ಬೆಂಗಳೂರು: ಚುನಾವಣೆ ಸಮಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಸಿದ್ಧವಾದ ಸಿದ್ದರಾಮಯ್ಯ ಇದೀಗ ಮುಖ್ಯಮಂತ್ರಿ ಆದ ನಂತರ ಮೊದಲ ಸುದ್ದಿಗೋಷ್ಠಿಯಲ್ಲೂ ಅದನ್ನು ಮುಂದುವರಿಸಿದ್ದಾರೆ.
ಕಂಠೀರವ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ಮೊದಲ ಸಂಪುಟ ಸಭೆ ನಡೆಸಿ ಮೊದಲ ಸುದ್ದಿಗೋಷ್ಠಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಜತೆಗೆ ನಡೆಸಿದರು. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳು ಹೇಳುತ್ತಿದ್ದು, ಅದು ಎಷ್ಟು ಸುಳ್ಳು ಎಂದು ಹೇಳಲು ಸುದೀರ್ಘ ಪೀಠಿಕೆ ಹಾಕಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ನಾವು ಹೊಸ ತೆರಿಗೆ ಹಾಕಲಾಗದು. ಪೆಟ್ರೋಲ್, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕದಂತಹ ತೆರಿಗೆಗಳು ಮಾತ್ರ ನಮ್ಮ ನಿಯಂತ್ರಣದಲ್ಲಿವೆ. ಕೇಂದ್ರದಿಂದ 15ನೇ ಹಣಕಾಸು ಆಯೋಗದ ಮೂಲಕ ಈ ವರ್ಷವೇ 50 ಸಾವಿರ ಕೋಟಿ ರೂ. ಬರುತ್ತದೆ. ನಿಜವಾಗಿಯೂ ನಮಗೆ 1 ಲಕ್ಷ ಕೋಟಿ ರೂ. ಬರಬೇಕಿತ್ತು, ಆದರೆ ಅನ್ಯಾಯವಾದ್ಧರಿಂದ ಇಷ್ಟು ಬರುತ್ತಿದೆ. ಆ ಸಮಯದಲ್ಲಿ ಇಲ್ಲಿದ್ದಂತಹ ಬೇಜವಾಬ್ದಾರಿ ಸರ್ಕಾರ ಹಣಕಾಸು ಆಯೋಗದ ಮುಂದೆ ಸರಿಯಾಗಿ ವಾದ ಮಂಡಿಸದೆ ಅನ್ಯಾಯ ಆಯಿತು.
ನಾವು ಸುಮಾರು 4 ಲಕ್ಷ ಕೋಟಿ ರೂ. ಕರ್ನಾಟಕದಿಂದ ಕಟ್ಟುತ್ತೇವೆ. ಸರ್‌ಚಾರ್ಜ್ ಪಾಲು ನಮಗೆ ಬರುವುದೇ ಇಲ್ಲ, ಅವರೇ ಇಟ್ಟುಕೊಳ್ಳುತ್ತಾರೆ. 15ನೇ ಹಣಕಾಸು ಆಯೋಗದ ವರದಿಯ ಪ್ರಕಾರ, 5,495 ಕೋಟಿ ರೂ. ವಿಶೇಷ ಸಹಾಯಧನ ನೀಡಬೇಕು ಎಂದು ತಿಳಿಸಿದೆ. ಮಧ್ಯಂತರ ಆದೇಶದಲ್ಲಿ ಇದು ಇತ್ತಾದರೂ ಆ ಯಮ್ಮ ನಿರ್ಮಲಾ ಸೀತಾರಾಮನ್ ಅಂತಿಮ ವರದಿಯಲ್ಲಿ ತೆಗೆಸಿಹಾಕಿದರು ಎಂದು ವಾಗ್ದಾಳಿ ನಡೆಸಿದರು.
ಈ ಹಣವನ್ನು ಕೊಡದೇ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಇದರಿಂದ ಕರ್ನಾಟಕ ಭಾರೀ ನಷ್ಟ ಅನುಭವಿಸಿದೆ. ಇಲ್ಲಿದ್ದ ಸರ್ಕಾರವೂ ಕೇಳಲಿಲ್ಲ, 25 ಸಂಸದರೂ ಕೇಳಲಿಲ್ಲ, ಪ್ರಲ್ಹಾದ ಜೋಶಿಯವರೂ ಕೇಳಲಿಲ್ಲ, ಸ್ವತಃ ಜಿಎಸ್‌ಟಿ ಮಂಡಳಿ ಸದಸ್ಯರಾದ ಬಸವರಾಜ ಬೊಮ್ಮಾಯಿ ಅವರೂ ಕೇಳಲಿಲ್ಲ. ಕೇಂದ್ರ ಸರ್ಕಾರ ಹಣ ನೀಡುತ್ತಿದೆ ಎಂದು ಬಿಜೆಪಿ ಹೇಳುತ್ತದೆ. ಆದರೆ ಅದು ಸುಳ್ಳು. ಅದು ನಮ್ಮ ತೆರಿಗೆ ಹಣವನ್ನೇ ವಾಪಸ್ ಕೊಡುವುದು ಅಷ್ಟೆ.
ಮನಮೋಹನ್ ಸಿಂಗ್ ಕೇಂದ್ರ ಸರ್ಕಾರ ಬಿಟ್ಟಾಗ ಇದ್ದ ಸಾಲ 53,11,000 ಕೋಟಿ ರೂ. ಈಗ 155 ಲಕ್ಷ ಕೋಟಿ ರೂ. ಸಾಲ ಇದೆ. ಕೇವಲ 9 ವರ್ಷದಲ್ಲಿ ನರೇಂದ್ರ ಮೋದಿಯವರು 102 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕರ್ನಾಟಕದಲ್ಲಿ 2018ರ ಮಾರ್ಚ್‌ನಲ್ಲಿ 2.42 ಲಕ್ಷ ಕೋಟಿ ರೂ. ಸಾಲ ಇತ್ತು. ಈಗ 5.43 ಲಕ್ಷ ಕೋಟಿ ರೂ. ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2024ರ ಲೋಕಸಭೆ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ, ಗ್ಯಾರಂಟಿ ಅನುಷ್ಠಾನದ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕಾದ ಅನಿವಾರ್ಯತೆಯೂ ಸಿದ್ದರಾಮಯ್ಯ ಅವರಿಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಸುದ್ದಿಗೋಷ್ಠಿಯಿಂದಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನುದಾನಗಳ ಹಂಚಿಕೆ ಸೇರಿ ವಿವಿಧ ವಿಚಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಸಂಘರ್ಷ ಶತಃಸಿದ್ಧ ಎಂಬ ಮುನ್ಸೂಚನೆಯನ್ನು ಸಿದ್ದರಾಮಯ್ಯ ಈ ಮೂಲಕ ನೀಡಿದ್ದಾರೆ.
ಇದನ್ನೂ ಓದಿ: PM Modi : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆಶಿ ಅಭಿನಂದಿಸಿದ ಪ್ರಧಾನಿ ಮೋದಿ