ಹೊಸ ದಿಲ್ಲಿ: ಕರ್ನಾಟಕದ ಮುಖ್ಯಮಂತ್ರಿ (Karnataka CM) ಯಾರಾಗಬೇಕೆಂಬ ಬಿಕ್ಕಟ್ಟು ಬುಧವಾರವೂ ಮುಂದುವರಿದಿದೆ. ಮಂಗಳವಾರ ಯಾವುದೇ ಇತ್ಯರ್ಥಕ್ಕೆ ಬರಲು ವಿಫಲವಾದ ಕಾಂಗ್ರೆಸ್ ಹೈಕಮಾಂಡ್, ಈ ವಿಷಯವನ್ನು ರಾಹುಲ್ ಗಾಂಧಿ (Rahul Gandhi) ಮುಂದೆ ಕೊಂಡೊಯ್ದಿದೆ.
ಮಂಗಳವಾರವಿಡೀ ದಿಲ್ಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸ ಕಾಂಗ್ರೆಸ್‌ನ ಚಟುವಟಿಕೆಗಳ ಕೇಂದ್ರವಾಗಿಬಿಟ್ಟಿತ್ತು. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪ್ರತ್ಯಪ್ರತ್ಯೇಕವಾಗಿ ಖರ್ಗೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ತಾವು ಹಿಡಿದ ಪಟ್ಟುಗಳನ್ನು ಸಡಿಲಿಸಲಿಲ್ಲ.
ʼʼಕೊಡುವುದಾದರೆ ತನಗೆ ಸಿಎಂ ಹುದ್ದೆ ಕೊಡಿ, ಇಲ್ಲವಾದರೆ ಶಾಸಕನಾಗಿಯೇ ಇರುತ್ತೇನೆʼʼ ಎಂದು ಡಿಕೆಶಿ ಹೇಳಿದ್ದಾರೆ. ಇದರಿಂದಾಗಿ ಅವರ ಹಿಂದಿರುವ ಶಾಸಕರು ಹಾಗೂ ಒಕ್ಕಲಿಗ ಸಮುದಾಯಕ್ಕೆ ಆಗಬಹುದಾದ ಬೇಸರವೂ ಹೈಕಮಾಂಡ್‌ಗೆ ಗೊತ್ತಿಲ್ಲದ್ದೇನಲ್ಲ. ಇನ್ನು ಸಿದ್ದರಾಮಯ್ಯ ಅವರು, ʼʼಐದು ವರ್ಷ ಉತ್ತಮ ಆಡಳಿತ ನೀಡಿದ್ದೇನೆ. ಇನ್ನಷ್ಟು ಕನಸುಗಳು, ಯೋಜನೆಗಳು ಇವೆ. ಅವನ್ನು ಜಾರಿಗೆ ತರಲು ಈ ಬಾರಿಯ ಸಿಎಂ ಗಿರಿ ಬೇಕುʼʼ ಎಂದಿದ್ದಾರೆ. ಇಬ್ಬರೂ ಸಿಎಂ ಗಾದಿಯನ್ನು ಅರ್ಧರ್ಧ ಹಂಚಿಕೊಳ್ಳಲು ಸಿದ್ಧರಾಗಿಲ್ಲ.
ಕರ್ನಾಟಕದ ಪಾಲಿಗೆ ಈಗ ಹೈಕಮಾಂಡ್ ಎಂದರೆ ಖರ್ಗೆ. ಎಐಸಿಸಿ ಅಧ್ಯಕ್ಷರು ಕರ್ನಾಟಕದವರೇ ಅಗಿರುವುದರಿಂದ, ನಿಷ್ಠುರವಾದ ನಿರ್ಧಾರ ತೆಗೆದುಕೊಳ್ಳುವುದು ಅವರಿಗೂ ಕಷ್ಟವಾಗಿದೆ. ಸಿದ್ದು- ಡಿಕೆಶಿ ಜತೆಗೆ ಕರ್ನಾಟಕದ ಇತರ ನಾಯಕರನ್ನೂ ಅವರು ಎದುರಿಸಬೇಕಾಗಿದೆ. ಯಾವುದೇ ಒಬ್ಬ ನಾಯಕನನ್ನು ಎದುರು ಹಾಕಿಕೊಳ್ಳುವುದರಿಂದ ರಾಜ್ಯದಲ್ಲಿ ತುಸು ಹಿನ್ನಡೆ ಅನುಭವಿಸಬೇಕಾಗಬಹುದು ಎಂಬ ಆತಂಕದಿಂದಾಗಿ ಖರ್ಗೆ ಅವರು ಈ ಬಿಕ್ಕಟ್ಟನ್ನು ತಾವೇ ಇತ್ಯರ್ಥ ಮಾಡುವ ನಿರ್ಧಾರ ಕೈಬಿಟ್ಟು, ರಾಹುಲ್ ಗಾಂಧಿ ಅವರ ಮುಂದೆ ಕೊಂಡೊಯ್ದಿರುವುದಾಗಿ ತಿಳಿದುಬಂದಿದೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಒಂದಾಗಿದ್ದರು. ಒಂದಾಗಿ ಹೆಜ್ಜೆ ಹಾಕಿ, ಪಕ್ಷದ ಸಂಘಟನೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿ ಇಬ್ಬರನ್ನೂ ಒಂದು ಮಾಡಿದ ಖ್ಯಾತಿಯನ್ನು ರಾಹುಲ್ ಹೊಂದಿದ್ದಾರೆ. ಈ ಪವರ್ ಸ್ಟ್ರಗಲ್‌ಗೆ ಕೂಡ ಅವರು ಒಂದು ಪರಿಹಾರದ ಹಾದಿ ತೋರಿಸಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ನ ಹೆಚ್ಚಿನ ನಾಯಕರು ಇದ್ದಾರೆ.
ಬುಧವಾರ ಈ ಬಿಕ್ಕಟ್ಟಿಗೆ ಪರಿಹಾರ ದೊರೆತು ನೂತನ ಸಿಎಂ ಘೋಷಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನವರು ಇದ್ದಾರೆ.
ಇದನ್ನೂ ಓದಿ: Karnataka Election Results: ಪ್ರಾಬಲ್ಯದ ವಿರುದ್ಧ ಜನಶಕ್ತಿ ಗೆದ್ದಿದೆ; ಫಲಿತಾಂಶದ ಬಳಿಕ ರಾಹುಲ್ ಗಾಂಧಿ ಹೇಳಿದ್ದಿಷ್ಟು