ಬೆಂಗಳೂರು: ರಾಜ್ಯ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕಾರದಲ್ಲಿ ಭಾಗವಹಿಸಿ ಪ್ರತಿಪಕ್ಷ ಒಗ್ಗಟ್ಟು ತೋರಿಸಲು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಆಗಮಿಸಲಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಆಗಮಿಸಿದ ಹಿನ್ನೆಲೆಯಲ್ಲಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಭಿಮಾನಿಗಳು ಸ್ವಾಗತ ಕೋರಿದರು. ಹೂಗುಚ್ಛ ನೀಡಿ ಸ್ವಾಗತ ಕೋರಲು ಸ್ಟಾಲಿನ್ ಅಭಿಮಾನಿಗಳು ಮುಗಿಬಿದ್ದರು. ನಂತರ ಕೆಐಎಎಲ್‌ನಿಂದ ಸ್ಟಾಲಿನ್ ಬೆಂಗಳೂರಿನತ್ತ ಆಗಮಿಸಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಮಾಣ ವಚನದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ಅವರು ತಮ್ಮ ಆಗಮನವನ್ನು ಖಚಿತಪಡಿಸಿದ್ದರು. ಜಮ್ಮು ಕಾಶ್ಮಿರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೂಡ ಆಗಮಿಸುತ್ತಿದ್ದು, ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬಿಗಿ ಭದ್ರತೆಯಲ್ಲಿ ದಿಲ್ಲಿ ಏರ್‌ಪೋರ್ಟ್‌ನಿಂದ ಬೆಂಗಳೂರಿನತ್ತ ಹೊರಟ ಮುಫ್ತಿ, ತಡರಾತ್ರಿ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸದಿದ್ದರೂ, ಪಕ್ಷದ ನಾಯಕ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಕಾರ್ಯಕ್ರಮಕ್ಕೆ ಕಳುಹಿಸುತ್ತಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ಖಚಿತಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ, ರಾಷ್ಟ್ರೀಯ ಜನತಾ ದಳ, ಶಿವಸೇನೆ (ಯುಬಿಟಿ), ಸಮಾಜವಾದಿ ಪಕ್ಷ, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಎಂಡಿಎಂಕೆ, ಕ್ರಾಂತಿಕಾರಿ ಪಕ್ಷ ಸಮಾಜವಾದಿ ಪಕ್ಷ, ಕಮ್ಯುನಿಸ್ಟ್ ಪಾರ್ಟಿ ಸೋಷಿಯಲಿಸ್ಟ್ ಪಕ್ಷ, ರಾಷ್ಟ್ರೀಯ ಲೋಕದಳ, ಕೇರಳ ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ದೆಹಲಿಯಿಂದ ಮರಳಿದ ಸಿದ್ದರಾಮಯ್ಯ
ಇಂದು ಮುಂಜಾನೆ 5:45ರ ವಿಮಾನದಲ್ಲಿ ನಿಯೋಜಿತ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಆಗಮಿಸಿದರು. ನಿನ್ನೆ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲು ತೆರಳಿದ್ದ ಸಿದ್ದು, ತಡರಾತ್ರಿ ದೆಹಲಿಯಿಂದ ಹೊರಟ ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರ ಜತೆಗೆ ಎಂ.ಬಿ ಪಾಟೀಲ್ ಮತ್ತು ಜಮೀರ್ ಅಹಮದ್ ಇದ್ದರು. ಅಲ್ಲಿಂದ ನೇರವಾಗಿ ಶಿವಾನಂದ ಸರ್ಕಲ್ ಬಳಿಯಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದರು.
ಇದನ್ನೂ ಓದಿ: Karnataka CM : ಇಂದು ಸಿಎಂ ಪದಗ್ರಹಣ; ರಸ್ತೆ ಸಂಚಾರ ಬದಲಾವಣೆಯ ಫುಲ್ ಡಿಟೇಲ್ಸ್ ಇಲ್ಲಿದೆ