ಬೆಂಗಳೂರು: ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಂಠೀರವ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣವಚನ ಹಾಗೂ ಗೌಪ್ಯತಾ ಪ್ರಮಾಣ ಸ್ವೀಕರಿಸಿದರು. ನಂತರ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಶ್ರೀ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇಬ್ಬರೂ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು. ಪ್ರಮಾಣವಚನದ ನಂತರ ಎಲ್ಲರ ಬಳಿ ಸಾಗಿದ ನಾಯಕರು ಧನ್ಯವಾದ ಸಲ್ಲಿಸಿದರು. ರಾಜ್ಯಪಾಲರು ಹೂಗುಚ್ಛ ನೀಡಿ ಅಭಿನಂದಿಸಿದರು.
ನಂತರ ಒಬ್ಬೊಬ್ಬರಾಗಿ ಡಾ.ಜಿ. ಪರಮೇಶ್ವರ್ ಅವರು ಸಂವಿಧಾನದ ಹೆಸರಿನಲ್ಲಿ, ಕೆ.ಎಚ್. ಮುನಿಯಪ್ಪ ಅವರು ದೇವರ ಹೆಸರಿನಲ್ಲಿ, ಕೆ.ಜೆ. ಜಾರ್ಜ್ ಅವರು ದೇವರ ಹೆಸರಿನಲ್ಲಿ, ಎಂ.ಬಿ. ಪಾಟೀಲ್ ಅವರು ದೇವರ ಹೆಸರಿನಲ್ಲಿ, ಸತೀಶ್ ಜಾರಕಿಹೊಳಿ ಅವರು ಬುದ್ಧ-ಬಸವ-ಅಂಬೇಡ್ಕರ್ ಹೆಸರಿನಲ್ಲಿ, ಪ್ರಿಯಾಂಕ್ ಖರ್ಗೆ ಅವರು ದೇವರ ಹೆಸರಿನಲ್ಲಿ, ರಾಮಲಿಂಗಾರೆಡ್ಡಿ, ಬಿ.ಜಡ್. ಜಮೀರ್ ಅಹ್ಮದ್ ಖಾನ್ ಅವರು ಅಲ್ಲಾಹು ಹಾಗೂ ತಾಯಿಯ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಮುಂಬರುವ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನವೆಂಬಂತೆ ಕಮ್ಯುನಿಸ್ಟ್ ಪಕ್ಷದ ಸೀತಾರಾಮ್ ಯೆಚೂರಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್, ನಟ ಕಮಲ್ ಹಾಸನ್, ಮೆಹಬೂಬಾ ಮುಫ್ತಿ, ನಿತೀಶ್ ಕುಮಾರ್ ಸೇರಿ ವಿವಿಧ ರಾಜ್ಯಗಳ, ವಿವಿಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಅವರ ಕುಟುಂಬಸ್ಥರೂ ಉಪಸ್ಥಿತರಿದ್ದರು. ಜತೆಗೆ ಗೀತಾ ಶಿವರಾಜ್‌ಕುಮಾರ್, ಶಿವರಾಜ್‌ಕುಮಾರ್ ದಂಪತಿಯೂ ಉಪಸ್ಥಿತರಿದ್ದರು.
ಚುನಾವಣೆಗೂ ಮುನ್ನ ಹಾಗೂ ಚುನಾವಣೆ ಸಮಯದಲ್ಲೂ ಕರ್ನಾಟಕದಲ್ಲಿ ವ್ಯಾಪಕ ಪ್ರವಾಸ ಮಾಡಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹ ಉಪಸ್ಥಿತರಿದ್ದು ತಮ್ಮ ಶಕ್ತಿಪ್ರದರ್ಶನ ಮಾಡಿದರು.