ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಇದುವರೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿಯೇ ಬೀಡುಬಿಟ್ಟಿದ್ದ ರಾಜಕೀಯ ಪಕ್ಷಗಳ ನಾಯಕರು ಈಗ ಉತ್ತರ ಕರ್ನಾಟಕದ ಕಡೆ ತೆರಳುತ್ತಿದ್ದಾರೆ. ಇನ್ನು, ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ದಿಸೆಯಲ್ಲಿ ಕಾಂಗ್ರೆಸ್ ಅಲರ್ಟ್ ಆಗಿದ್ದು, ಹೆಚ್ಚುವರಿಯಾಗಿ 13 ಕ್ಷೇತ್ರಗಳಿಗೆ ಸಚಿವರಿಗೆ ಜವಾಬ್ದಾರಿ ನೀಡಿದೆ. ಬಿಜೆಪಿ ನಾಯಕರು ಕೂಡ ಉತ್ತರ ಕರ್ನಾಟಕದಲ್ಲೇ ಮೊಕ್ಕಾ ಹೂಡಿದ್ದಾರೆ.
13 ಸಚಿವರಿಗೆ ಕಾಂಗ್ರೆಸ್ ಟಾಸ್ಕ್
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಪಣ ತೊಟ್ಟಿರುವ ರಾಜ್ಯ ಕಾಂಗ್ರೆಸ್, 13 ಸಚಿವರಿಗೆ 13 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಜವಾಬ್ದಾರಿ ನೀಡಿದೆ. ಹೆಚ್ಚುವರಿ ಉಸ್ತುವಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ನಾಯಕರನ್ನು ಸದ್ಬಳಕೆ ಮಾಡಿಕೊಂಡು ಬಿಜೆಪಿಗೆ ತಿರುಗೇಟು ನೀಡುವುದು ಕಾಂಗ್ರೆಸ್ ತಂತ್ರವಾಗಿದೆ.
ಕ್ಷೇತ್ರವಾರು ಜವಾಬ್ದಾರಿ ಹಂಚಿಕೆ ಹೀಗಿದೆ
ದಾವಣಗೆರೆ | ಡಾ.ಜಿ. ಪರಮೇಶ್ವರ್ |
ಧಾರವಾಡ | ದಿನೇಶ್ ಗುಂಡೂರಾವ್ |
ಕೆ.ಜೆ. ಜಾರ್ಜ್ | ಉತ್ತರ ಕನ್ನಡ |
ಚಿಕ್ಕೋಡಿ | ಕೆ.ಎಚ್.ಮುನಿಯಪ್ಪ |
ಹಾವೇರಿ | ಕೃಷ್ಣ ಭೈರೇಗೌಡ |
ಬಳ್ಳಾರಿ | ರಾಮಲಿಂಗಾರೆಡ್ಡಿ |
ಬೆಳಗಾವಿ | ಬೈರತಿ ಸುರೇಶ್ |
ಕೊಪ್ಪಳ | ಎಂ.ಸಿ. ಸುಧಾಕರ್ |
ರಾಯಚೂರು | ಕೆ.ಎನ್.ರಾಜಣ್ಣ |
ಬೀದರ್ | ಕೆ. ವೆಂಕಟೇಶ್ |
ಶಿವಮೊಗ್ಗ | ಎನ್. ಚೆಲುವರಾಯಸ್ವಾಮಿ |
ವಿಜಯಪುರ | ಎಚ್.ಸಿ.ಮಹಾದೇವಪ್ಪ |
ಬಾಗಲಕೋಟೆ | ಡಿ. ಸುಧಾಕರ್ |
ಕಲಬುರಗಿಗೆ ತೆರಳಿದ ಸಿದ್ದರಾಮಯ್ಯ
ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ತೆರಳಿದ್ದಾರೆ. ಸದ್ಯ, ಕಲಬುರಗಿಯಲ್ಲಿರುವ ಸಿದ್ದರಾಮಯ್ಯ ಬಳಿಕ ಇಂದೇ ತೇರದಾಳ, ರಬಕವಿ ಬನಹಟ್ಟಿಗೆ ತೆರಳಿ ಪ್ರಚಾರ ನಡೆಸಲಿದ್ದಾರೆ. ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್ ಅವರ ಪರ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ ಅವರು ಪ್ರಮುಖ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆಯಿಂದ ಮೋದಿ ಮೇನಿಯಾ
ಉತ್ತರ ಕರ್ನಾಟಕ, ಉತ್ತರ ಕನ್ನಡ ಸೇರಿ ಹಲವೆಡೆ ನರೇಂದ್ರ ಮೋದಿ ಅವರು ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಏಪ್ರಿಲ್ 28 ರಂದು ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ. ಆದರೆ, ಏಪ್ರಿಲ್ 29ರಂದು ಒಂದೇ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮತಯಾಚನೆ ಮಾಡಲಿದ್ದಾರೆ. ಅಲ್ಲಿ ಮಧ್ಯಾಹ್ನ 1 ರಿಂದ 1.50ರ ವರೆಗೂ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಅಲ್ಲಿಂದ ದಾವಣಗೆರೆ ಜಿಲ್ಲೆಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿ, ಮಧ್ಯಾಹ್ನ 3 ರಿಂದ 3.50 ವರೆಗೂ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಬಳ್ಳಾರಿ ಜಿಲ್ಲೆಗೆ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ. ಅಲ್ಲಿನ ಪುನೀತ್ ರಾಜ್‍ಕುಮಾರ್ ಆಟದ ಮೈದಾನದಲ್ಲಿ ಸಂಜೆ 5ರಿಂದ 5.50ರ ವರೆಗೂ ಮೋದಿ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
ಏಪ್ರಿಲ್ 28ರಂದು ರಾತ್ರಿ ಬಳ್ಳಾರಿಯ ಹೊಸಪೇಟೆಯಲ್ಲೇ ನರೇಂದ್ರ ಮೋದಿ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಏಪ್ರಿಲ್ 29ರಂದು ಬಳ್ಳಾರಿಯಿಂದ ಬಾಗಲಕೋಟೆಗೆ ಪ್ರವಾಸ ಮಾಡಲಿರುವ ಮೋದಿ, ಬಾಗಲಕೋಟೆಯಲ್ಲಿ ಮಧ್ಯಾಹ್ನ 12 ರಿಂದ, 12.55 ರವರೆಗೂ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬಾಗಲಕೋಟೆಯಿಂದ ಮಹಾರಾಷ್ಟ್ರಕ್ಕೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: Randeep Surjewala: ಕನ್ನಡಿಗರ ತೆರಿಗೆ ಹಣದಲ್ಲಿ ಸುರ್ಜೇವಾಲಾ ಟ್ರಿಪ್; ಕೆರಳಿ ಕೆಂಡವಾದ ಬಿಜೆಪಿ!