ಬೆಂಗಳೂರು: ಬಿಜೆಪಿ ಪರ ಪ್ರಚಾರದ ಕಣಕ್ಕೆ ಇಂದು ನಟ ಕಿಚ್ಚ ಸುದೀಪ್ (Kiccha Sudeep) ಧುಮುಕಲಿದ್ದಾರೆ. ಮೊಳಕಾಲ್ಮೂರು, ಜಗಳೂರು, ಬಳ್ಳಾರಿ ಮುಂತಾದ ಕಡೆ ರೋಡ್ ಶೋ, ಪ್ರಚಾರ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ. (Karnataka Election 2023)
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಪರ ಪ್ರಚಾರ ಮಾಡುವುದಾಗಿ ಹೇಳಿದ್ದ ಸುದೀಪ್, ತಮ್ಮ ಪ್ರಚಾರವನ್ನು ಇತರ ಬಿಜೆಪಿ ಅಭ್ಯರ್ಥಿಗಳಿಗೂ ವಿಸ್ತರಿಸಿದ್ದಾರೆ. ಮದಕರಿ ನಾಯಕನ ಕೋಟೆಯಾದ ಚಿತ್ರದುರ್ಗದಲ್ಲಿ ʼವೀರ ಮದಕರಿʼ ಸುದೀಪ್ ಇಂದು ಜನರನ್ನು ಆಕರ್ಷಿಸಲಿದ್ದಾರೆ.
ಬೆಂಗಳೂರಿನ ಹೆಚ್‌ಎಎಲ್‌ನಿಂದ ಚಿತ್ರದುರ್ಗದ ಮೊಳಕಾಲ್ಮೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಸುದೀಪ್ 11 ಘಂಟೆಗೆ ರೋಡ್ ಶೋನಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ (S Thippeswamy) ಪರ ಪ್ರಚಾರ ಮಾಡಲಿದ್ದಾರೆ. ನಂತರ ದಾವಣಗೆರೆಯ ಜಗಳೂರಿನಲ್ಲಿ 12.30ಕ್ಕೆ ಜಗಳೂರಿನ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಪರ ರೋಡ್ ಶೋ ಮಾಡಲಿದ್ದಾರೆ.
ದಾವಣಗೆರೆಯ ಮಾಯಕೊಂಡದ ಸರ್ಕಾರಿ ಕಾಲೇಜಿನ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಬಸವರಾಜ ನಾಯಕ್ ಪರ ಮತ ಯಾಚಿಸಲಿದ್ದಾರೆ. ಸಂಜೆ 4.20ಕ್ಕೆ ದಾವಣಗೆರೆ ನಾರ್ತ್, ಸೌತ್‌ನ ಅಭ್ಯರ್ಥಿಗಳಾದ ಲೊಕ್ಕಿಕೇರಿ ನಾಗರಾಜ್ ಹಾಗೂ ಅಜಯ್ ಪರ ರೋಡ್ ಶೋ ಮಾಡಿ ಅಭಿಮಾನಿಗಳನ್ನು ಸೆಳೆಯಲಿದ್ದಾರೆ. ಸಂಜೆ 6 ಘಂಟೆಗೆ ಬಳ್ಳಾರಿಗೆ ಆಗಮಿಸಿ, ಸಂಡೂರು ಕ್ಷೇತ್ರದ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ಪರ ರೋಡ್ ಶೋ ಮೂಲಕ ಪ್ರಚಾರ ಮಾಡಲಿದ್ದಾರೆ.
ಇಂದಿನಿಂದ ಪೂರ್ಣ ಪ್ರಮಾಣದ ಪ್ರಚಾರ: ಸುದೀಪ್
ಇವತ್ತಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಮಾಡಲಿದ್ದು, ಚುನಾವಣೆ ಪ್ರಚಾರ ಮುಗಿಯುವವರೆಗೆ ಕಣದಲ್ಲಿ ಇರಲಿದ್ದೇನೆ ಎಂದು ಕಿಚ್ಚ ಸುದೀಪ್ ಭರವಸೆ ನೀಡಿದ್ದಾರೆ. ಬಿಜೆಪಿ ಪ್ರಚಾರದ ಯೋಜನೆ ತುಂಬಾ ಚೆನ್ನಾಗಿ ರೂಪಿಸಿದ್ದಾರೆ. ನನಗೂ ರೋಡ್ ಶೋ ಹೋಗಿ ತುಂಬಾ ವರ್ಷಗಳಾಗಿವೆ. ʼಹೆಬ್ಬುಲಿʼ ಚಿತ್ರಕ್ಕೆ ಕೊನೆಯ ಬಾರಿಗೆ ರೋಡ್ ಶೋ ಮಾಡಿದ್ದೆ. ಹೋದಲ್ಲೆಲ್ಲ ಜನ ತುಂಬಾ ಪ್ರೀತಿ ತೋರಿಸುತ್ತಾರೆ. ನನಗೂ ಅವರನ್ನು ಭೇಟಿ ಮಾಡುವ ಸ್ವಾರ್ಥ ಇದೆ ಎಂದಿದ್ದಾರೆ ಸುದೀಪ್.
ಮಧ್ಯಾಹ್ನದ ಬಿಸಿಲು ಹೆಚ್ಚಿದ್ದು ಈಗ ಫೀಲ್ಡಿಗಿಳಿಯುವುದು ಬೇಡವೆಂದಿದ್ದರು. ಆದರೂ ಸಹ ನಾನು ಸಾಧ್ಯವಾದಷ್ಟು ಪ್ರಚಾರ ಮಾಡಲಿದ್ದೇನೆ. ನನಗೆ ಎಲ್ಲಾ ಕಡೆಯೂ ಸ್ನೇಹಿತರು ಇದ್ದಾರೆ. ನಾನು ಈ ಮೂಲಕ ಅಭಿಮಾನಿಗಳ ಊರಿಗೆ ಹೋಗೋಕೆ ಸಾಧ್ಯವಾಗುತ್ತಿದೆ ಎಂದಿದ್ದಾರೆ ಸುದೀಪ್. ತಮಗೆ ಬಂದ ಬೆದರಿಕೆ ಪತ್ರದ ವಿಚಾರದಲ್ಲಿ ಅವರು ಪ್ರತಿಕ್ರಿಯಿಸಿದ್ದು, ʼನನಗೆ ತುಂಬಾ ಜನ ಲವ್ ಲೆಟರ್ ಬರೆಯುತ್ತಾ ಇರ್ತಾರೆʼ ಎಂದು ವಿನೋದವಾಡಿದ್ದಾರೆ.
ಇದನ್ನೂ ಓದಿ: Karnataka Election 2023: ಸಕ್ಕರೆ ನಾಡಿನಲ್ಲಿ ಇಂದು ಯೋಗಿ ಹವಾ, ಒಕ್ಕಲಿಗರಿಗೆ ನಾಥಪಂಥದ ಮೂಲಕ ಗಾಳ?