ಬೆಂಗಳೂರು: ರಾಜ್ಯದಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ, ಈ ಹಿಂದೆಯೇ ಹೇಳಿದ್ದಂತೆ ತನ್ನ ಮೊದಲ ಸಂಪುಟ ಸಭೆಯಲ್ಲೇ (Cabinet Meeting) ಎಲ್ಲ ಐದು ಗ್ಯಾರಂಟಿ ಯೋಜನೆಗಳನ್ನೂ ಅನುಷ್ಠಾನಗೊಳಿಸುವ ನಿರ್ಧಾರ ಮಾಡಿದೆ. ಮೊದಲ ಸಂಪುಟದಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರಾದರೂ ಇದಕ್ಕೆ ಖಚಿತವಾಗಿ ಎಷ್ಟು ವೆಚ್ಚವಾಗುತ್ತದೆ, ಎಷ್ಟು ಫಲಾನುಭವಿಗಳು, ಯಾವಾಗಿನಿಂದ ಜಾರಿ ಎಂಬ ಕುರಿತು ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ನಡುವೆ, ಈ ಯೋಜನೆಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಮುಂದಿನ ಸಚಿವ ಸಂಪುಟ ಸಭೆಯ ಬಳಿಕ ಜಾರಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಬೃಹತ್ ಕಾರ್ಯಕ್ರಮದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ಹಾಗೂ 8 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ನಂತರ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು. ಬೆಂಬಲಿಗರ ಜತೆಗೆ ಸಿದ್ದರಾಮಯ್ಯ ನೇರವಾಗಿ ವಿಧಾನಸೌಧ ಪ್ರವೇಶಿಸಿದರೆ, ಮೆಟ್ಟಿಲುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ಡಿ.ಕೆ. ಶಿವಕುಮಾರ್ ಒಳನಡೆದರು.
ನಂತರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದರು. ಅದೇ ಮಹಡಿಯಲ್ಲಿರುವ ಸಚಿವ ಸಂಪುಟ ಕೊಠಡಿಯಲ್ಲಿ ಮೊದಲ ಸಭೆ ನಡೆಸಲಾಯಿತು. ಸುದೀರ್ಘ ಸಭೆಯ ನಂತರ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ರಚನೆಯಾದ ಮೇಲೆ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಉಪಮುಖ್ಯಮಂತ್ರಿ ಆದಿಯಾಗಿ ಎಲ್ಲ ಸಚಿವರೂ ಇದ್ದರು. ಪ್ರಮುಖವಾಗಿ ಪ್ರಣಾಳಿಕೆಯಲ್ಲಿ ಅನೇಕ ಭರವಸೆಗಳನ್ನು ನೀಡಿದ್ದೇವೆ. ಈ ಎಲ್ಲ ಭರವಸೆಗಳೂ ಒಂದೇ ವರ್ಷಕ್ಕಲ್ಲ, ಐದು ವರ್ಷಕ್ಕೆ ಈಡೇರಿಸುವ ಭರವಸೆಗಳು. ಇದರಲ್ಲಿ ಐದು ಗ್ಯಾರಂಟಿಗಳನ್ನು ಜನರಿಗೆ ವಾಗ್ದಾನದ ರೂಪದಲ್ಲಿ ಕೊಟ್ಟಿದ್ದೆವು.
ಈ ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ 163 ಭರವಸೆಗಳಲ್ಲಿ 158 ಈಡೇರಿಸಿದ್ದೆವು. ಅದನ್ನೂ ಮೀರಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಆದ್ಧರಿಂದ ನಮ್ಮ ಮೇಲೆ ಜನರಿಗೆ ನಂಬಿಕೆ ಇದೆ. ಆದರೆ ಈಗ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸಲು ಆಗುವುದಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಹೇಳಿದ್ದರು.
ಈ ಎಲ್ಲ ಭರವಸೆಗಳನ್ನೂ ಈಡೇರಿಸಲು ವಾರ್ಷಿಕ ಅಂದಾಜು 50 ಸಾವಿರ ಕೋಟಿ ರೂ. ಆಗಬಹುದು. ನಮ್ಮ ರಾಜ್ಯದ ಬಜೆಟ್ 3.10 ಲಕ್ಷ ಕೋಟಿ ರೂ. ಪ್ರತಿ ವರ್ಷ ಶೇ. 10ಕ್ಕಿಂತ ಹೆಚ್ಚು ಬಜೆಟ್ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಜತೆಗೆ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಮತ್ತಷ್ಟು ಆದಾಯ ಹೆಚ್ಚುತ್ತದೆ. ಕೆಲವು ಇಲಾಖೆಗಳಲ್ಲಿ ತೆರಿಗೆ ಹೆಚ್ಚಿಸಲಾಗದಿದ್ದರೂ ಗುರಿ ಹೆಚ್ಚಿಸಿಕೊಳ್ಳಬಹುದು. ಈ ಯೋಜನೆಗಳನ್ನು ಅನುಷ್ಠಾನ ಮಾಡಿದರೆ ರಾಜ್ಯ ದೀವಾಳಿ ಆಗುತ್ತದೆ ಎಂದು ಇವರು ಹೇಳುತ್ತಾರೆ. ಆದರೆ ಈ ರಾಜ್ಯವನ್ನು ಸಾಲದ ಸುಳಿಗೆ ಸಿಕ್ಕಿಸದೆಯೇ ಈ ಎಲ್ಲ ಗ್ಯಾರಂಟಿಗಳನ್ನೂ ಈಡೇರಿಸುತ್ತೇವೆ.
ಪ್ರತಿ ವರ್ಷ ಈಗ 56 ಸಾವಿರ ಕೋಟಿ ರೂ. ಸಾಲ ಹಾಗೂ ಬಡ್ಡಿ ಮರುಪಾವತಿ ಮಾಡುತ್ತಿದ್ದೇವೆ. ಅಸಲು ಬಡ್ಡಿಗೇ ಇಷ್ಟು ಹಣ ನೀಡುತ್ತಿರುವಾಗ ಇಷ್ಟು ಹಣ ಜನರಿಗೆ ನೀಡಲು ಆಗುವುದಿಲ್ಲವೇ? ಹೆಚ್ಚು ತೆರಿಗೆ ವಸೂಲಿ ಮಾಡುವುದರಿಂದ 15 ಸಾವಿರ ಕೋಟಿ ರೂ. ಪಡೆಯುತ್ತೇವೆ. ದುಂದುವೆಚ್ಚ ಕಡಿಮೆ ಮಾಡಿ, ಸಾಲವನ್ನು ಕಡಿಮೆ ಮಾಡುವುದೂ ಸೇರಿ 50 ಸಾವಿರ ಕೋಟಿ ರೂ. ಹೊಂದಿಸಲು ಕಷ್ಟ ಆಗುವುದಿಲ್ಲ. ಈ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮತ್ತಷ್ಟು ವಿವರ ಪಡೆದು, ಎಷ್ಟೇ ಹೊರೆಯಾದರೂ ಐದೂ ಗ್ಯಾರಂಟಿಗಳನ್ನೂ ಈಡೇರಿಸುತ್ತೇವೆ ಎಂದರು.
ಗ್ಯಾರಂಟಿ ಘೋಷಣೆಗಳು ಹಾಗೂ ನಿಬಂಧನೆಗಳು:
- ಗೃಹಜ್ಯೋತಿ: 200 ಯೂನಿಟ್‌ವರೆಗೆ ವಿದ್ಯುತ್ ಉಚಿತ. ಇದಕ್ಕೆ ಸುಮಾರು 10,200 ಕೋಟಿ ರೂ. ಆಗಬಹುದು.
- ಗೃಹಲಕ್ಷ್ಮೀ: ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ.
- ಅನ್ನಭಾಗ್ಯ: ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ಉಚಿತ
- ಯುವನಿಧಿ: ಈ ವರ್ಷ ಯಾರ‍್ಯಾರು ಪದವೀಧರರು ನಿರುದ್ಯೋಗಿಗಳಿದ್ದಾರೊ, ಅವರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪಡೆದವರಿಗೆ ಮಾಸಿಕ 1.5 ಸಾವಿರ ರೂ. ನಿರುದ್ಯೋಗ ಭತ್ಯೆ. ಎರಡು ವರ್ಷದವರೆಗೆ ನೀಡಲಾಗುತ್ತದೆ.
- ಉಚಿತ ಪ್ರಯಾಣ: ರಾಜ್ಯ ಸರ್ಕಾರದ ಅಧೀನದ ಸಾರಿಗೆ ಸಂಸ್ಥೆಗಳ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಇದರಲ್ಲಿ ಓಡಾಡುವ ಕರ್ನಾಟಕದ ಮಹಿಳೆಯರಿಗೆ ಉಚಿತ ಪಾಸ್ ನೀಡಲಾಗುತ್ತದೆ.
ಇದನ್ನೂ ಓದಿ: Karnataka Election: ಗ್ಯಾರಂಟಿ ಯೋಜನೆಗಳು ಜಾರಿ ಗ್ಯಾರಂಟಿ; ಎಲ್ಲ ಕಾಂಗ್ರೆಸ್ ನಾಯಕರಿಂದ ಗ್ಯಾರಂಟಿ!