000 ವಿಶೇಷಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಒದಗಿಸಲಾಗುವುದು. ಇದಲ್ಲದೆ, ನೋಂದಣಿಯಾಗದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ಬೂಸ್ಟ್!

ಮಹಿಳಾ ಉದ್ಯಮಿಗಳು ಆತಿಥ್ಯ, ಆರೈಕೆ ಮತ್ತು ಪ್ರವಾಸೋದ್ಯಮದಂತಹ ಸೇವಾ ವಲಯದಲ್ಲಿ ಹೆಚ್ಚಿನ ಅವಕಾಶ ಪಡೆಯುತ್ತಿದ್ದಾರೆ. ಆದ್ದರಿಂದ, ಸೇವಾ ವಲಯದಲ್ಲಿ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಶೇ.4 ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಕೋಟಿ ರೂ.ಗಳಿಂದ ಐದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು‌ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

2023-24ನೇ ಸಾಲಿನಲ್ಲಿ 10 ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳನ್ನು ಏಳು ಜಿಲ್ಲೆಗಳಲ್ಲಿ ಎನ್‌ಜಿಒಗಳ ಸಹಯೋಗದೊಂದಿಗೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿನ ಆ್ಯಸಿಡ್‍‍ ದಾಳಿ ಸಂತ್ರಸ್ತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಇವರಿಗೆ ಸ್ವಯಂ ಉದ್ಯೋಗಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಅನುದಾನ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: Karnataka Budget 2023: ಸ್ಟಾರ್ಟಪ್‌ಗಳಿಗೆ 50 ಕೋಟಿ ರೂ. ವೆಚ್ಚದಲ್ಲಿ ಪೋಷಣೆ ಕೇಂದ್ರ; ಮಾಹಿತಿ ತಂತ್ರಜ್ಞಾನಕ್ಕೆ ಇನ್ನೂ ಏನೇನಿದೆ?

ಪ್ರಸಕ್ತ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ. ಆಯವ್ಯಯ ನಿಗದಿಪಡಿಸಲಾಗಿದೆ. ಅಲ್ಲದೆ, ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2023-24ನೇ ಸಾಲಿನಲ್ಲಿ 51,229 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಬಜೆಟ್‌ನ ಇನ್ನಷ್ಟು ಸುದ್ದಿಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version