ಬೆಂಗಳೂರು: ಕಾಂಗ್ರೆಸ್ ಸರ್ಕಾರವು ಭರ್ಜರಿ ಬಹುಮತ ಗಳಿಸಲು ಪ್ರಮುಖ ಕಾರಣ ಎನ್ನಲಾಗುತ್ತಿರುವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ತಾತ್ವಿಕ ಒಪ್ಪಿಗೆಯನ್ನು ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ವಿದ್ಯುತ್ ಉಚಿತವಿದ್ದು, ಇದಕ್ಕೆ ಸುಮಾರು 10,200 ಕೋಟಿ ರೂ. ಆಗಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಆದರೆ ಮುಂದಿನ ಗ್ಯಾರಂಟಿಗಳ ಕುರಿತು ಹೇಳುವಾಗ ಅಂದಾಜು ಮೊತ್ತವನ್ನು ಹೇಳಬೇಡಿ ಎಂದು ಅಕ್ಕ ಪಕ್ಕ ಕುಳಿತಿದ್ದ ಸಹೋದ್ಯೋಗಿಗಳು ಹೇಳಿದರು. ಗೃಹಲಕ್ಷ್ಮೀ ಯೋಜನೆಯಲ್ಲಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ., ಅನ್ನಭಾಗ್ಯ ಯೋಜನೆಯಲ್ಲಿ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ ಉಚಿತ, ಯುವನಿಧಿ ಯೋಜನೆಯಲ್ಲಿ, ಈ ವರ್ಷ ಯಾರ‍್ಯಾರು ಪದವೀಧರರು ನಿರುದ್ಯೋಗಿಗಳಿದ್ದಾರೊ, ಅವರಿಗೆ ಗರಿಷ್ಠ ಎರಡು ವರ್ಷದವರೆಗೆ ಅಥವಾ ಕೆಲಸ ಸಿಗುವವರೆಗೆ ಮಾಸಿಕ 3 ಸಾವಿರ ರೂ., ಡಿಪ್ಲೊಮಾ ಪಡೆದವರಿಗೆ ಮಾಸಿಕ 1.5 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಅಧೀನದ ಸಾರಿಗೆ ಸಂಸ್ಥೆಗಳ ಬಸ್‌ನಲ್ಲಿ ಕರ್ನಾಟಕದ ಮಹಿಳೆಯರಿಗೆ ಉಚಿತ ಪ್ರಯಾಣವಿರಲಿದ್ದು, ಉಚಿತ ಪಾಸ್ ನೀಡಲಾಗುತ್ತದೆ ಎಂದರು.
ಇದೆಲ್ಲ ಯೋಜನೆಗಳ ಜಾರಿಗೆ ಸರಿಸುಮಾರು 50 ಸಾವಿರ ಕೋಟಿ ರೂ. ವೆಚ್ಚವಾಗಬಹುದು. ತೆರಿಗೆ ಸಂಗ್ರಹ ಗುರಿಯನ್ನು ಹೆಚ್ಚಿಸಿಕೊಂಡರೆ ಸುಮಾರು 15 ಸಾವಿರ ಕೋಟಿ ರೂ. ಸಿಗುತ್ತದೆ. ಇನ್ನು ಅನಗತ್ಯ ವೆಚ್ಚ ಕಡಿತ ಮಾಡುವುದು ಸೇರಿ ವಿವಿಧೆಡೆಯಿಂದ ಉಳಿದ ಹಣವನ್ನು ಹೊಂದಿಸುತ್ತೇವೆ. ನೈಜವಾಗಿ ಎಷ್ಟು ವೆಚ್ಚವಾಗಬಹುದು ಎಂದು ಸದ್ಯದಲ್ಲೇ ನಿರ್ಧಾರ ಮಾಡಲಾಗುತ್ತದೆ ಎಂದರು.
62 ಸಾವಿರ ಕೋಟಿ ರೂ. ಅಂದಾಜು
ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಿಗೆ ಸುಮಾರು 60-62 ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ವಿವಿಧ ಮಾಧ್ಯಮ ಸಂಸ್ಥೆಗಳು, ಆರ್ಥಿಕ ತಜ್ಞರು ಮಾಡಿದ ಲೆಕ್ಕದಲ್ಲಿ ತಿಳಿದುಬಂದಿತ್ತು. ಆದರೆ ಸಿದ್ದರಾಮಯ್ಯ ಮೊದಲ ಸಂಪುಟ ಸಭೆಯಲ್ಲೇ 10-12 ಸಾವಿರ ಕೋಟಿ ರೂ. ಕಡಿತ ಮಾಡಿ 50 ಸಾವಿರ ರೂ.ಗೆ ಇಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಗೆ ಹೇರಲಾಗುವ ಕಂಡೀಷನ್‌ಗಳ ಜತೆಗೆ ಇನ್ನಿತರೆ ಅನೇಕ ಕಾರಣಗಳು ಇದರ ಹಿಂದೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವುಗಳೆಂದರೆ,
- ಮಹಿಳೆಯರಿಗೆ ಉಚಿತ ಬಸ್ ಪಾಸ್ ಯೋಜನೆಯು ಎಲ್ಲ ಮಹಿಳೆಯರಿಗೂ ಅಲ್ಲ, ಬದಲಿಗೆ ಕರ್ನಾಟಕದ ಮಹಿಳೆಯರಿಗೆ ಮಾತ್ರ
- ಮಹಿಳೆಯರೂ ಸೇರಿ 60 ವರ್ಷ ದಾಟಿದ ಎಲ್ಲರಿಗೂ ಕೆಎಸ್‌ಆರ್‌ಟಿಸಿ ಪ್ರಯಾಣ ದರದಲ್ಲಿ ಶೇ.25 ರಿಯಾಯಿತಿ ಒದಗಿಸಲಾಗುತ್ತಿದೆ. ಈಗಾಗಲೆ ಈ ಶೇ.25 ವೆಚ್ಚವಾಗುತ್ತಿದ್ದು, ಉಳಿದ ಶೇ.75 ಸೇರಿಸಿದರೆ ಆಯಿತು.
- ಅಂಗವಿಕಲರಿಗೆ ಈಗಾಗಲೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ವಾರ್ಷಿಕ ಕೇವಲ 660 ರೂ. ಪಡೆಯುತ್ತಿದ್ದು, ಉಳಿದ ಹಣವನ್ನು ಸರ್ಕಾರವೇ ಭರಿಸುತ್ತಿದೆ. ಇಲ್ಲಿಯೂ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಆಗುವುದು ಕೇವಲ 660 ರೂ.
- ಅಂಧರಿಗೆ ಈಗಾಗಲೆ ಸರ್ಕಾರ ಉಚಿತ ಬಸ್ ಪಾಸ್ ವಿತರಣೆ ಮಾಡುತ್ತಿದೆ.
- ಬಸ್ ಪಾಸ್‌ಗಳ ಮೂಲಕ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ನೀಡಬಹುದು. ತೀರಾ 150-200 ಕಿಲೋಮೀಟರ್ ದೂರ ಪ್ರಯಾಣಿಸುವವರನ್ನು ಹೊರತುಪಡಿಸಿ ಅದಕ್ಕಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ ಬಹಳಷ್ಟು ಜನರು ರಾಜಹಂಸ, ನಾನ್‌ಸ್ಟಾಪ್ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೆಲ್ಲದರಿಂದಾಗಿ ಅನೇಕ ಮಹಿಳೆಯರು ಯೋಜನೆಯ ಪೂರ್ಣ ಲಾಭ ಪಡೆಯಲು ಆಗುವುದಿಲ್ಲ, ಸರ್ಕಾರಕ್ಕೆ ಅಷ್ಟು ಉಳಿತಾಯವಾಗುತ್ತದೆ.
- ಗೃಹಲಕ್ಷ್ಮೀ ಯೋಜನೆಯಲ್ಲಿ ತಿಳಿಸಿರುವಂತೆ, ಮನೆಯ ಯಜಮಾನಿ ಎನ್ನುವುದಕ್ಕೆ ಮಾನದಂಡ ನಿಗದಿ ಆಗಿಲ್ಲ. 60 ವರ್ಷ ದಾಟಿದ ಮಹಿಳೆಯರು, ವಿಧವೆಯರು, ಅಂಗವಿಕಲೆಯರು ಈಗಾಗಲೆ ಮಾಸಾಶನ ಪಡೆಯುತ್ತಿದ್ದಾರೆ. ಇವರೆಲ್ಲರನ್ನೂ ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡಬಹುದು.
- ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು, ಸಂಘಟಿತ ವಲಯದಲ್ಲಿರುವ ಮಹಿಳೆಯರು, ಆದಾಯ ತೆರಿಗೆ ಪಾವತಿಸುವ ಮಹಿಳೆಯರನ್ನು ಯೋಜನೆಯಿಂದ ಹೊರಗಿಡಬಹುದು.
- ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಸದ್ಯ 200 ಯೂನಿಟ್ ಒಳಗೆ ಬಹುತೇಕ ಮನೆಗಳು ಆಗಮಿಸುತ್ತವಾದರೂ, ಅತ್ಯಂತ ವೇಗವಾಗಿ ವಿದ್ಯುತ್ ವಾಹನಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮನೆಯ ವಿದ್ಯುತ್ ಬಳಕೆ 200 ಯೂನಿಟ್ ದಾಟಬಹುದು. 200 ಯೂನಿಟ್ ದಾಟಿದ ನಂತರ ಸಂಪೂರ್ಣ ಬಳಕೆಗೆ ಬಿಲ್ ಪಾವತಿಸಬೇಕು ಎಂಬ ನಿಬಂಧನೆ ಹೇರಬಹುದು.
- ಖಾಸಗಿ ವಲಯದ ಉದ್ಯೋಗ ಪಡೆದವರಿಗೂ ನಿರುದ್ಯೋಗ ಭತ್ಯೆ ಇರುವುದಿಲ್ಲ. ಹೆಚ್ಚಿನ ಪದವೀಧರರು ಓದು ಮುಗಿದ ಕೂಡಲೆ ಯಾವುದಾದರೂ ಒಂದು ಕೆಲಸಕ್ಕೆ ಸೇರುತ್ತಾರೆ. ಅವರೆಲ್ಲರೂ ಯೋಜನೆಯಿಂದ ಹೊರಗೆ ಉಳಿಯುತ್ತಾರೆ. ಯಾವುದೇ ಸಂಘಟಿತ ವಲಯದ ಕಚೇರಿಗೆ ಕೆಲಸಕ್ಕೆ ಸೇರದೆ, ಕೃಷಿ, ಸ್ವಯಂ ಗುಡಿ ಕೈಗಾರಿಕೆ ನಡೆಸುವ ಯುವಕರಷ್ಟೆ ಎರಡು ವರ್ಷದವರೆಗೆ ಲಾಭ ಪಡೆಯುತ್ತಾರೆ.
- ಸ್ವಯಂ ಉದ್ಯೋಗ ನಡೆಸುವ ಯುವಕರೂ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವಾಗ ಆಧಾರ್, ಪಾನ್ ಸಂಖ್ಯೆ ನೀಡುವುದರಿಂದ ಅಲ್ಲಿಂದಲೂ ಪತ್ತೆ ಹಚ್ಚಿ ಅವರನ್ನು ಯೋಜನೆಯಿಂದ ಹೊರಗಿಡಬಹುದು.
- ಅನ್ನ ಭಾಗ್ಯ ಯೋಜನೆಗೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಕೇಂದ್ರ ಸರ್ಕಾರ ಧವಸ, ಧಾನ್ಯ ನೀಡುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರ ಹೆಚ್ಚುವರಿ ಹೊರೆಯನ್ನು ಹೊತ್ತುಕೊಂಡರೆ ಅನ್ನಭಾಗ್ಯ ಪೂರ್ಣವಾಗುತ್ತದೆ.
ಇದೆಲ್ಲ ಕಾರಣಗಳಿಂದಾಗಿ, ಹಾಗೂ ಯೋಜನೆ ಜಾರಿ ಸಮಯದಲ್ಲಿ ವಿಧಿಸಬಹುದಾದ ಇನ್ನಷ್ಟು ನಿಬಂಧನೆಗಳ ಕಾರಣಕ್ಕೆ ಸರ್ಕಾರಕ್ಕೆ ಸಾಕಷ್ಟು ದೊಡ್ಡ ಮೊತ್ತ ಉಳಿತಾಯ ಆಗಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ.