ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷದ ಸೂತ್ರವನ್ನು ಸುಸೂತ್ರವಾಗಿ ನಡೆಸಿಕೊಂಡು ಬಂದರೂ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಹಿಂದೇಟು ಹಾಕುತ್ತಿರುವುದರ ಕುರಿತು ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನೊಣವಿನಕೆರೆಯ ಅಜ್ಜಯನ ಸನ್ನಿಧಿಗೆ ಧಾವಿಸಿದ ನಂತರ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಪೂಜೆ ಪುನಸ್ಕಾರ ಎಲ್ಲಾ ಮಾಡಬೇಕಿದೆ. ನನ್ನ ಯಾವ ಶಾಸಕರನ್ನೂ ಕರೆದುಕೊಂಡು ಹೋಗಲ್ಲ. ನನಗೆ ಯಾರ ಬೆಂಬಲವೂ ಬೇಡ. ನನ್ನ ಕರ್ತವ್ಯ ನಾನು ಮಾಡಿದ್ದೀನಿ.
ನನ್ನನ್ನ ಬಂಡೆ ಎಂದು ಕರೆದಿದ್ದೀರ. ವಿಗ್ರಹವಾದ್ರೂ ಮಾಡಿ, ವಿಧಾನಸೌಧಕ್ಕೆ ಚಪ್ಪಡಿಯಾದ್ರು ಮಾಡಿ, ಮರಳಾದ್ರು ಮಾಡಿ, ಗರುಡು ಗಂಬವಾದ್ರು ಮಾಡಿ. ಒಟ್ನಲ್ಲಿ ವಿಧಾನಸೌಧಕ್ಕೆ ಚಪ್ಪಡಿ ಮಾಡಿ ಅಂತ ಹೇಳಿದ್ದೆ. ನನ್ನ ಹತ್ತಿರ ನಂಬರ್ ಇಲ್ಲ. ನಾನು ಪಕ್ಷ ಪೂಜೆ ಮಾಡ್ತೀನಿ ವ್ಯಕ್ತಿ ಪೂಜೆಯಲ್ಲ ಎಂದರು.
ಸಿಎಂ ಸ್ಥಾನ ಕೊಡಿ ಇಲ್ಲದಿದ್ದರೆ ಏನೂ ಬೇಡ ಎಂದು ಹೈಕಮಾಂಡ್‌ಗೆ ತಿಳಿಸಿರುವ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನನಗೆ ತಾಳ್ಮೆ ಸಮಯ ಪ್ರಜ್ಞೆ ಹೋರಾಟ ಮನೋಭಾವವಿದೆ. ಪಾಂಡವರ ಸೂತ್ರ ಅನುಸರಿಸ್ತೇವೆ ಅಂತ ವಿಧಾನ ಸಭೆಯಲ್ಲಿ ಹೇಳಿದ್ದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ. ಇಷ್ಟು ಸಾಕು ನನಗೆ ಎಂದರು.
ಈಗಾಗಲೆ ನವದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ಸಿಎಂ ಆಯ್ಕೆ ಸಂಬಂಧ ಸಭೆ ನಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಆದರೆ ವಿವಿಧ ಪೂಜೆಗಳನ್ನು ಮಾಡಬೇಕಿರುವುದರಿಂದ ಹಾಗೂ ಹೊಟ್ಟೆಯಲ್ಲಿ ಸಮಸ್ಯೆಯಿಂದಾಗಿ ನವದೆಹಲಿಗೆ ಡಿ.ಕೆ. ಶಿವಕುಮಾರ್ ತೆರಳುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು