ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka CM) ಸಿದ್ದರಾಮಯ್ಯ (Siddaramaiah) ಅವರು ನಿಯೋಜಿತರಾಗಿದ್ದಾರೆ. ಅವರೂ ಸೇರಿದಂತೆ ಬೇರೆ ಬೇರೆ ನಾಯಕರು ಸಿಎಂ ಆಗಲಿ ಎಂದು ಹಾರೈಸಿ ಅವರವರ ಅಭಿಮಾನಿಗಳು ತಮಗೆ ತೋಚಿದ ರೀತಿಯಲ್ಲಿ ಹರಕೆಗಳನ್ನು ಹೊತ್ತುಕೊಂಡಿದ್ದಾರೆ, ಕೆಲವರು ಸಂಭ್ರಮಾಚರಣೆ ಮಾಡಿದ್ದಾರೆ.
ದಾವಣಗೆರೆಯ ಭರತ್ ಎಂಬ ಯುವಕ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹರಕೆ ಹೊತ್ತು ಅಲ್ಲಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಿದ್ದಾನೆ. ದಾವಣಗೆರೆಯಿಂದ ಪಾದಯಾತ್ರೆ ಮೂಲಕ ಹೊರಟ ಭರತ್ ಬೆಂಗಳೂರಿನ ಸಿದ್ದರಾಮಯ್ಯ ನಿವಾಸ ತಲುಪಿದ್ದಾನೆ.
ಕಳೆದ ಸೋಮವಾರದಂದು ದಾವಣಗೆರೆಯಿಂದ ಪಾದಯಾತ್ರೆ ಆರಂಭಿಸಿದ್ದ ಭರತ್ ಒಟ್ಟು 280 ಕಿ.ಮೀ ಕ್ರಮಿಸಿ ಬೆಂಗಳೂರು ತಲುಪಿದ್ದಾನೆ.
ಕೋಲಾರಮ್ಮನಿಗೆ ಹರಕೆ ಹೊತ್ತಿದ್ದ ಅಭಿಮಾನಿಗಳು
ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹರಕೆಯನ್ನು ತೀರಿಸಿದರು. ಈ ಹಿಂದೆ ಸಿದ್ದರಾಮಯ್ಯನವರು ಕೋಲಾರಕ್ಕೆ ಬಂದಾಗಲೇ ಅಭಿಮಾನಿಗಳು ಅವರು ಸಿಎಂ ಆಗಬೇಕೆಂದು ಹರಕೆಯನ್ನು ಕಟ್ಟಿದ್ದರು. ಹೀಗಾಗಿ ಕೋಲಾರದ ಗ್ರಾಮ ದೇವತೆ ಶ್ರೀ ಕೋಲಾರಮ್ಮನ ದೇವಾಲಯದಲ್ಲಿ 108 ತೆಂಗಿನಕಾಯಿ ಒಡೆದು ಹರಕೆಯನ್ನು ತೀರಿಸಿದರು. ಸಿದ್ದರಾಮಯ್ಯನವರು ಸಿಎಂ ಆಗುತ್ತಿರುವುದು ನಮಗೆ ಸಂತೋಷ ತಂದಿದೆ. ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮಂತ್ರಿ ಸ್ಥಾನ ನೀಡಿ ಉಸ್ತುವಾರಿ ವಹಿಸಲು ಒತ್ತಾಯಿಸಿದರು.
ಮನೆಯ ಸುತ್ತ ಅಭಿಮಾನಿಗಳ ದಂಡು
ಸಿದ್ದರಾಮಯ್ಯ ಅವರ ಬೆಂಗಳೂರಿನ ಅಧಿಕೃತ ಸರ್ಕಾರಿ ನಿವಾಸದ ಮುಂದೆ ಭಾರಿ ಸಂಖ್ಯೆಯ ಅಭಿಮಾನಿಗಳ ದಂಡೇ ನಿಂತಿದೆ. ಗುರುವಾರದಿಂದಲೇ ಅಭಿಮಾನಿಗಳು ಸಿದ್ದರಾಮಯ್ಯ ಅವರ ಮನೆ ಮುಂದೆ ಜಮಾಯಿಸಿದ್ದು, ಕಟೌಟ್‌ಗಳನ್ನು ಹಾಕಿದ್ದರು. ಸಿದ್ದರಾಮಯ್ಯ ಅವರ ಜತೆಗೆ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಕಟೌಟ್‌ಗಳನ್ನು ಕೂಡಾ ಹಾಕಿದ್ದಾರೆ.
ಗುರುವಾರ ರಾತ್ರಿ 12 ಗಂಟೆಯ ಹೊತ್ತಿಗೆ ಸಿದ್ದರಾಮಯ್ಯ ಅವರು ಮನೆಯಿಂದ ಹೊರಬಂದು ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ಮನೆಗೆ ಹೋಗುವಂತೆ ಮನವಿ ಮಾಡಿದರು. ಆದರೆ ಬಳಿಕವೂ ಅಭಿಮಾನಿಗಳ ದಂಡು ಕರಗಲಿಲ್ಲ. ಬೆಳಗ್ಗಿನ ಜಾವವೂ ಸಾಕಷ್ಟು ಸಂಖ್ಯೆಯಲ್ಲಿ ಜನರ ಆಗಮನವಾಗಿದೆ.
ಒಂದು ಕಡೆ ಅಭಿಮಾನಿಗಳು, ಇನ್ನೊಂದು ಕಡೆ ಶಾಸಕರು ಹೀಗೆ ಸಿದ್ದರಾಮಯ್ಯ ಮನೆಯ ಆವರಣದಲ್ಲಿ ಸದಾ ಗೌಜು ಗದ್ದಲವೇ ತುಂಬಿ ಹೋಗಿದೆ.
ಕಂಠೀರವ ಸ್ಟೇಡಿಯಂ ಸುತ್ತಮುತ್ತ ಫ್ಲೆಕ್ಸ್ ಗಳ ಭರಾಟೆ
ಶನಿವಾರ ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿರುವ ಕಂಠೀರವ ಸ್ಟೇಡಿಯಂ ಸುತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗೆ ಶುಭಾಶಯ ಕೋರಿ ಎಲ್ಲ ಕಡೆಗಳಲ್ಲಿ ಫ್ಲೆಕ್ಸ್ ಗಳ ಅಳವಡಿಕೆ ಮಾಡಲಾಲಾಗಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಸಿಎಂ; ಅಭಿಮಾನಿಗಳಲ್ಲಿ ಸಂಭ್ರಮ, ಉಡುಗೊರೆಗೆ ಸಿದ್ಧವಾಗಿದೆ ಜೋಡಿ ಟಗರು