ಬೆಂಗಳೂರು: ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀಗಂಧದ ಮರ ಬೆಳೆಯುವ ಕುರಿತ ನೀತಿಗೆ ರಾಜ್ಯ ಸಚಿವ ಸಂಪುಟ (Karnataka Cabinet) ಗುರುವಾರ ಅನುಮೋದನೆ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಶ್ರೀಗಂಧದ ಮರಗಳನ್ನು ಬೆಳೆಯಲು ಈಗಾಗಲೆ ಅನುಮೋದನೆ ಇದ್ದರೂ ಅದನ್ನು ಕಟಾವು ಮಾಡುವುದು, ಮಾರಾಟ ಮಾಡುವುದರ ಕುರಿತು ಅನೇಕ ಗೊಂದಲಗಳಿದ್ದವು. ಇದೀಗ ಹೊಸ ನೀತಿಯಿಂದಾಗಿ ಶ್ರೀಗಂಧದ ಮರಗಳನ್ನು ಬೆಳೆಯುವ ಪ್ರಕ್ರಿಯೆ ಸರಳವಾಗಲಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಳವು ತಡೆಯಲು ನೀತಿಯಲ್ಲಿ ತಿಳಿಸಲಾಗಿದೆ ಎಂದು ಸಂಪುಟ ನಿರ್ಣಯದ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದರು.
ರಾಮನಗರದಲ್ಲಿ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 600 ಕೋಟಿ ರೂ. ಮೊತ್ತದ ಯೋಜನಾ ವೆಚ್ಚಕ್ಕೆ ಅನುಮೋದನೆ ದೊರಕಿದೆ.
ಸಿ ಮತ್ತು ಡಿ ಗ್ರೂಪ್‌ನಲ್ಲಿ ಪತಿ – ಪತ್ನಿ ವರ್ಗಾವಣೆಗೆ ಏಳು ವರ್ಷ ನಿಗದಿ ಮಾಡಲಾಗಿದೆ. ಪತಿ ಮತ್ತು ಪತ್ನಿ ವರ್ಗಾವಣೆಗೆ ಅವಕಾಶ ಇರಲಿಲ್ಲ. ಇದೀಗ ನಿಯಮದಲ್ಲಿ ಸಡಿಲ ಮಾಡಲಾಗಿದೆ. ಏಳು ವರ್ಷ ಪೂರ್ಣಗೊಳಿಸಿದ್ದರೆ ವರ್ಗಾವಣೆ ಮಾಡಬಹುದು. ಈ ನಿಯಮವನ್ನು ಇನ್ನಷ್ಟು ಸಡಿಲ ಮಾಡಿಕೊಳ್ಳಲು ಆಯಾ ಇಲಾಖೆಗೆ ಅವಕಾಶ ನೀಡಲಾಗಿದೆ ಎಂದು ಡಾ. ಸುಧಾಕರ್ ತಿಳಿಸಿದರು.
ಬೆಳಗಾವಿಯಲ್ಲಿ ಡಿ.19ರಿಂದ ಅಧಿವೇಶನ
ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನವನ್ನು ಡಿಸೆಂಬರ್ 19ರಿಂದ 30ರವರೆಗೆ 10 ದಿನ ನಡೆಸಲು ತೀರ್ಮಾನಿಸಲಾಗಿದೆ. ಏಳು ಹೊಸ ವನ್ಯಜೀವಿ ಸಂರಕ್ಷಣಾ ಮೀಸಲು ಪ್ರದೇಶ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ನಿಮ್ಮನೆ ಸುಮ್ಮನೆ ಎನ್‌ಜಿಒಗೆ 15 ಗುಂಟೆ ಮಂಜೂರು, ತಾಯಿ ಮತ್ತು ಮಕ್ಕಳ ಏಳು ಆಸ್ಪತ್ರೆ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ತುಮಕೂರಿನಲ್ಲಿ ನರ್ಸಿಂಗ್ ಕಾಲೇಜಿ ಸ್ಥಾಪಿಸಲು 20 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ಟ್ರಾಮಾ ಕೇರ್ ಸೆಂಟರ್ ನಿರ್ಮಾಣ ಕಾಮಗಾರಿಗೆ 35 ಕೋಟಿ ರೂ. ನೀಡಲು ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ | SCST ಮೀಸಲು | ಸುಗ್ರೀವಾಜ್ಞೆಗೆ ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಸಿಎಂ ಬೊಮ್ಮಾಯಿ ಭರವಸೆ