Site icon Vistara News

Karnataka Budget Session 2024: ಸದನದಲ್ಲಿ ರಾಮನಗರ ಗದ್ದಲ; ಪಿಎಸ್‌ಐ ಸಸ್ಪೆಂಡ್‌ಗೆ ಬಿಜೆಪಿ – ಜೆಡಿಎಸ್‌ ಪಟ್ಟು!

Karnataka Budget Session 2024 Ramanagara ruckus in House BJP demands suspension of PSI

ಬೆಂಗಳೂರು: ವಿಧಾನ ಮಂಡಲ ಅಧಿವೇಶನದ (Karnataka Budget Session 2024) ಶೂನ್ಯ ವೇಳೆಯಲ್ಲಿ ರಾಮನಗರ ವಿಚಾರ ಪ್ರಸ್ತಾಪವಾಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.‌ ಅಶೋಕ್ (R Ashok) ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿ, ರಾಮನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸೂಕ್ಷ್ಮ ಪ್ರದೇಶವಾಗಿದೆ. ಈ ವಿಚಾರವಾಗಿ ಚಾಂದ್‌ ಪಾಶ ಎಂಬ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಜಡ್ಜ್‌ ಬಗ್ಗೆಯೇ ಅವಹೇಳನಕಾರಿಯಾಗಿ ಬರೆದಿದ್ದರಿಂದ ದೂರು ಕೊಡಲಾಗಿತ್ತು. ಆದರೆ, ಲಾಯರ್‌ಗಳ ಚೇಂಬರ್‌ಗೆ ಕೆಲವರು ನುಗ್ಗಿ ಗಲಾಟೆ ಮಾಡಿದ್ದಾರೆ. ಈ ಬಗ್ಗೆ ದೂರು ದಾಖಲು ಮಾಡದ ಪೊಲೀಸರು, ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಹೀಗಾಗಿ ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಪಿಎಸ್‌ಐಯನ್ನು ವಜಾ ಮಾಡಿ ಎಂದು ಆಗ್ರಹಿಸಿದರು. ಇದಕ್ಕೆ ಗೃಹ ಸಚಿವರಿಂದ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಆಕ್ರೋಶಗೊಂಡು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ನಡೆಸಲಾಗಿದೆ.

ಸದನದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ ಆರ್.‌ ಅಶೋಕ್‌, ಚಾಂದ್ ಪಾಶ ಎಂಬ ವ್ಯಕ್ತಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜಡ್ಜ್ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ. ಅವರ ವಿರುದ್ಧ ಠಾಣೆಗೆ ಹಾಗೂ ಬಾರ್ ಅಸೋಸಿಯೇಷನ್‌ಗೆ ದೂರು ಕೊಡಲಾಗಿತ್ತು. ಆದರೆ, ಕೆಲವರು ಲಾಯರ್‌ಗಳ ಚೇಂಬರ್‌ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅವರ ವಿರುದ್ಧ ವಕೀಲರು ದೂರು ಕೊಟ್ಟರೂ ಪೊಲೀಸರು ದೂರು ದಾಖಲು ಮಾಡಿಲ್ಲ. ಆದರೆ, ಚಾಂದ್ ಪಾಶಾ ಕಡೆಯಿಂದ ದೂರನ್ನು ಪಡೆದುಕೊಂಡು ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುತ್ತದೆ. ಹೀಗಾಗಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ವಕೀಲ ಚಾಂದ್ ಪಾಶಾ ಈ ಹಿಂದೆಯೂ ವಕೀಲರು ಹಾಗೂ ನ್ಯಾಯಾಧೀಶರ ವಿರುದ್ಧ ಬರೆದಿದ್ದಾರೆ. ಅಲ್ಲದೆ, ಕ್ಷಮಾಪಣಾ ಪತ್ರವನ್ನು ಕೊಟ್ಟಿದ್ದಾರೆ‌. ಚಾಂದ್ ಪಾಶಾ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸದಸ್ಯನಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಆರ್‌. ಅಶೋಕ್‌ ಹೇಳಿದರು.

ಈಗ ರಾಮನಗರ ಪ್ರಕ್ಷುಬ್ಧ ಆಗಿದೆ. ಸೋಮವಾರ ನಾನು ಮತ್ತು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರಕ್ಕೆ ಭೇಟಿ ನೀಡಿದ್ದೆವು. ಚಾಂದ್ ಪಾಶ ಅನ್ನೋ ವಕೀಲ ಜಡ್ಜ್‌ಗೆ ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಹಿಂದುಗಳು, ಬಿಜೆಪಿ ವಿರುದ್ಧವೂ ನಿಂದಿಸಿದ್ದಾರೆ. ಇಷ್ಟೆಲ್ಲ ಆದ ನಂತರ ಚಾಂದ್ ಪಾಷ ವಿರುದ್ಧ ಜನ ಠಾಣೆಗೆ ಹಾಗೂ ವಕೀಲರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ವಕೀಲರ ಸಂಘದ ಸದಸ್ಯರು ಇದರ ಬಗ್ಗೆ ಚರ್ಚೆ ಮಾಡುವಾಗ ಕೆಲವರು ನುಗ್ಗಿ ವಕೀಲರಿಗೆ ಕೆಟ್ಟ ಪದಗಳಿಂದ ಬಯ್ಯುತ್ತಾರೆ. ಇದರ ವಿರುದ್ಧವೂ ವಕೀಲರು ಪೊಲೀಸರಿಗೆ ದೂರು ಕೊಡುತ್ತಾರೆ. ಆದರೆ, ಪೊಲೀಸರು ವಕೀಲರ ದೂರು ಪಡೆದು ಸುಮ್ಮನಾಗುತ್ತಾರೆ. ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ. ನಂತರ ಚಾಂದ್ ಪಾಷ ಕಡೆಯವರಿಂದಲೂ ಪೊಲೀಸರು ಒಂದು ದೂರನ್ನು ತೆಗೆದುಕೊಳ್ಳುತ್ತಾರೆ. ವಕೀಲರೇ ಚಾಂದ್ ಪಾಷ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗುತ್ತದೆ. ಆಗ ಪೊಲೀಸರು ತಕ್ಷಣವೇ ವಕೀಲರ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಾರೆ. ಇದನ್ನು ಖಂಡಿಸಿ ವಕೀಲರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ವಿವರವಾಗಿ ಹೇಳಿದರು.

ಚಾಂದ್‌ಪಾಷ ಜ್ಞಾನವಾಪಿ‌ ಮಸೀದಿ ಬಗ್ಗೆ ಆದೇಶ ನೀಡಿದ್ದ ಜಡ್ಜ್ ವಿರುದ್ಧ ಲೂಟಿ ಆರೋಪ ಮಾಡಿದ್ದಾರೆ. ವಕೀಲರ ಸಂಘದ ಚುನಾವಣೆಯಲ್ಲಿ ಗೆದ್ದವರಿಗೂ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರ್.‌ ಅಶೋಕ್‌ ಹೇಳಿದರು.

ಸ್ಪೀಕರ್‌ಗೆ ಪಿಎಫ್‌ಐ ಕಾಟ!

ಆಗ ಶಾಸಕ ಡಾ. ಅಶ್ವತ್ಥ ನಾರಾಯಣ ಮಾತನಾಡಿ ಪಿಎಫ್‌ಐ ಬಗ್ಗೆ ಪ್ರಸ್ತಾಪ ಮಾಡಿದರು. ಸ್ಪೀಕರ್‌ ಅವರೇ ನಿಮಗೆ ಸಹ ಪಿಎಫ್‌ಐನವರು ಕಾಟ ಕೊಟ್ಟಿದ್ದಾರೆ ಅಲ್ವಾ? ನಿಮಗೆ ಅದರ ಅನುಭವ ಇದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್‌ ಯು.ಟಿ. ಖಾದರ್, ನೀವು ಇಷ್ಟು ಕಾಟ ಕೊಡುತ್ತೀರೆಂದು ಅಂದುಕೊಂಡಿರಲಿಲ್ಲ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯೆ ಅಶ್ವತ್ಥ ನಾರಾಯಣ, ನಾವು ಕಾಟ ಕೊಡಲು ಸಿದ್ದರಾಮಯ್ಯ ಕೆಟ್ಟು ಹೋದೆವಾ? ಎಂದು ಮರು ಪ್ರಶ್ನೆ ಹಾಕಿದರು.

ಈ ವೇಳೆ ರಾಮನಗರ ವಿಷಯದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿ, ಈ ಸಮಸ್ಯೆಯ ಗಾಂಭೀರ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ವಿಪಕ್ಷಗಳು ಹೇಳಿದಂತೆ ಬೇರೆ ಬೇರೆ ರೀತಿ ತೆಗೆದುಕೊಳ್ಳಬಹುದು. ನಾನು ವಕೀಲರ ಸಂಘ, ರಾಮನಗರ ವಕೀಲರ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಪ್ರತಿಭಟನೆ ಕೈ ಬಿಟ್ಟು ಸಹಕಾರ ಮಾಡಿ. ವರದಿ ಏನು ಬರಲಿದೆ? ಅದರ ಆಧಾರದ ಮೇಲೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಯಾರ ಮೇಲೂ ಮುಲಾಜಿಲ್ಲ ಎಂದು ಹೇಳಿದರು.

ಡಾ. ಜಿ. ಪರಮೇಶ್ವರ್ ಅವರ ಈ ಹೇಳಿಕೆಗೆ ವಿಪಕ್ಷ ಶಾಸಕರು ತಿರುಗಿಬಿದ್ದಿದ್ದು ತೀವ್ರ ಆಕ್ರೋಶವನ್ನು ಹೊರಹಾಕಿದರು. ಹಾಗಾದರೆ ವಕೀಲರ ವಿರುದ್ಧ ಯಾಕೆ ಕೇಸ್ ಹಾಕಿದ್ದಾರೆ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ವಕೀಲರ ವಿರುದ್ಧ ಯಾಕೆ ಎಫ್‌ಐಆರ್‌ ಹಾಕಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ಆಗ ಮಧ್ಯಪ್ರವೇಶ ಮಾಡಿದ ಬಸವರಾಜ ಬೊಮ್ಮಾಯಿ, ನಿಮ್ಮ‌ ಕಾಲದಲ್ಲೇ ತನಿಖೆಗೆ ಮೊದಲೇ ಸಸ್ಪೆಂಡ್ ಮಾಡಿದ್ದೀರಿ. ಈಗಲೂ ಹಾಗೇ ಮಾಡಿ, ಮೊದಲು ಸಸ್ಪೆಂಡ್ ಮಾಡಿ ಆಮೇಲೆ ತನಿಖೆ ಮಾಡಿ. ಕಳಂಕಿತ ಅಲ್ಲ ಅಂದರೆ ಮತ್ತೆ ಅದೇ ಜಾಗಕ್ಕೆ ತನ್ನಿ. ಕಳೆದ ತಿಂಗಳು ಹಾವೇರಿಯಲ್ಲಿ ನೀವೇ ಸಸ್ಪೆಂಡ್ ಮಾಡಿ ತನಿಖೆ ಮಾಡಿಲ್ಲವೇ? ಆದರೆ, ಆ ರೀತಿಯ ಪ್ರಕ್ರಿಯೆ ಇಲ್ಲಿ ಯಾಕೆ ಕಾಣುತ್ತಿಲ್ಲ? ನಾವೀಗ ಮನವಿ ಮಾಡುತ್ತೇವೆ. ಕ್ರಮವನ್ನು ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂದು ಹೇಳಿದರು.

ಆಗ ಮಾತನಾಡಿದ ಆರ್. ಅಶೋಕ್‌, ಒಂದು ತಿಂಗಳಿಂದ ಹಿಂದುಗಳ ಅವಹೇಳನ ಮಾಡಲಾಗುತ್ತಿದೆ. ನಾವು ಒಂದು ಟ್ವೀಟ್ ಮಾಡಿದರೆ ಎಫ್‌ಐಆರ್‌ ಹಾಕುತ್ತೀರಿ. ಈಗ ಯಾಕೆ ಕ್ರಮವಿಲ್ಲ ಎಂದು ಪ್ರಶ್ನೆ ಮಾಡಿದರು. ಗೃಹ ಸಚಿವರಿಂದ ಸರಿಯಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. “ವಜಾ ಮಾಡಿ, ವಜಾ ಮಾಡಿ.. ಪಿಎಸ್‌ಐನ ವಜಾ ಮಾಡಿ” ಎಂದು ಘೋಷಣೆ ಕೂಗಿದರು.

ಸ್ಪೀಕರ್‌ ಸಂಧಾನದಿಂದ ಪ್ರತಿಭಟನೆ ಕೈಬಿಟ್ಟ ಬಿಜೆಪಿ

ಸದನದಲ್ಲಿ ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಸದನವನ್ನು ಹತ್ತು ನಿಮಿಷಗಳ ಕಾಲ ಸ್ಪೀಕರ್ ಯು.ಟಿ. ಖಾದರ್‌ ಮುಂದೂಡಿದರು. ಬಳಿಕ ತಮ್ಮ ಕಚೇರಿಗೆ ಆಡಳಿತ ಪಕ್ಷ ಹಾಗೂ ಬಿಜೆಪಿ, ಜೆಡಿಎಸ್‌ ನಾಯಕರನ್ನು ಕರೆಸಿಕೊಂಡ ಸ್ಪೀಕರ್ ಸಂಧಾನ ಸಭೆ ನಡೆಸಿದರು. ಪ್ರತಿಭಟನೆ ಕೈಬಿಟ್ಟು ಸಹಕರಿಸುವಂತೆ ಮನವಿ ಮಾಡಿದರು. ಆದರೆ, ಇದಕ್ಕೆ ಒಪ್ಪದ ವಿಪಕ್ಷ ನಾಯಕರು ರಾಮನಗರ ಪಿಎಸ್‌ಐ ಅಮಾನತಿಗೆ ಆಗ್ರಹಿಸಿದರು. ಕೊನೆಗೆ ಮನವೊಲಿಸಿ ಕಲಾಪವನ್ನು ಆರಂಭ ಮಾಡಿದರು.

ನಾಳೆಗೆ ಕಲಾಪ ಮುಂದೂಡಿಕೆ

ಆದರೆ, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಯನ್ನು ಮುಂದುವರಿಸಿದರು. ಈ ವೇಳೆ ಮಾತನಾಡಿದ ಸ್ಪೀಕರ್‌ ಯು.ಟಿ. ಖಾದರ್‌, ವಿಪಕ್ಷ ಸದಸ್ಯರಿಗೆ ಉತ್ತರಿಸುವಂತೆ ಗೃಹ ಸಚಿವರಿಗೆ ಸೂಚನೆ ನೀಡಿದರು. ಆಗ ಮಾತನಾಡಿದ ಡಾ. ಜಿ. ಪರಮೇಶ್ವರ್‌, ನಾಳೆ ಬೆಳಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಅದನ್ನು ಸದನದಲ್ಲಿ ಘೋಷಣೆ ಮಾಡುತ್ತೇವೆ. ಅಲ್ಲಿಯವರೆಗೂ ತಮ್ಮ ಸ್ಥಾನಕ್ಕೆ ಮರಳುವಂತೆ ಮನವಿ ಮಾಡಿದರು. ಗೃಹ ಸಚಿವರ ಹೇಳಿಕೆಗೆ ಒಪ್ಪಿದ ಬಿಜೆಪಿ, ಜೆಡಿಎಸ್‌ ಶಾಸಕರು ಪ್ರತಿಭಟನೆಯನ್ನು ಹಿಂಪಡೆದರು. ಬಳಿಕ ಸ್ಪೀಕರ್‌ ಯು.ಟಿ. ಖಾದರ್‌, ವಿಧಾನಸಭೆ ಕಲಾಪವನ್ನು ಬುಧವಾರ ಬೆಳಗ್ಗೆ 9.45ಕ್ಕೆ ಮುಂದೂಡಿದರು.

Exit mobile version