ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನ ಅಭೂತಪೂರ್ವ ವಿಜಯದ ನಂತರ ಮುಖ್ಯಮಂತ್ರಿ (Karnataka CM) ಸ್ಥಾನಕ್ಕಾಗಿ ಆಕಾಂಕ್ಷಿಗಳಾದ ಸಿದ್ದರಾಮಯ್ಯ (Siddaramaih) ಹಾಗೂ ಡಿ.ಕೆ ಶಿವಕುಮಾರ್ (DK Shivakumar) ನಡುವೆ ಆಂತರಿಕ ಪೈಪೋಟಿ ನಡೆದಿದೆ. ಇಬ್ಬರ ನಡುವೆ ರಾಜಿಸೂತ್ರಕ್ಕಾಗಿ ಅವರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು, ಸಂಧಾನದ ಮಾತುಕತೆ ಇಂದು ದಿಲ್ಲಿಯಲ್ಲಿ ನಡೆಯಲಿದೆ.
ನಿನ್ನೆ ಸಿಎಂ ಯಾರಾಗಬಹುದು ಎಂಬ ಬಗ್ಗೆ ಎಐಸಿಸಿ ವೀಕ್ಷಕರು ಗೌಪ್ಯವಾಗಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಈ ಸಂದರ್ಭದಲ್ಲಿ ಉಭಯ ನಾಯಕರಿಗೂ ಶಾಸಕರಲ್ಲಿ ಸಮಾನ ಬಲ ಕಂಡುಬಂದಿದೆ ಎನ್ನಲಾಗಿದೆ. 65ಕ್ಕೂ ಅಧಿಕ ಮಂದಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಪರ ಮತ ಚಲಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ಬುಲಾವ್
ಹೀಗಾಗಿ ಇಬ್ಬರೂ ನಾಯಕರಿಗೆ ದಿಲ್ಲಿಗೆ ಬನ್ನಿ ಎಂದು ಹೈಕಮಾಂಡ್ ಕರೆ ಕಳುಹಿಸಿದೆ. ಹೀಗಾಗಿ ಇಂದು ಬೆಳಿಗ್ಗೆ ಇಬ್ಬರೂ ದಿಲ್ಲಿಗೆ ತೆರಳುತ್ತಿದ್ದಾರೆ. ಶಾಸಕರ ಅಭಿಪ್ರಾಯದಂತೆ ಕಾಂಗ್ರೆಸ್ ಹೈಕಮಾಂಡ್ ಸಿಎಂ ಆಯ್ಕೆ ಮಾಡಲಿದೆಯಾದರೂ, ಇಬ್ಬರನ್ನೂ ಕರೆಸಿಕೊಂಡು ಮಾತುಕತೆ ನಡೆಸಿ, ಬಳಿಕ ಹೆಸರು ಘೋಷಣೆ ಮಾಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಸಿಎಂ ಆದರೆ ಡಿಕೆಶಿಗೆ ಡಿಸಿಎಂ ಹಾಗೂ ಕೇಳಿದ ಖಾತೆ ಕೊಡುವ ಸಾಧ್ಯತೆ ಇದೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಮತ್ತು ಪವರ್ ಇಲಾಖೆ ಕೇಳಿದ್ದಾರೆ ಎನ್ನಲಾಗಿದೆ. ತನ್ನ ಆಪ್ತರಿಗೆ ಸಚಿವ ಸ್ಥಾನ ಕೊಡುವಂತೆ ಅವರು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಒಟ್ಟಾರೆ ನಿನ್ನೆ ರಾಜ್ಯದಲ್ಲಿ ನಡೆದ ಸಿಎಂ ಆಯ್ಕೆ ಕಸರತ್ತು ಇಂದು ದೆಹಲಿಗೆ ಶಿಫ್ಟ್ ಆಗಿದ್ದು, ಎಲ್ಲರ ಚಿತ್ತ ಹೈಕಮಾಂಡ್‌ನತ್ತ ನೆಟ್ಟಿದೆ.
ಇದೀಗ ಸಿದ್ದು- ಡಿಕೆಶಿ ಸಂಧಾನ ಸೂತ್ರ ಏನು ಎಂಬ ಕುತೂಹಲ ಮೂಡಿದೆ. 50-50 ಫಾರ್ಮುಲಾ ರಚನೆ ಮಾಡುವ ಸಾಧ್ಯತೆ ಇದೆ. ಮೊದಲರ್ಧ ಅವಧಿಗೆ ಸಿದ್ದರಾಮಯ್ಯ, ಉತ್ತರಾರ್ಧ ಡಿಕೆಶಿ ಅವರಿಗೆ ಸಿಗಬಹುದು. ಸಿದ್ದರಾಮಯ್ಯ, ಡಿಕೆಶಿ ಜತೆಗೆ ಅವರ ಬೆಂಬಲಿಗ ಶಾಸಕರು ಕೂಡ ದೆಹಲಿಗೆ ದೌಡಾಯಿಸಲಿದ್ದು, ಸಚಿವ ಸ್ಥಾನಗಳಿಗೆ ಲಾಬಿ ನಡೆಸಲಿದ್ದಾರೆ.
ಕಾಲಜ್ಞಾನ ಗುರೂಜಿ ಭವಿಷ್ಯ ಏನು?
ಇಂದು ಬೆಳಗಿನ ಜಾವ ಡಿಕೆಶಿ ನಿವಾಸಕ್ಕೆ ಕಾಲಜ್ಞಾನ ಗುರೂಜಿ ಭೇಟಿ ನೀಡಿದ್ದಾರೆ. ಬೆಳಗ್ಗಿನ ಜಾವ 4.15ಕ್ಕೆ ಡಿ.ಕೆ ಶಿವಕುಮಾರ್ ಅವರನ್ನು ಬೇಟಿಯಾದ ವಿಜಯ್‌ರಾಜ್ ಗುರೂಜಿ, ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟದ ಮುಹೂರ್ತಕ್ಕೆ ಕಾಲ ನಿಗದಿ ಮಾಡಿದ್ದಾರೆ ಎನ್ನಲಾಗಿದೆ. ಇವರು ಹಲವು ವರ್ಷಗಳಿಂದ ಶಿವಕುಮಾರ್‌ಗೆ ಭವಿಷ್ಯದ ಬಗ್ಗೆ ತಿಳಿಸುತ್ತಿದ್ದಾರೆ. ಡಿಕೆಶಿಗೆ ಗುರುವಾರ ಶುಭವಿದೆ. ಬುಧ ಆದಿತ್ಯ ಪಂಚಮಯೋಗವಿದೆ ಎಂದು ಗುರೂಜಿ ತಿಳಿಸಿದ್ದು, ಹಾರ ಹಾಕಿ ಆಶೀರ್ವಾದ ಮಾಡಿ ತೆರಳಿದ್ದಾರೆ.
ಸದಾಶಿವನಗರದಲ್ಲಿ ಡಿಕೆಶಿ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಹುಟ್ಟುಹಬ್ಬದ ಶುಭಾಶಯಗಳ ಬ್ಯಾನರ್, ಫ್ಲೆಕ್ಸ್ ಜೊತೆಗೆ ಬೃಹತ್ ಎಲ್‌ಇಡಿ ಪರದೆ ಆಳವಡಿಕೆ ಮಾಡಲಾಗಿತ್ತು. ಡಿಕೆ ಶಿವಕುಮಾರ್ ಮನೆಯ ರಸ್ತೆ ತುಂಬಾ ಅಭಿನಂದನೆಯ ಫ್ಲೆಕ್ಸ್ ಹಾಕಲಾಗಿದೆ.
ಇದನ್ನೂ ಓದಿ: Karnataka CM: ಸಿಎಂ ಆಯ್ಕೆ ಕಸರತ್ತಿನ ಮಧ್ಯೆಯೇ ಡಿಕೆಶಿ ಜನ್ಮದಿನ ಆಚರಣೆ; ಸಿದ್ದುಗೆ ಕೇಕ್ ತಿನ್ನಿಸಿದ ಕೆಪಿಸಿಸಿ ಅಧ್ಯಕ್ಷ