ಬೆಂಗಳೂರು: ನೂತನ ಮುಖ್ಯಮಂತ್ರಿ (Karnataka CM) ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಯಾರೆಲ್ಲ ಇರಬೇಕು ಎಂಬುದರ ಬಗ್ಗೆ ಶುಕ್ರವಾರ ತಡರಾತ್ರಿಯವರೆಗೂ ಸುದೀರ್ಘ ಚರ್ಚೆ ನಡೆದರೂ ಬಗೆಹರಿಸಲಾಗಿಲ್ಲ. ಕೆಲವೇ ಹೆಸರುಗಳ ಬಗ್ಗೆ ಮಾತ್ರ ಒಮ್ಮತಕ್ಕೆ ಬರಲಾಗಿರುವುದರಿಂದ, ಇಂದು ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ ಶಿವಕುಮಾರ್ (DK Shivakumar) ಅವರ ಜತೆಗೆ 8 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಚಿವ ಸಂಪುಟ ರಚನೆಯ ಬಗ್ಗೆ ದಿಲ್ಲಿಯಲ್ಲಿ ತಡರಾತ್ರಿ 2.30ರ ವರೆಗೆ ಸಭೆ ನಡೆಸಿದರೂ ಸಹ ಒಮ್ಮತ ಮೂಡಲಿಲ್ಲ. ನಿನ್ನೆ ಸಂಜೆವರೆಗೂ, ಮೊದಲ ಸಂಪುಟದಲ್ಲಿ 28 ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ತಡರಾತ್ರಿ ಆದ ಬೆಳವಣಿಗೆಯೇ ಬೇರೆ. ರಾತ್ರಿ 2 ಗಂಟೆ ಆದರೂ ಡಿಕೆಶಿ ಮತ್ತೆ ಸಿದ್ದು ನಡುವೆ ಸಚಿವ ಸಂಪುಟದ ಬಗ್ಗೆ ಒಂದೇ ಅಭಿಪ್ರಾಯಕ್ಕೆ ಬರಲಾಗಲಿಲ್ಲ.
ಹೀಗಾಗಿ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಶಾಸಕರ ಸಂಖ್ಯೆ ಕೇವಲ 8 ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಒಟ್ಟು 10 ಮಂದಿ ಮಾತ್ರ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಹುಲ್ ಭೇಟಿ ಬಳಿಕ ತಡ ರಾತ್ರಿ ವರೆಗೆ ಕೆ.ಸಿ ವೇಣುಗೋಪಾಲ್ ಮನೆಯಲ್ಲಿ 3 ಗಂಟೆ ಕಾಲ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆ ಬಳಿಕ ಸಿದ್ದರಾಮಯ್ಯ ತೆರಳಿದ್ದು, ಡಿಕೆ ಮತ್ತೆ ಒಂದೂವರೆ ಗಂಟೆ ಕಾಲ ವೇಣುಗೋಪಾಲ್ ಜೊತೆ ಸಭೆ ನಡೆಸಿದ್ದರು. ಅದಾದ ಬಳಿಕ ಮತ್ತೆ ಸಿದ್ದರಾಮಯ್ಯರನ್ನು ಕೆಸಿವಿ ಮನೆಗೆ ಕರೆಸಿದ್ದು ಮತ್ತೊಂದು ಸುತ್ತಿನ ಸಭೆ ನಡೆಸಿದ್ದಾರೆ. ಸಭೆಯಲ್ಲಿ 28 ಸಚಿವರ ಪಟ್ಟಿ ಸಿದ್ಧಪಡಿಸಿದ್ದರೂ ಎಲ್ಲ ಹೆಸರುಗಳಿಗೆ ಡಿಕೆ ಹಾಗೂ ಸಿದ್ದು ಒಪ್ಪಿಲ್ಲ.
ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗಿದೆ. ಐದು ಸಮುದಾಯಕ್ಕೆ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ. ದಲಿತ ಸಮುದಾಯಕ್ಕೆ ಮೂರು ಸ್ಥಾನ, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು, ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ಕೊಡಲಾಗಿದೆ.
ಇವರೇ ಇಂದು ಸಚಿವರಾಗಲಿರುವವರು:
ಎಂ.ಬಿ ಪಾಟೀಲ್ (ಲಿಂಗಾಯತ)
ಡಾ. ಜಿ ಪರಮೇಶ್ವರ್ (ದಲಿತ ಬಲ)
ಪ್ರಿಯಾಂಕಾ ಖರ್ಗೆ (ದಲಿತ ಬಲ)
ಕೆ.ಎಚ್ ಮುನಿಯಪ್ಪ (ದಲಿತ ಎಡ)
ಕೆ.ಜೆ ಜಾರ್ಜ್ (ಕ್ರಿಶ್ಚಿಯನ್)
ಸತೀಶ್ ಜಾರಕಿಹೊಳಿ (ಎಸ್‌ಟಿ- ವಾಲ್ಮೀಕಿ)
ಜಮೀರ್ ಅಹಮದ್ ಖಾನ್ (ಮುಸ್ಲಿಂ)
ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
ಇದನ್ನೂ ಓದಿ: Karnataka CM : ನಿಯೋಜಿತ ಸಿಎಂ ಸಿದ್ದರಾಮಯ್ಯ ಬಳಸಲಿರುವ ಕಾರು ಯಾವುದು? ಇಲ್ಲಿದೆ ನೋಡಿ ವಿವರ