ಬೆಂಗಳೂರು: ಮೇ 20ರಂದು ಕರ್ನಾಟಕ ಮುಖ್ಯಮಂತ್ರಿ (Karnataka CM) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ (siddaramaiah) ಅವರ ಹೆಸರೇ ಅಂತಿಮಗೊಂಡಿದ್ದು, ಡಿ.ಕೆ ಶಿವಕುಮಾರ್ (DK shivkumar) ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರ ರಾಜಕಾರಣದ ಕೆಲವು ದೊಡ್ಡ ನಾಯಕರು ಭಾಗವಹಿಸಲಿದ್ದಾರೆ. ಇದರ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಮಹತ್ವದ ಸಂದೇಶವನ್ನು ರವಾನಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಒಂದು ಒಪ್ಪಂದಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇದರ ಜತೆಗೆ ಪ್ರಮಾಣ ವಚನ ಸ್ವೀಕಾರಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರತಿಪಕ್ಷ ನಾಯಕರಿಗೆ ಆಹ್ವಾನ ಹೋಗಲಿದೆ. ಸಮಾರಂಭದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೆಲಂಗಾಣ ಸಿಎಂ ಟಿ.ಎಸ್. ಚಂದ್ರಶೇಖರ ರಾವ್, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಮಮತಾ ಹಾಗೂ ಸ್ಟಾಲಿನ್ ಇಬ್ಬರೂ ಕರ್ನಾಟಕದ ಸಿಎಂ ಆಗುವ ವಿಚಾರದಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇವರ ಜತೆಗೆ ಉತ್ತರಪ್ರದೇಶದ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಕೂಡ ಭಾಗವಹಿಸಲಿದ್ದಾರೆ.
ಈ ನಾಯಕರ ಒಟ್ಟು ಸೇರಿಸುವಿಕೆಯ ಮೂಲಕ, ಬಿಜೆಪಿಗೆ ಸಮರ್ಥ ಎದುರಾಳಿ ಸಂಘಟನೆಯೊಂದರ ಸೃಷ್ಟಿಯ ಬಗೆಗೆ ಸಂದೇಶ ನೀಡುವುದು ಕಾಂಗ್ರೆಸ್ ಗುರಿಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಈ ಪಕ್ಷಗಳು ಕೈ ಸೇರಿಸಿ ಸೆಣಸಲಿವೆ ಎನ್ನುವ ಸಂದೇಶ ರವಾನಿಸಿ ಬಿಜೆಪಿಗೆ ನಡುಕ ಹುಟ್ಟಿಸುವುದು ಕಾಂಗ್ರೆಸ್‌ನ ಗುರಿಯಾಗಿದೆ ಎಂದು ತರ್ಕಿಸಲಾಗಿದೆ.
ಈ ಹಿಂದೆಯೂ ಬಿಜೆಪಿ ವಿರುದ್ಧ ತೃತೀಯ ರಂಗವೊಂದನ್ನು ರಚಿಸುವ ಪ್ರಯತ್ನಗಳು ನಡೆದಿದ್ದು, ವಿಫಲವಾಗಿದ್ದವು. ಇದೀಗ ಕಾಂಗ್ರೆಸ್ ನೇತೃತ್ವದಲ್ಲಿ ಒಂದಾಗುವ ಬಗ್ಗೆ ಸ್ಟಾಲಿನ್, ಮಮತಾ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Karnataka CM: ಸಿದ್ದುಗೆ ಗದ್ದುಗೆ; 4 ಷರತ್ತು ವಿಧಿಸಿದ ಡಿ.ಕೆ ಶಿವಕುಮಾರ್, ಯಾವುದು ಆ ನಾಲ್ಕು?