Site icon Vistara News

Karnataka CM : ಕಂಠೀರವ ಸ್ಟೇಡಿಯಂ ಸುತ್ತಮುತ್ತ ಟ್ರಾಫಿಕ್ ಜಾಮ್, ಮುಂಜಾನೆಯೇ ಜನಜಂಗುಳಿ, ಮೂವರಿಗೆ ಗಾಯ

kanteeerav stadium

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್‌ (DK shivakumar) ಅವರು ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಕಂಠೀರವ ಸ್ಟೇಡಿಯಂ ಸುತ್ತಮುತ್ತ ಸಾವಿರಾರು ಜನ ಬೆಳಗ್ಗಿನಿಂದಲೇ ಸೇರಲು ಆರಂಭಿಸಿದ್ದಾರೆ. ಸ್ಟೇಡಿಯಂ ಸುತ್ತಮುತ್ತ ವಾಹನಗಳ ದಟ್ಟಣೆ ಹೆಚ್ಚಿದ್ದು, ಬೆಳಗ್ಗಿನಿಂದಲೇ ಟ್ರಾಫಿಕ್‌ ಜಾಂ ಉಂಟಾಗಿದೆ.

ಬೆಳಗ್ಗೆಯೇ ಸ್ಟೇಡಿಯಂಗೆ ಎರಡು ದ್ವಾರಗಳ ಮೂಲಕ ಪ್ರವೇಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ನೂಕಾಟ, ತಳ್ಳಾಟ ಸಂಭವಿಸಿದ್ದರಿಂದ ಬಳಿಕ ಎಚ್ಚೆತ್ತ ಪೊಲೀಸರು 8.45ರವರೆಗೂ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರು. ನೂಕಾಟದಲ್ಲಿ ಮೂವರು ಸಾರ್ವಜನಿಕರಿಗೆ ಗಾಯಗಳಾಗಿವೆ. ಒಬ್ಬ ಟ್ರಾಫಿಕ್ ಸಿಪಿಐಗೆ ಗಾಯವಾಗಿದೆ. ಸ್ಥಳಕ್ಕೆ ಸಿಸಿಬಿ ಜಂಟಿ ಕಮಿಷನರ್ ಶರಣಪ್ಪ ಭೇಟಿ ನೀಡಿದ್ದು, ಬಳಿಕ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ಬಾಂಬ್‌ ಸ್ಕ್ವಾಡ್‌, ಶ್ವಾನದಳ ಇತ್ಯಾದಿಗಳ ಮೂಲಕ ಇಡೀ ಸ್ಟೇಡಿಯಂ ಹಾಗೂ ವೇದಿಕೆ ಇತ್ಯಾದಿಗಳನ್ನು ವಿವರವಾಗಿ ತಪಾಸಿಸಲಾಗಿದೆ.

ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಟ್ಠಲ್‌ ಮಲ್ಯ ರಸ್ತೆ ಬಳಿ ಸಂಚಾರ ದಟ್ಟಣೆ ಉಂಟಾಗಿದೆ. ಮಂಡ್ಯ, ಮೈಸೂರು, ರಾಮನಗರ, ಚನ್ನಪಟ್ಟಣ, ವರುಣಾ, ಚಾಮರಾಜನಗರ ಮುಂತಾದ ಕಡೆಗಳಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿ ಬೆಂಬಲಿಗರು ಸ್ವಂತ ವಾಹನಗಳನ್ನು ಮಾಡಿಕೊಂಡು ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಬೆಳಗ್ಗೆಯೇ ಆಗಮಿಸುತ್ತಿದ್ದಾರೆ.

ತಂಡೋಪತಂಡವಾಗಿ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರ ಬೆಂಬಲಿಗರು ಅವರ ಮನೆಯ ಬಳಿಯೂ ಜಮಾಯಿಸುತ್ತಿದ್ದಾರೆ. ಬದಾಮಿ, ವಿಜಯನಗರ, ಸಿದ್ದರಾಮಯ್ಯ ಹುಟ್ಟೂರು ಸಿದ್ದರಾಮನಹುಂಡಿಯಿಂದಲೂ ಜನ ಆಗಮಿಸುತ್ತಿದ್ದಾರೆ.

ಸಿದ್ದರಾಮಯ್ಯ ಭಾವಚಿತ್ರ ಇರುವ ಟಿ ಶರ್ಟ್ ಮಾರಾಟ

ಸ್ಟೇಡಿಯಂ ಬಳಿ ಸಿದ್ದರಾಮಯ್ಯ ಭಾವಚಿತ್ರ ಇರುವ ಟಿ ಶರ್ಟ್ ಜೋರಾಗಿ ಮಾರಾಟವಾಗುತ್ತಿದೆ. ಒಂದು ಟಿ ಶರ್ಟ್‌ಗೆ 150 ರೂಪಾಯಿಯಂತೆ ಮಾರಲಾಗುತ್ತಿದ್ದು, ಟಿ ಶರ್ಟ್ ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಕಂಠೀರವ ಬಳಿಯ ಮಲ್ಯ ಆಸ್ಪತ್ರೆ ಮುಂಭಾಗದ ಗೇಟ್ ಬಳಿ ಮಾರಲಾಗುತ್ತಿದೆ.

ಇದನ್ನೂ ಓದಿ: Karnataka CM : 30:30 ಫಾರ್ಮುಲಾ ಸಿಎಂ, ಡಿಸಿಎಂಗೆ ಮಾತ್ರ ಅಲ್ಲ; ಸಚಿವರು, ನಿಗಮ ಮಂಡಳಿಗೂ ವಿಸ್ತರಣೆ?

Exit mobile version