ಬೆಂಗಳೂರು: ಒಂದೆಡೆ 135 ಸ್ಥಾನ ಗಳಿಸಿದ ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಗಾದಿಗೆ ಹಗ್ಗಜಗ್ಗಾಟ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್-ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದ ತಂಡ ದ ಸದಸ್ಯರು ಒಬ್ಬೊಬ್ಬರಾಗಿ ಮಾತನಾಡುತ್ತಿದ್ದಾರೆ.
ಸಿದ್ದರಾಮಯ್ಯ ಕುರಿತು ಕುತೂಹಲಕಾರಿಯಾಗಿ ಟ್ವೀಟ್ ಮಾಡುತ್ತಿರುವ ಸದಸ್ಯರ ಮಾತುಗಳು ಯಾವ ಕಾರಣಕ್ಕೆ ಎನ್ನುವ ರಹಸ್ಯವನ್ನು ಹೊರಗೆಡವುತ್ತಿಲ್ಲ. ಮೊದಲಿಗೆ ಈ ಟ್ವೀಟ್ ಸರಣಿ ಪಟಾಕಿಯನ್ನು ಆರಂಭಿಸಿದವರು ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು.
ಮೊದಲಿಗೆ ಟ್ವೀಟ್ ಮಾಡಿದ್ದ ಸುಧಾಕರ್, “2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು.”
“2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು.”
“ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ?” ಎಂದಿದ್ದಾರೆ.
ಈ ಮಾತಿಗೆ ದನಿಗೂಡಿಸಿರುವ ಮಾಜಿ ಸಚಿವ ಎಸ್.ಟಿ. ಸೋಮಶೇಖರ್, “ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದುʼʼ ಎಂದಿದ್ದಾರೆ.
ಮತ್ತೊಬ್ಬ ಮಾಜಿ ಸಚಿವ ಭೈರತಿ ಬಸವರಾಜ ಟ್ವೀಟ್ ಮಾಡಿ, “2018ರ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರವೇ ಸಿಗದಿದ್ದಾಗ ನಮ್ಮ ಸಮಸ್ಯೆಯನ್ನು ಬಗೆಹರಿಸುವ ಸ್ಥಾನದಲ್ಲಿದ್ದ ಮಾನ್ಯ ಸಿದ್ದರಾಮಯ್ಯನವರನ್ನು ವಿನಂತಿಸಿದರೂ ಸ್ವತಹ ನನಗೇ ಈ ಸಮಸ್ಯೆ ಇದೆ 2019ರ ಚುನಾವಣೆವರೆಗೆ ಮಾತ್ರ ಈ ಸರ್ಕಾರವಿರಲಿದೆ ಎಂದರು ಹಾಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ರಾಜೀನಾಮೆ ನೀಡಬೇಕಾಯಿತು” ಎಂದು ಹೇಳಿದ್ದಾರೆ.
ಎಂಟಿಬಿ ರಿವರ್ಸ್ ಗೇರ್
ಮಾಜಿ ಸಚಿವರುಗಳು ಒಂದೆಡೆ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆ ಮಾಡುತ್ತಿದ್ದರೆ ಇತ್ತ ಮತ್ತೊಬ್ಬ ಮಾಜಿ ಸಚಿ ವ ಹಾಗೂ ಇದೀಗ ಚುನಾವಣೆಯಲ್ಲಿ ಸೋಲುಂಡಿರುವ ಎಂ.ಟಿ.ಬಿ. ನಾಗರಾಜ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
“ಮಾನ್ಯ ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ”
“ಮಾಜಿ ಸಚಿವರಾದ ಸುಧಾಕರ್ ರವರು ಇಂದು ಮಾನ್ಯ ಸಿದ್ದರಾಮಯ್ಯ ರವರ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು?”
“ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು?” ಎಂದಿದ್ದಾರೆ.
ವಲಸೆ ಬಂದ ಮಾಜಿ ಸಚಿವರುಗಳು ಒಬ್ಬೊಬ್ಬರಾಗಿ ಬಾಯಿ ಬಿಡುತ್ತಿರುವುದು ಯಾವ ಕಾರಣಕ್ಕೆ ಎನ್ನುವುದು ಕುತೂಹಲ ಉಳಿಸಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಕಟ್ಟಲು ಪ್ರಯತ್ನಗಳು ನಡೆಯುತ್ತಿವೆ. ಸಿದ್ದರಾಮಯ್ಯ ಸಿಎಂ ಆದರೆ ತಮಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಡಿ.ಕೆ. ಶಿ ಸಿಎಂ ಆಗಲು ಇವರು ಈ ರೀತಿ ಹೇಳಿಕೆ ನೀಡುತ್ತಿರಬಹುದು ಎಂಬ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ಎಂಟಿಬಿ ನಾಗರಾಜ್ ಮಾತ್ರ ಇವರೆಲ್ಲರಿಗೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದ ಪುಷ್ಪಾ ಅಮರನಾಥ್, ಅಶೋಕ್ ಪಟ್ಟಣ್‌ಗೆ ನೋಟಿಸ್