ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ (Property Tax) ಮೇಲಿನ ದಂಡದ ಪ್ರಮಾಣ ಶೇಕಡಾ 50ರಷ್ಟು ಕಡಿತ ಸೇರಿದಂತೆ ಜನಸ್ನೇಹಿ ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024 (Property Tax Amendment Bill 2024) ಅನ್ನು ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕರಿಸಲಾಯಿತು.
ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಮಾತನಾಡಿ, ಈ ವಿಧೇಯಕ ಈಗಾಗಲೇ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. 2020ರಲ್ಲಿ ಬಿಜೆಪಿ ಸರ್ಕಾರ ತಿಳಿಯದೇ ಮಾಡಿದ್ದ ತಪ್ಪಿನಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹೆಚ್ಚಾಗುತ್ತಿತ್ತು. ನಮ್ಮ ಸರ್ಕಾರ ಈ ಭಾರವನ್ನು ಇಳಿಸಿದೆ ಎಂದು ಹೇಳಿದರು.
ಆಸ್ತಿ ತೆರಿಗೆ ತಕರಾರು ಇದ್ದವರು ಈ ಮೊದಲು ಟ್ರಿಬ್ಯುನಲ್ ಅಥವಾ ಹೈಕೋರ್ಟ್‌ಗೆ ಹೋಗಬೇಕಿತ್ತು. ಈ ತೊಂದರೆಯನ್ನು ತಪ್ಪಿಸಲು ಮೇಲ್ಮನವಿ ಸಮಿತಿ ರಚಿಸಿದ್ದು, ಜನರು ಕೋರ್ಟ್‌ಗೆ ಅಲೆಯುವುದು ತಪ್ಪಲಿದೆ. ಆಸ್ತಿ ತೆರಿಗೆಯನ್ನು ಆಸ್ತಿಯ ಮೌಲ್ಯಕ್ಕೆ ತಕ್ಕಂತೆ ಮಾಡಬೇಕು. ಆಗ ಮಾತ್ರ 15ನೇ ಹಣಕಾಸು ಆಯೋಗದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ನಿಯಮವನ್ನು ರೂಪಿಸಿದೆ. ಈ ಕಾರಣದಿಂದ ತಿದ್ದುಪಡಿಗೆ ಸರ್ಕಾರ ಮುಂದಾಯಿತು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆಸ್ತಿ ಮೌಲ್ಯ ಆಧರಿಸಿ ಆಸ್ತಿ ತೆರಿಗೆ ನಿರ್ಧರಿಸಲಾಗಿತ್ತು. ಬೆಂಗಳೂರಿನಲ್ಲಿ ಮಾತ್ರ ವ್ಯತ್ಯಾಸವಿದ್ದ ಕಾರಣ ಆಸ್ತಿ ತೆರಿಗೆ ಹೆಚ್ಚಳ ಮಾಡದೆ, ಹೊಸ ತಿದ್ದುಪಡಿ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ತಿದ್ದುಪಡಿ ವಿಧೇಯಕವನ್ನು ಆಡಳಿತ ಪಕ್ಷದ ನಾಗರಾಜ್ ಯಾದವ್ ಮುಕ್ತಕಂಠದಿಂದ ಶ್ಲಾಘಿಸಿ, “ಜನಸ್ನೇಹಿ ತೆರಿಗೆಯಿಂದ ಬಿಬಿಎಂಪಿಗೆ ಆದಾಯ ಹೆಚ್ಚಾಗಲಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ ಪ್ರಗತಿಪರವಾದ ವಿಧೇಯಕವಾಗಿದೆ” ಎಂದು ಹೇಳಿದರು.
“ಸ್ವಯಂ ಘೋಷಿತ ಆಸ್ತಿ ತೆರಿಗೆ ವೇಳೆ ತಪ್ಪು ಮಾಹಿತಿ ನೀಡಿದವರಿಗೆ ಒಂದಷ್ಟು ವಿನಾಯಿತಿ ನೀಡಬೇಕು ಅಥವಾ ಒಂದು ಬಾರಿ ಪಾವತಿ ಮಾಡುವ ಅವಕಾಶ ನೀಡಬೇಕು” ಎಂದು ಜೆಡಿಎಸ್ ಸದಸ್ಯ ಟಿ.ಎ. ಶರವಣ ಸಲಹೆ ನೀಡಿದರು.
ಇದನ್ನೂ ಓದಿ: Karnataka Budget Session 2024: ಇನ್ಮುಂದೆ ನಗರಗಳ ಆಸ್ತಿ ನೋಂದಣಿಗೆ ಇ-ಖಾತೆ ಕಡ್ಡಾಯ
ಮಾರ್ಗಸೂಚಿ ದರದ ಬಗ್ಗೆ ಡಿಕೆಶಿ ಉತ್ತರ
ನಗರದ ಒಳಗೆ ಇರುವ ಕೃಷಿ ಭೂಮಿ, ಪರಿವರ್ತಿತ ಭೂಮಿ ಸೇರಿದಂತೆ ಮಾರ್ಗಸೂಚಿ ದರ ವಿಚಾರವಾಗಿ ಹೆಚ್ಚಿನ ಸದಸ್ಯರು ಪ್ರಶ್ನಿಸಿದಾಗ “110 ಹಳ್ಳಿಗಳು ಸೇರಿದಂತೆ ಪಾಲಿಕೆಯ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಯಾವುದೇ ತೆರಿಗೆ ಇಲ್ಲ. ಪರಿವರ್ತಿತ ಭೂಮಿಗೆ ಶೇ 0.025 ಮಾತ್ರ ತೆರಿಗೆ ವಿಧಿಸಲಾಗುವುದು. ಮಾರ್ಗಸೂಚಿ ದರವನ್ನು ನಿರ್ಧಾರ ಮಾಡುವುದು ಕಂದಾಯ ಇಲಾಖೆ. ಇದನ್ನು ವರ್ಷಕ್ಕೆ ಕೇವಲ ಶೇ. 5ರಷ್ಟು ಮಾತ್ರ ಹೆಚ್ಚಳ ಮಾಡಲು ಅವಕಾಶವಿದೆ” ಎಂದು ಶಿವಕುಮಾರ್ ಉತ್ತರಿಸಿದರು.