ಬೆಂಗಳೂರು: ರಾಜ್ಯಾದ್ಯಂತ ಮೊದಲ ಎರಡು ಗಂಟೆಯಲ್ಲಿ ಶೇಕಡಾ 8.26 ಮತದಾನ ಆಗಿದೆ. ʼಫಸ್ಟ್ ಅವರ್ ಗುಡ್ ಸ್ಟಾರ್ಟ್ʼ ಎಂದಿದ್ದಾರೆ ಚುನಾವಣಾಧಿಕಾರಿಗಳು. ರಾಜ್ಯಾದ್ಯಂತ ಮತದಾನದ (Karnataka Election 2023) ಅಂಕಿಅಂಶ ಪಡೆದ ಮುಖ್ಯ ಚುನಾವಣಾ ಅಧಿಕಾರಿ, ʼಇದು ಉತ್ತಮ ಮತದಾನದ ದಾಖಲೆʼ ಎಂದಿದ್ದಾರೆ.
ಮೊದಲ ಎರಡು ಗಂಟೆಯಲ್ಲಿ ಮತದಾನದ ಪ್ರಮಾಣ ಶೇಕಡಾ 8 ದಾಟಿದ್ದು, ಇನ್ನಷ್ಟು ಚುರುಕಾಗುತ್ತಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಟ್ವೀಟ್ ಮಾಡಿದೆ. ಸುಮಾರು 12 ಗಂಟೆಯ ಒಳಗೆ ಶೇ.30ರಷ್ಟು ವೋಟಿಂಗ್ ನಿರೀಕ್ಷಿಸಲಾಗಿದೆ. ಈ ಹಿಂದಿನ ಚುನಾವಣೆಗಳಿಗಿಂತ ಇದು ಉತ್ತಮ ಪ್ರಮಾಣವಾಗಿದೆ.
ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಇಟ್ಟುಕೊಂಡಿರಲಾಗುತ್ತಿದ್ದ ಮತದಾನ ದಿನವನ್ನು ಈ ಬಾರಿ ವಾರದ ಮಧ್ಯದಲ್ಲಿ ಇಟ್ಟುಕೊಳ್ಳಲಾಗಿದೆ. ಮೊದಲ ಬಾರಿಗೆ ಮತದಾನ ಕೇಂದ್ರಕ್ಕೆ ಬರಲು ಆಗದ 80 ವರ್ಷಕ್ಕೂ ಮೇಲ್ಪಟ್ಟವರು, ಗಂಭೀರ ಅನಾರೋಗ್ಯ ಬಾಧಿತರು ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಜತೆಗೆ ಮತದಾನ ಕೇಂದ್ರದಲ್ಲೂ ಇವರಿಗೆ ವಿಶೇಷ ಸೌಲಭ್ಯ ಮಾಡಲಾಗಿದೆ.
ಯುವ ಮತದಾರರಿಗೆ, ಮೊದಲ ಬಾರಿಗೆ ಮತ ಹಾಕುತ್ತಿರುವವರಿಗೆ ಉತ್ತೇಜನ ನೀಡಲು ಹಲವಾರು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು, ಬೆಳಗ್ಗಿನಿಂದಲೇ ಮತಗಟ್ಟೆಗಳಲ್ಲಿ ಜಮಾಯಿಸಿ ಮತ ಹಾಕಿದ್ದು ಕಂಡುಬಂದಿದೆ. ಬುಡಕಟ್ಟು ಸಮುದಾಯದವರ ಮತದಾನಕ್ಕೆ 40 ವಿಶೇಷ ಮತಗಟ್ಟೆ ಮಾಡಲಾಗಿದೆ. ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: Karnataka Election 2023: ರಾಜ್ಯದ 16ನೇ ವಿಧಾನಸಭೆ ಚುನಾವಣೆ ಮತದಾನ ಆರಂಭ; ಎಷ್ಟು ಮತದಾರರು, ಪಕ್ಷಗಳ ಬಲಾಬಲ ಇಲ್ಲಿ ನೋಡಿ