ಬೆಂಗಳೂರು: ಈಗಾಗಲೆ ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟಿರುವ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ರಾಮದಾಸ್‌ಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ನಮ್ಮ ಸಿದ್ಧಾಂತವನ್ನು ಒಪ್ಪಿ ಯಾರಾದರೂ ಬರುವುದಾದರೆ ಸ್ವಾಗತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮದಾಸ್ ಅವರ ಬದಲಿಗೆ ಶ್ರೀನಾಥ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಮದಾಸ್, ಮಂಗಳವಾರ ಸಂಜೆ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ನಡೆಯುತ್ತಿರುವುದನ್ನು ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ನಾಯಕರು ಹಾಗೂ ಸ್ನೇಹಿತರು, ನಮ್ಮ ಜತೆಗೆ ವಹಿವಾಟು ಇಟ್ಟುಕೊಂಡವರಿಗೆ ಬೆದರಿಸುತ್ತಿದ್ದಾರೆ. ನೀವು ಕಾಂಗ್ರೆಸ್‌ಗೆ ಸಹಾಯ ಮಾಡಬಾರದು ಎಂದು ಬಿಜೆಪಿ ನಾಯಕರು ಹಾಗೂ ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಎಲ್ಲ ಉದ್ಯಮಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಉದ್ಯಮಿಗಳು ನಮ್ಮ ಕರೆ ಸ್ವೀಕರಿಸಲೂ ಭಯಪಡುತ್ತಿದ್ದಾರೆ. ನಮಗೆ ಜನರು ಹಾಗೂ, ನಾವು ಘೋಷಿಸಿರುವ ಕಾರ್ಯಕ್ರಮಗಳ ಮೇಲೆ ನಂಬಿಕೆಯಿದೆ. ಬಿಜೆಪಿಯಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ. ಆದರೆ ಬಿಜೆಪಿಯವರನ್ನು ಅಧಿಕಾರಿಗಳು ಮುಟ್ಟುತ್ತಿಲ್ಲ. ಇಷ್ಟೆಲ್ಲ ನಂತರವೂ ನಮಗೆ ಯಾವುದೇ ರೀತಿ ತೊಂದರೆ ಇಲ್ಲ. ಜನರ ಬೆಂಬಲದಿಂದ ಎಲೆಕ್ಷನ್ ಮಾಡ್ತೇವೆ ಎಂದರು.
ಮಂಡ್ಯದಲ್ಲಿ ಯಾರು ಅಭ್ಯರ್ಥಿ ಎಂದು ಗೊತ್ತಿದೆ ಎಂದ ಶಿವಕುಮಾರ್, ಇಲ್ಲಿವರೆಗೆ 141 ಸ್ಥಾನ ಗೆಲ್ಲುವುದಿತ್ತು. ಇದೀಗ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಂದ ಮೇಲೆ 150ಕ್ಕೆ ಏರಿಕೆ ಆಗಿದೆ. ಅವರಿಂದ ರಾಜ್ಯದಲ್ಲಿ ಶೇ.2-3 ವೀರಶೈವರ ಮತಗಳು ಕಾಂಗ್ರೆಸ್‌ಗೆ ಬರುತ್ತವೆ.
ಚಾಮರಾಜನಗರದಿಂದ ಬೀದರವರಿಗೂ ಇವರಿಬ್ಬರ ಅಭಿಮಾನಿಗಳು ಕಾಂಗ್ರೆಸ್ ಶಿಫ್ಟ್ ಆಗುತ್ತಿದ್ದಾರೆ. ನಾನು ಬಿಜೆಪಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ ಕೊಡುತ್ತಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ಭ್ರಷ್ಟಾಚಾರವನ್ನು ಹೊಡೆದು ಓಡಿಸುವ ದಿನ ಬರ್ತಾ ಇದೆ. ಎಲ್ಲ ಕಾರ್ಯಕರ್ತರೂ ಕಾರ್ಯಕರ್ತರು ಕಾಂಗ್ರೆಸ್‌ಗೆ ಬರಲಿ. ಸ್ಥಳೀಯವಾಗಿ ಕಾಂಗ್ರೆಸ್ ಸೇರ್ಪಡೆ ಆಗಿ ಎಂದರು.
ಇದನ್ನೂ ಓದಿ: Karnataka Elections 2023 : ಬಂಡಾಯದ ಬಾವುಟ ಹಾರಿಸುತ್ತಾರಾ ಬಿಜೆಪಿ ಶಾಸಕ ರಾಮದಾಸ್?; ಸಂಜೆ 5 ಗಂಟೆಗೆ ತೀರ್ಮಾನ