ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ (Karnataka Election 2023) ಈ ಕ್ಷೇತ್ರಗಳು ಇರುವುದೇ ಹೀಗೆ. ಮಲ್ಲೇಶ್ವರ ಎಂದರೆ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ ನೆನಪಾಗುತ್ತಾರೆ. ಚಾಮರಾಜಪೇಟೆ ಎಂದ ಕೂಡಲೇ ಕಾಂಗ್ರೆಸ್‌ನ ಬಿ.ಜೆಡ್.ಜಮೀರ್ ಅಹ್ಮದ್ ಅವರ ಹೆಸರು ಕೇಳಿಬರುತ್ತದೆ. ಪದ್ಮನಾಭನಗರ ಕ್ಷೇತ್ರದ ಬಗ್ಗೆ ಮಾತನಾಡಿದರೆ ಬಿಜೆಪಿಯ ಆರ್.ಅಶೋಕ್ ಅವರ ಚಿತ್ರ ಕಣ್ಣಮುಂದೆ ಬರುತ್ತದೆ. ಕಳೆದ ಹಲವು ಚುನಾವಣೆಗಳಲ್ಲಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎಂಬುದು ನೆಪ ಮಾತ್ರ. ಅಷ್ಟರಪಟ್ಟಿಗೆ, ಈ ಕ್ಷೇತ್ರಗಳಲ್ಲಿ ನಾಯಕರು ಪಾರಮ್ಯ ಸಾಧಿಸಿದ್ದಾರೆ. ಜನರ ವಿಶ್ವಾಸ ಗಳಿಸಿದ್ದಾರೆ.
ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಕ್ಷೇತ್ರಗಳ ಮರು ವಿಂಗಡಣೆ ಬಳಿಕ 28 ವಿಧಾನಸಭೆ ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಸತತ ಮೂರು ಬಾರಿ ಶಾಸಕರ ಬದಲಾವಣೆ ಆಗಿಲ್ಲ. ಎಂಟು ಕ್ಷೇತ್ರಗಳಲ್ಲಿ ಎರಡು ಬಾರಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಹಾಗಾಗಿ, 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಲ್ಲಿ ಇವರೇ ಮತ್ತೆ ಗೆಲುವು ಸಾಧಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ಇವರು ತಮ್ಮ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.
ಯಾವ ಕ್ಷೇತ್ರಗಳಲ್ಲಿ ಯಾರು ಪ್ರಾಬಲ್ಯ?
ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಆಧಿಪತ್ಯವಿದ್ದು, 2008ರ ಬಳಿಕ ಸತತವಾಗಿ ಗೆಲುವು ಸಾಧಿಸಿದ್ದಾರೆ. ಎರಡು ಬಾರಿ ಜೆಡಿಎಸ್ ಹಾಗೂ ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದಿರುವ ಅವರು ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದಿದ್ದಾರೆ. ಇವರಿಗೆ ಈ ಬಾರಿ ಜಮೀರ್ ಅವರಿಗೆ ಸೆಡ್ಡು ಹೊಡೆಯಲು ಬಿಜೆಪಿಯ ಭಾಸ್ಕರ್ ರಾವ್ ಸಜ್ಜಾಗಿದ್ದಾರೆ.
ಸಿ.ವಿ.ರಾಮನ್ ನಗರ, ಮಹದೇವಪುರ, ಪುಲಕೇಶಿನಗರ ಹಾಗೂ ಆನೇಕಲ್ ಕ್ಷೇತ್ರಗಳು ಎಸ್‌ಸಿಗೆ ಮೀಸಲಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಕ್ಷೇತ್ರಗಳು ಹಂಚಿಕೆಯಾಗಿವೆ. ಯಲಹಂಕ, ಮಲ್ಲೇಶ್ವರ, ರಾಜಾಜಿನಗರ, ಸಿ.ವಿ.ರಾಮನ್ ನಗರ, ಬಸವನಗುಡಿ, ಪದ್ಮನಾಭ ನಗರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.
ಬ್ಯಾಟರಾಯನಪುರ, ಸರ್ವಜ್ಞ ನಗರ, ಶಾಂತಿ ನಗರ, ಶಿವಾಜಿ ನಗರ, ಗಾಂಧಿ ನಗರ, ವಿಜಯನಗರ ಹಾಗೂ ಬಿಟಿಎಂ ಲೇಔಟ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೆಲ್ಲರೂ ಹ್ಯಾಟ್ರಿಕ್ ಸಾಧಿಸಿದ್ದಾರೆ. ಹಾಗಾಗಿ, ಈ ಬಾರಿಯೂ ಬಹುತೇಕ ಇವರೇ ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಇವರು ಮಾಡಿರುವ ಅಭಿವೃದ್ಧಿ, ಜಾತಿ ಲೆಕ್ಕಾಚಾರ, ವರ್ಚಸ್ಸು ಸೇರಿ ಹಲವು ಕಾರಣಗಳಿಂದ ಇವರೇ ಮತ್ತೆ ಆಯ್ಕೆಯಾಗುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Election 2023: ಶೆಟ್ಟರ್ ರೋಡ್ ಶೋ ವೇಳೆ ಕಾಂಚಾಣ ಝಣ ಝಣ; ದುಡ್ಡು ಹಂಚುವ ವಿಡಿಯೊ ಇಲ್ಲಿದೆ