Site icon Vistara News

Karnataka CM: ಒಕ್ಕಲಿಗ ಆಯ್ತು, ಈಗ ಲಿಂಗಾಯತ ಮುಖ್ಯಮಂತ್ರಿಗೆ ಪಂಚ ಪೀಠ ಶ್ರೀಗಳಿಂದ ಬೇಡಿಕೆ!

cm siddaramaiah karnataka cm

ಚಿಕ್ಕೋಡಿ: ಡಿಕೆ ಶಿವಕುಮಾರ್‌ (DK Shivakumar) ಅವರನ್ನು ಸಿಎಂ (Karnataka CM) ಮಾಡಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಕೆಶಿ ಸಮ್ಮುಖದಲ್ಲಿಯೇ ನಿನ್ನೆ ಚಂದ್ರಶೇಖರ ಸ್ವಾಮೀಜಿ (Chandrashekhara swamiji) ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ಡಿಮಾಂಡ್‌ ಇಟ್ಟಿದ್ದರು. ಇದೀಗ ಲಿಂಗಾಯತ (Lingayat) ಸ್ವಾಮೀಜಿಗಳು, ಲಿಂಗಾಯತ ಸಿಎಂ ಬೇಡಿಕೆ ಮಂಡಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಪಂಚ ಪೀಠದಿಂದ ಬೇಡಿಕೆ ಮಂಡನೆಯಾಗಿದೆ. ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ನಿನ್ನೆ ಚಂದ್ರಶೇಖರ ಸ್ವಾಮೀಜಿ ಅವರು ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಆಯಾ ಸಮುದಾಯಗಳ ಸ್ವಾಮೀಜಿಗಳ ಮೂಲಕವೇ ಲಿಂಗಾಯತ ಮುಖ್ಯಮಂತ್ರಿಗೆ ಒತ್ತಡ ಹಾಕಿಸುವ ಪ್ರಯತ್ನ ಮುಂದುವರಿದಿದೆ. ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಶ್ರೀಶೈಲ ಜಗದ್ಗುರುಗಳು ಈ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನು ಹೆಚ್ಚುವರಿ ಮಾಡಿದರೆ ಲಿಂಗಾಯತ ಮಂತ್ರಿಗಳಿಗೆ ಹೆಚ್ಚಿನ ಸ್ಥಾನ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದಿದ್ದಾರೆ.

ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ. ಒಂದು ವೇಳೆ ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ಒಡಂಬಡಿಕೆ ಆಗಿದ್ದರೆ ಒಡಂಬಡಿಕೆಯ ಪ್ರಕಾರ ನಡೆದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.

ಡಿಕೆಶಿ ಸಿಎಂ ಮಾಡಿ: ಚಂದ್ರಶೇಖರ ಸ್ವಾಮೀಜಿ

ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಿಎಂ ಮಾಡಿ ಎಂದು ಸ್ವಾಮೀಜಿಯೊಬ್ಬರು ಸಿಎಂ ಸಿದ್ದರಾಮಯ್ಯ (CM Siddaramaiah) ಮುಂದೆ ವೇದಿಕೆಯ ಮೇಲೆಯೇ ಬೇಡಿಕೆ ಇಟ್ಟ ಪ್ರಸಂಗ ಕೆಂಪೇಗೌಡ ಜಯಂತಿ (Kempegowda Jayanthi) ಕಾರ್ಯಕ್ರಮದಲ್ಲಿ ನಡೆಯಿತು. ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekhara swamiji) ಅವರು ಸಿದ್ದರಾಮಯ್ಯ ಅವರಿಗೆ ವೇದಿಕೆಯಲ್ಲೇ ಬಹಿರಂಗವಾಗಿ ಈ ಬೇಡಿಕೆಯನ್ನು ಇಟ್ಟಿದ್ದಾರೆ.

ಎಲ್ಲರೂ ಮುಖ್ಯಮಂತ್ರಿಗಳಾಗಿ ತಮ್ಮ ತಮ್ಮ ಅಧಿಕಾರ ಅನುಭವಿಸಿದ್ದಾರೆ. ಆದರೆ ಡಿಕೆ ಶಿವಕುಮಾರ್ ಒಬ್ಬರು ಮುಖ್ಯಮಂತ್ರಿ ಆಗಿಲ್ಲ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಸ್ಥಾನ ಅನುಭವಿಸಿದ್ದಾರೆ. ಆ ಕಾರಣಕ್ಕಾಗಿ ಇನ್ನು ಮುಂದೆ ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿದರು.

ಇದು ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿದರೆ ಇದು ಆಗಲಿದೆ, ಇಲ್ಲಾಂದ್ರೆ ಆಗಲ್ಲ. ಹಾಗಾಗಿ ದಯವಿಟ್ಟು ಡಿಕೆಶಿಯನ್ನು ಸಿಎಂ ಆಗಿ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ವೇದಿಕೆಯಲ್ಲಿ ಕೇಳಿಕೊಂಡರು. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಸಚಿವರು ಕೂಡಾ ಉಪಸ್ಥಿತರಿದ್ದರು. ಸ್ವಾಮೀಜಿ ನೀಡಿದ ಈ ಹೇಳಿಕೆಯನ್ನು ಸಭಿಕರಲ್ಲಿದ್ದ ಡಿಕೆ ಶಿವಕುಮಾರ್ ಬೆಂಬಲಿಗರು ಚಪ್ಪಾಳೆ ಶಿಳ್ಳೆಗಳ ಮೂಲಕ ಸ್ವಾಗತಿಸಿದರು.

ಸ್ವಾಮೀಜಿ ಹೇಳಿಕೆ ಕುರಿತು ಸಿಎಂ ಆಗಲೀ, ಡಿಕೆಶಿ ಆಗಲೀ ವೇದಿಕೆ ಮೇಲೆ ಯಾವುದೇ ಉತ್ತರ ನೀಡಲಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಿಂದ ಹೊರಬಂದ ಬಳಿಕ ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. “ನಮ್ಮದು ಹೈಕಮಾಂಡ್ ಸಂಸ್ಕೃತಿಯ ಪಕ್ಷ. ಹೈಕಮಾಂಡ್ ನಿರ್ಧಾರವೇ ಅಂತಿಮ” ಎಂದು ಹೇಳಿದರು. ಈ ಮೂಲಕ, ಸಿಎಂ ಸ್ಥಾನ ಅಷ್ಟು ಸುಲಭವಿಲ್ಲ ಎಂಬ ಸಂದೇಶ ರವಾನೆ ಮಾಡಿದರು. ಡಿಕೆಶಿ ಸಿಎಂ ಆಗೋದು ಹೈಕಮಾಂಡ್ ಕೈಯಲ್ಲಿ ಇದೆ ಅನ್ನುವುದನ್ನು ಸ್ಪಷ್ಟಪಡಿಸಿದರು.

ಇದನ್ನೂ ಓದಿ: HD Kumaraswamy: ನನ್ನ ಹೃದಯದಲ್ಲಿ ಕೆಂಪೇಗೌಡರಿದ್ದಾರೆ, ಆಹ್ವಾನ ಬೇಕಿಲ್ಲ; ಕುಮಾರಸ್ವಾಮಿ

Exit mobile version