ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ (karnataka cm) ಪಟ್ಟದ ಕುರಿತು ಮೊನ್ನೆ ಹಾಗೂ ನಿನ್ನೆ ಕಗ್ಗಂಟಾಗಿದ್ದ ಬಿಕ್ಕಟ್ಟು ಇಂದು ಬಗೆಹರಿಯುವ ನಿರೀಕ್ಷೆ ಇದೆ. ನಿನ್ನೆ ಆರೋಗ್ಯದ ಕಾರಣ ನೀಡಿ ದಿಲ್ಲಿ ಪ್ರವಾಸದಿಂದ ಹಿಂದುಳಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ಇಂದು ದಿಲ್ಲಿಗೆ ಪ್ರಯಾಣಿಸಲಿದ್ದಾರೆ. ಇಂದು ಬೆಳಗ್ಗೆ 9.50ಕ್ಕೆ ಹೊರಡಲಿರುವ ವಿಮಾನದಲ್ಲಿ ಡಿಕೆಶಿ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ದಿಲ್ಲಿಯಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಅದರಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ನಿನ್ನೆ ಡಿಕೆಶಿ ದೆಹಲಿಗೆ ಭೇಟಿ ನೀಡದ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಗಿತ್ತು.
ರಾಜಧಾನಿಗೆ ಶಿಫ್ಟ್ ಆಗಿದೆ ಸಿಎಂ ಆಯ್ಕೆ ವಿಚಾರ
ಬೆಂಗಳೂರಿನಲ್ಲಿ ಬಗೆಹರಿಯದ ಕಾರಣ ರಾಜ್ಯದ ಸಿಎಂ ಆಯ್ಕೆ ಪ್ರಕ್ರಿಯೆ ರಾಷ್ಟ್ರ ರಾಜಧಾನಿಗೆ ಶಿಫ್ಟ್ ಆಗಿದೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಲು ಸಕಲ ಸಿದ್ಧತೆ ನಡೆಸಿದೆಯಾದರೂ, ಸಿಎಂ ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಿಎಂ ಗಾದಿಗೆ ಪೈಪೋಟಿ ಮುಂದುವರಿದಿದೆ. ಸಿದ್ದರಾಮಯ್ಯ ನಿನ್ನೆ ರಾತ್ರಿ ದೆಹಲಿ ತಲುಪಿದ್ದರೆ, ಇಂದು ಡಿಕೆಶಿ ದೆಹಲಿಗೆ ಬರಲಿದ್ದಾರೆ. ಡಿಕೆಶಿ ಬಂದ ಬಳಿಕ AICC ಅಧ್ಯಕ್ಷರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
ಸಚಿವ ಸ್ಥಾನಕ್ಕೆ ಲಾಬಿ
ಒಂದೆಡೆ ಸಿಎಂ ಯಾರು ಎಂಬ ಗೊಂದಲ ಕಾಂಗ್ರೆಸ್ ಹೈಕಮಾಂಡ್‌ನದ್ದಾದರೆ, ನಮಗೆ ಈ ಬಾರಿ ಸಚಿವ ಸ್ಥಾನ ಬೇಕು ಅಂತ ಲಾಬಿ ಮಾಡುತ್ತಿರುವವರು ಇನ್ನೊಂದು ಕಡೆ ಒತ್ತಡ ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕ ಬೆನ್ನಲ್ಲೇ ನನಗೆ ಸಚಿವ ಸ್ಥಾನ ನೀಡಿ ಎಂದು ಕೆಲ ಶಾಸಕರು ಖರ್ಗೆಯವರ ಬೆನ್ನು ಬಿದ್ದಿದ್ದಾರೆ. ಸಿಎಂ ಆಯ್ಕೆಗೂ ಮುನ್ನವೇ ದೆಹಲಿಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ.
ಈಗಾಗಲೇ ಹಲವರು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಪ್ರಕಾಶ್ ಹುಕ್ಕೇರಿ, ವಿಜಯಾನಂದ್ ಕಾಶಪ್ಪನವರ ಸೇರಿದಂತೆ ಹಲವು ಶಾಸಕರಿಂದ ಸಚಿವ ಸ್ಥಾನಕ್ಕಾಗಿ ಖರ್ಗೆ ಬಳಿ ಬೇಡಿಕೆ ಬಂದಿದೆ. ಜಾತಿವಾರು, ಪ್ರಾಂತ್ಯವಾರು ಆಧಾರದ ಮೇಲೆ ಸಚಿವ ಸ್ಥಾನ ಕೇಳುತ್ತಿದ್ದಾರೆ. ಸಿಎಂ ಆಯ್ಕೆ ಜತೆಗೇ ಸಚಿವ ಸ್ಥಾನದ ಕಗ್ಗಂಟನ್ನೂ ಕಾಂಗ್ರೆಸ್ ಹೈಕಮಾಂಡ್ ಎದುರಿಸುತ್ತಿದೆ.
ಇಂದು ನಿರ್ಧಾರ: ಸುರ್ಜೇವಾಲ
ಕರ್ನಾಟಕಕ್ಕೆ ತೆರಳಿದ ವೀಕ್ಷಕರು ತಮ್ಮ ವರದಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಈ ವರದಿ ಅಧ್ಯಕ್ಷರ ಬಳಿ ಇದೆ. ಅವರು ನಿರ್ಧಾರ ಮಾಡಲಿದ್ದಾರೆ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ಈ ವರದಿ 3 ಜನ ವೀಕ್ಷಕರನ್ನು ಹೊರತುಪಡಿಸಿದರೆ ಅಧ್ಯಕ್ಷರಿಗೆ ಮಾತ್ರ ಗೊತ್ತಿದೆ. ಅದರ ಬಗ್ಗೆ ನಮ್ಮ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ. ಇಂದು ರಾಜ್ಯ ನಾಯಕರೊಂದಿಗೆ ಸಭೆ ನಡೆಯದ ಹಿನ್ನೆಲೆಯಲ್ಲಿ ನಾಳೆ ಕರ್ನಾಟಕ ಹಾಗೂ ಹೈಕಮಾಂಡ್ ನಾಯಕರು ಒಳಗೊಂಡಂತೆ ಸಭೆ ನಡೆಯಲಿದೆ. ಸಭೆ ಬಳಿಕ ಸಿಎಂ ಯಾರು ಎಂದು ತೀರ್ಮಾನವಾಗಲಿದೆ ಎಂದಿದ್ದಾರೆ.
ರಾಜ್ಯದ ಜನರು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಯಾವುದೇ ಗೊಂದಲವಿಲ್ಲದೆ ನಾವು ಅಧಿಕಾರ ಮಾಡಲಿದ್ದೇವೆ. ನಾವು ನೀಡಿದ ಭರವಸೆಗಳನ್ನು ಈಡೇರಿಸಲಿದ್ದೇವೆ. ರಾಜ್ಯದ ಜನರಿಗೆ ಉತ್ತಮ ಆಡಳಿತ ಕೊಡುತ್ತೇವೆ. ಸಿಎಂ ಯಾರು ಎಂಬ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka CM: ಮಂಗಳವಾರ ದೆಹಲಿಗೆ ಹೋಗುವೆ, ಮೊದಲು ಸೋನಿಯಾ ಜತೆ ಚರ್ಚಿಸುವೆ; ಕೊನೆಗೂ ಡಿಕೆಶಿ ಸ್ಪಷ್ಟನೆ