ರಾಜೇಶ್ ಪುತ್ತೂರು, ವಿಸ್ತಾರ ನ್ಯೂಸ್, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 2013ರ ಇತಿಹಾಸ ಮರುಕಳಿಸುವ ಸಾಧ್ಯತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆಗ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಹಾಗಂತ ಈ ಬಾರಿ ಏಳು ವಿಧಾನಸಭಾ ಕ್ಷೇತ್ರ ಅಲ್ಲದೇ ಇದ್ರೂ ಕನಿಷ್ಠ 4ರಿಂದ 5 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಬಹುದಾಗಿದೆ. ಜಿಲ್ಲೆಯಲ್ಲಿ ನಡೆದ ಕೋಮು ದ್ವೇಷದ ಕೆಲ ಸಂಗತಿಗಳು, ಪ್ರವೀಣ್ ನೆಟ್ಟಾರು ಹಾಗೂ ಫಾಝಿಲ್ ಕೊಲೆ ಪ್ರಕರಣದಲ್ಲಿ ಸರ್ಕಾರ ನಡೆದುಕೊಂಡ ರೀತಿ, ಬಳಿಕ ಹಿಜಾಬ್, ಆಝಾನ್, ಧರ್ಮ ದಂಗಲ್, ಮೀಸಲಾತಿ ರದ್ದತಿ ಇತ್ಯಾದಿ ವಿಚಾರಗಳು ಈ ಬಾರಿ ಚುನಾವಣೆಯ ಫಲಿತಾಂಶವನ್ನು ನಿರ್ಣಯಲಿಸಲಿವೆ. ಎಲ್ಲಾ ವಿಚಾರದಲ್ಲೂ ಮೌನವಹಿಸಿದ್ದ ಅಲ್ಪಸಂಖ್ಯಾತ ವರ್ಗದವರು ಚುನಾವಣೆಯಲ್ಲೇ ಉತ್ತರ ನೀಡುವ ಸಂಕಲ್ಪ ಮಾಡಿದ್ದಾರೆ. ಮತದಾನದಿಂದ ದೂರ ಉಳಿಯುತ್ತಿದ್ದವರೆಲ್ಲಾ ಈ ಬಾರಿ ಹೆಚ್ಚಿನ ಮತದಾನ ಮಾಡುವ ಸಂಕಲ್ಪ ಕೂಡಾ ಮಾಡಿದ್ದಾರೆ. ಜೊತೆಗೆ ಅಲ್ಪ ಸ್ವಲ್ಪ ಮತ ಪಡೆಯುತ್ತಿದ್ದ ಕಮ್ಯುನಿಸ್ಟ್ ಪಕ್ಷ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಹಿರಂಗ ಬೆಂಬಲ ಸೂಚಿಸಿದೆ. ಹಾಗಾಗಿ, ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಹಾಗಿದ್ದೂ, ಕೊನೆಯ ನಾಲ್ಕೈ ದಿನಗಳಲ್ಲಿನ ಬೆಳವಣಿಗೆಗಳ ಪರಿಣಾಮವನ್ನು ಊಹಿಸುವುದು ಕಷ್ಟ(Karnataka Election 2023). ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಮಾಡಿರುವುದು ಸಂಘ ಪರಿವಾರದ ಕಾರ್ಯಕರ್ತರನ್ನು ಕೆರಳಿಸಿದೆ. ಸಂಘ ಪರಿವಾರದ ಪ್ರಯೋಗಶಾಲೆ ಎನ್ನಲಾಗುವ ದಕ್ಷಿಣ ಕನ್ನಡದಲ್ಲಿ ಇದರ ಪರಿಣಾಮ ಎಷ್ಟು ಎನ್ನುವುದು ಕುತೂಹಲ ಕೆರಳಿಸಿದೆ.
ಮಂಗಳೂರು: ಅನಾಯಾಸವಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್
ಈ ಹಿಂದೆ ಉಳ್ಳಾಲ ಕ್ಷೇತ್ರವಾಗಿದ್ದ ಮಂಗಳೂರು ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. 2006ರ ಉಪಚುನಾವಣೆಯಲ್ಲಿ ತಂದೆ ಯು.ಟಿ. ಫರೀದ್ ಅವರ ಸ್ಥಾನ ತುಂಬಿದವರು ಯು.ಟಿ. ಖಾದರ್. 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾಗಿ ವಿಟ್ಲ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳು ಈ ಕ್ಷೇತ್ರದ ಪಾಲಾಗಿತ್ತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳು ಉಳ್ಳಾಲ ವಿಧಾನಸಭಾ ಕ್ಷೇತ್ರದ ಜೊತೆ ಸೇರಿ ಮಂಗಳೂರು ವಿಧಾನಸಭಾ ಕ್ಷೇತ್ರ ರಚನೆ ಆಗಿತ್ತು. ಆರಂಭದಿಂದಲೂ ಮಂಗಳೂರು ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿರುವ ಯು.ಟಿ. ಖಾದರ್ ಅವರನ್ನು ಕಟ್ಟಿ ಹಾಕಲು ಇಲ್ಲಿ ಬಿಜೆಪಿಗೆ ಸಮರ್ಥ ಅಭ್ಯರ್ಥಿ ಇಲ್ಲ ಅನ್ನೋದೇ ಕಾಂಗ್ರೆಸ್ ಪ್ಲಸ್ ಪಾಯಿಂಟ್ . ಸತೀಶ್ ಕುಂಪಲ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆ ಆಗಿತ್ತಾದ್ರೂ ಅದು ಈ ಬಾರಿ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಈ ನಡುವೆ ಎಸ್‌ಡಿಎಫ್‌ಐ ಪ್ರಭಾವಿ ನಾಯಕ ರಿಯಾಜ್ ಫರಂಗಿಪೇಟೆ ಇಲ್ಲಿ ಸ್ಪರ್ಧೆಗಿಳಿದಿದ್ದಾರೆ. ಅವರು ಮುಸ್ಲಿಮರ ಎಷ್ಟು ಮತ ಸೆಳೆಯುತ್ತಾರೆ ಎನ್ನುವುದರ ಮೇಲೆ ಯು ಟಿ ಖಾದರ್ ಅವರ ಗೆಲುವಿನ ಅಂತರ ನಿಂತಿದೆ.
ಕಳೆದ ಬಾರಿಯ ಫಲಿತಾಂಶ
ಯು.ಟಿ. ಖಾದರ್ (ಕಾಂಗ್ರೆಸ್): 80813, ಸಂತೋಷ್ ಕುಮಾರ್ ರೈ (ಬಿಜೆಪಿ): 61074, ಗೆಲುವಿನ ಅಂತರ: 19739
ಮಂಗಳೂರು ನಗರ ದಕ್ಷಿಣ: ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಟಫ್ ಫೈಟ್
ಹಿಂದೆ ಮಂಗಳೂರು ವಿಧಾನಸಭಾ ಕ್ಷೇತ್ರವಾಗಿದ್ದ ಕ್ಷೇತ್ರ ಈಗ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾಗಿ ಬದಲಾಗಿದೆ. ಬಹುತೇಕ ಬಿಜೆಪಿ ಪ್ರಾಬಲ್ಯವಿದೆ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಕೆಎಎಸ್ ಅಧಿಕಾರಿಯಾಗಿ ಮಂಗಳೂರು ನಗರ ಪಾಲಿಕೆ ಆಯುಕ್ತರೂ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿ ವೇದವ್ಯಾಸ ಕಾಮತ್ ಎದುರು ಲೋಬೋ ಸೋಲನುಭವಿಸಿದರು. ಈ ಬಾರಿ ಮತ್ತೆ ವೇದವ್ಯಾಸ ಕಾಮತ್ ಹಾಗೂ ಜೆ.ಆರ್ ಲೋಬೋ ನಡುವೆ ನೇರ ಹಣಾಹಣಿ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ಮಂಗಳೂರು ನಗರಕ್ಕೆ ದೊರೆತ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ವೇದವ್ಯಾಸ್ ಕಾಮತ್ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಸೋತರೂ ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಜೆ.ಆರ್.ಲೋಬೋ ಜನರ ಜೊತೆಗಿದ್ದೇನೆ ಎಂದು ತೋರಿಸಿ ಕೊಟ್ಟಿದ್ದಾರೆ. ಹೀಗಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಫಲಿತಾಂಶದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಇಲ್ಲಿ ಗೆಲ್ಲುವ ಅಭ್ಯರ್ಥಿ ಅಂತ ಕಾಣಿಸಿಕೊಂಡ್ರೂ ಬಿಜೆಪಿಯ ವೇದವ್ಯಾಸ ಕಾಮತ್ ಅವರಿಗೆ ತೀವ್ರ ಸ್ಪರ್ಧೆ ಇದೆ ಎನ್ನಬಹುದು.
ಕಳೆದ ಬಾರಿಯ ಫಲಿತಾಂಶ
ಜೆ.ಆರ್.ಲೋಬೋ (ಕಾಂಗ್ರೆಸ್): 70470, ವೇದವ್ಯಾಸ ಕಾಮತ್ (ಬಿಜೆಪಿ): 86545, ಗೆಲುವಿನ ಅಂತರ: 16075
ಮಂಗಳೂರು ನಗರ ಉತ್ತರ: ಜೆಡಿಎಸ್ ಪ್ರದರ್ಶನ ಮೇಲೆ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ ಗೆಲುವು ನಿರ್ಧಾರ!
2008ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಮಂಗಳೂರು ನಗರ ಉತ್ತರ ಕ್ಷೇತ್ರವಾಗಿ ಹೆಸರು ಪಡೆದುಕೊಂಡಿದೆ. ಜಿಲ್ಲೆಯ ಅತೀ ಸೂಕ್ಷ್ಮ ಮತಗಟ್ಟೆಗಳು ಇಲ್ಲಿವೆ. ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ನಿರಂತರ ಎರಡು ಬಾರಿ ಆಯ್ಕೆಯಾಗಿದ್ದರು. ಆದರೆ ಒಮ್ಮೆ ಕ್ಷೇತ್ರ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು ಹಾಗೂ ಮತ್ತೊಮ್ಮೆ ಆಯ್ಕೆಯಾದಾಗ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಬಿಜೆಪಿಯು ಹಾಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರಿಗೆ ಮತ್ತೆ ಟಿಕೆಟ್ ನೀಡಿದೆ. ಆದರೆ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ತೀವ್ರ ಸ್ಪರ್ಧೆಯೊಡ್ಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮೊಯಿದಿನ್ ಬಾವ ಜೆಡಿಎಸ್ ಮೂಲಕ ಸ್ಪರ್ಧಿಸಿದ್ದಾರೆ. ಅಲಿ ಸಮಾಜ ಸೇವೆ ಮೂಲಕ ಹೆಸರುವಾಸಿಯಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಬೆನ್ನಲ್ಲೇ ನಡೆದ ಫಾಸೀಲ್ ಹತ್ಯೆಯ ವೇಳೆ ಶಾಸಕ ಭರತ್ ಶೆಟ್ಟಿ ಅವರು ನಡೆದುಕೊಂಡ ರೀತಿ ಕ್ಷೇತ್ರದ ಜನರಲ್ಲಿ ತೀವ್ರವಾದ ಅಸಮಾಧಾನ ಮೂಡಿಸಿದೆ. ಅಭಿವೃದ್ಧಿ ವಿಚಾರದಲ್ಲೂ ಕೊನೆಯ ಕ್ಷಣದಲ್ಲಿ ಫೀಲ್ಡ್ ಗೆ ಇಳಿದ ಭರತ್ ಶೆಟ್ಟಿ ಅವರ ಬಗ್ಗೆ ಸ್ವಪಕ್ಷೀಯರಲ್ಲೇ ಅಸಮಧಾನ ಇದೆ. ಹೀಗಾಗಿ ಈ ಬಾರಿ ಮಂಗಳೂರು ನಗರ ಉತ್ತರದಲ್ಲಿ ತೀವ್ರ ಪೈಪೋಟಿ ಕಂಡು ಬಂದಿದೆ. ಜೆಡಿಎಸ್ ಅಭ್ಯರ್ಥಿ ಎಷ್ಟು ಮತ ಪಡೆಯುತ್ತಾರೆ ಅನ್ನೋ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
ಕಳೆದ ಬಾರಿಯ ಫಲಿತಾಂಶ: ಮೊಯಿದ್ದೀನ್ ಬಾವ(ಕಾಂಗ್ರೆಸ್): 72000, ಡಾ.ವೈ.ಭರತ್ ಶೆಟ್ಟಿ (ಬಿಜೆಪಿ): 98648, ಗೆಲುವಿನ ಅಂತರ: 26648
ಮೂಡುಬಿದರೆ : ಜೆಡಿಎಸ್ ತನ್ನ ಮತಗಳನ್ನು ಪಡೆದರೆ ಕಾಂಗ್ರೆಸ್ ಗೆಲುವು ಸಲೀಸು!
ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯ ಕ್ಷೇತ್ರವಾಗಿತ್ತು. 2018ರಲ್ಲಿ ಈ ಕೋಟೆಯನ್ನು ಬಿಜೆಪಿಯ ಉಮಾನಾಥ ಕೋಟ್ಯಾನ್ ಭೇದಿಸಿದರು. ಆದರೆ, ಮತ್ತೆ ಜೆಡಿಎಸ್ ಇಲ್ಲಿ ಸಕ್ರಿಯವಾಗಿದೆ. ಅಮರನಾಥ ಶೆಟ್ಟಿ ಅವರ ಮಗಳು ಡಾ. ಅಮರಶ್ರೀ ಶೆಟ್ಟಿ ಕಣಕ್ಕೆ ಇಳಿದಿದ್ದಾರೆ. ಐದು ವರ್ಷಗಳ ಹಿಂದೆಯೇ ಅಭಯಚಂದ್ರ ಜೈನ್ ಮುಂದಿನ ಅಭ್ಯರ್ಥಿ ಮಿಥುನ್ ರೈ ಅಂತ ಘೋಷಣೆ ಮಾಡಿದ್ದರು. ಹೀಗಾಗಿ ಐದು ವರ್ಷಗಳಿಂದ ಮಿಥುನ್ ರೈ ಮೂಡಬಿದ್ರೆ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಶಾಸಕರಾಗಿ ಉಮಾನಾಥ ಕೋಟ್ಯಾನ್ ಕೂಡ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸರಳ ಸಜ್ಜನಿಕೆಯ ಉಮಾನಾಥ ಕೊಟ್ಯಾನ್ ವಿಚಾರವಾಗಿ ಕ್ಷೇತ್ರದ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಆದರೆ ಜೆಡಿಎಸ್ ಸಾಂಪ್ರದಾಯಿಕ ಮತಗಳು ಮತ್ತೆ ಜೆಡಿಎಸ್ ನ ಅಮರಶ್ರೀ ಪಾಲಾದ್ರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರಿಗೆ ಗೆಲುವಾಗುವ ಸಾಧ್ಯತೆ ಇದೆ. ಒಂದು ವೇಳೆ ಜೆಡಿಎಸ್ ಇಲ್ಲಿ ಮತ ವಿಭಜನೆ ಮಾಡದೇ ಇದ್ದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ನಡುವೇ ಟೈಟ್ ಫೈಟ್ ಎದುರಾಗಲಿದೆ.
ಕಳೆದ ಬಾರಿಯ ಫಲಿತಾಂಶ
ಅಭಯ ಚಂದ್ರ ಜೈನ್ (ಕಾಂಗ್ರೆಸ್): 57645, ಉಮಾನಾಥ ಕೊಟ್ಯಾನ್ (ಬಿಜೆಪಿ): 87444, ಗೆಲುವಿನ ಅಂತರ: 29799
ಬೆಳ್ತಂಗಡಿ: ಬಿಜೆಪಿಗೆ ಅಂಡರ್ ಕರೆಂಟ್ ಶಾಕ್ ಹೊಡೆಯುವ ಸಾಧ್ಯತೆ
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಎಂಟ್ರಿಕೊಟ್ಟ ಯುವ ನಾಯಕ ಹರೀಶ್ ಪೂಂಜಾ ಕಾಂಗ್ರೆಸ್‌ನ ವಸಂತ ಬಂಗೇರ ಅವರನ್ನು ಭಾರೀ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯಭೇರಿ ಬಾರಿಸಿದ್ದರು. ಈ ಬಾರಿ ವಸಂತ ಬಂಗೇರ ಕಣದಿಂದ ಹಿಂದೆ ಸರಿದಿದ್ದು, ಅವರ ಜಾಗವನ್ನು ಯುವ ನಾಯಕ ರಕ್ಷಿತ್ ಶಿವರಾಂ ತುಂಬಿದ್ದಾರೆ. ಕಳೆದ ಮೂರುವರೆ ವರ್ಷದಿಂದ ಕ್ಷೇತ್ರದಲ್ಲಿ ಓಡಾಡಿ ಇಮೇಜ್ ಹೆಚ್ಚಿಸಿಕೊಂಡಿರೋ ರಕ್ಷಿತ್ ಶಿವರಾಂ ಸದ್ಯ ಹರೀಶ್ ಪೂಂಜಾ ಅವರಿಗೆ ಸವಾಲೊಡ್ಡಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಿದ್ದು ಬಿಟ್ಟರೆ ಬೇರೇನೂ ದೊಡ್ಡ ಕೊಡುಗೆ ನೀಡಿಲ್ಲ. ಹಿಂದುತ್ವವನ್ನೇ ಅಸ್ತ್ರಮಾಡಿಕೊಂಡ ಹರೀಶ್ ಪೂಂಜಾ ಸದ್ಯ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿಯವರನ್ನೇ ಎದುರು ಹಾಕಿಕೊಂಡಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ರಕ್ಷಿತ್ ಶಿವಾರಂ ನೀಡುವ ದೇಣಿಗೆ ಪಡೆಯದಂತೆ ದೇವಸ್ಥಾನಗಳ ಆಡಳಿತ ಮಂಡಳಿಗೆ ಒತ್ತಾಯ ಹೇರಿದ್ದು, ದೇವಸ್ಥಾನದ ಕಾರ್ಯಕ್ರಮಗಳಿಗೆ ಆಹ್ವಾನ ನೀಡದಂತೆ ಮಾಡಿದ್ದು, ಶಾಲಾ ಮಕ್ಕಳಿಗೆ ಪುಸ್ತಕ ಹಂಚಿಕೆಗೂ ಅಡ್ಡಿಪಡಿಸಿದ್ದು ಎಲ್ಲವೂ ಹರೀಶ್ ಪೂಂಜಾ ವಿರುದ್ದ ಒಂದಷ್ಟು ಜನರಿಗೆ ಅಸಮಧಾನ ಮೂಡಿಸಿತ್ತು. ಆದರೆ ಬಿಲ್ಲವ ಸಮುದಾಯದವರ ವಿರೋಧದ ನಡುವೆಯೂ ವೇಣೂರು ದೇವಸ್ಥಾನದ ಬ್ರಹ್ಮಕಲಶಕ್ಕೆ ಪಠ್ಯಪುಸ್ತಕ ಸಮಿತಿಯ ರೋಹಿತ್ ಚಕ್ರತೀರ್ಥ ಅವರನ್ನು ಕರೆಸಿ ಸನ್ಮಾನಿಸಿದ್ದು ಬಿಲ್ಲವರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಈ ಬಾರಿ ಗೆಲ್ಲುವ ಅಭ್ಯರ್ಥಿ ಹರೀಶ್ ಪೂಂಜಾ ಅಂತ ಅನಿಸಿದ್ದರೂ ಬೆಳ್ತಂಗಡಿಯಲ್ಲಿನ ಜನಮನದ ಅಂಡರ್ ಕರೆಂಟ್ ಹರೀಶ್ ಪೂಂಜಾಗೆ ಶಾಕ್ ನೀಡಿದರೂ ನೀಡಬಹುದು.
ಕಳೆದ ಬಾರಿಯ ಫಲಿತಾಂಶ
ವಸಂತ ಬಂಗೇರ (ಕಾಂಗ್ರೆಸ್): 74530 ಮತ್ತು ಹರೀಶ್ ಪೂಂಜಾ(ಬಿಜೆಪಿ): 98417, ಗೆಲುವಿನ ಅಂತರ: 23880
ಬಂಟ್ವಾಳ: ಬಿಜೆಪಿ- ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ
ಬಂಟ್ವಾಳ ವಿಧಾನಸಭಾಕ್ಷೇತ್ರದಲ್ಲೂ ಈ ಬಾರಿ ಗೆಲುವು ಯಾರಿಗಾಗಬಹುದು ಅಂತ ಹೇಳೋದು ಕಷ್ಟ. ಯಾಕೆಂದರೆ 9ನೇ ಬಾರಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿರೋ ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ ರೈ ಇದು ತಮ್ಮ ಕೊನೇ ಚುನಾವಣೆ ಅಂತ ಸೆಂಟಿಮೆಂಟ್ ಕಾರ್ಡ್ ಪ್ಲೇ ಮಾಡಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮಾಡಿ ಸೋಲಿಸಿದ್ರು ಅಂತ ಜನರಿಗೆ ಸಾಬೀತುಪಡಿಸಲು ಹಲವು ದೈವಗಳ ಮುಂದೆ ಅಪಪ್ರಚಾರ ಮಾಡಿದವರನ್ನು ಆಣೆ ಪ್ರಮಾಣಕ್ಕೆ ಕರೆದು ಸವಾಲೊಡ್ಡಿದ್ದರು. ಇತ್ತ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಕೂಡಾ ಜನ ಮೆಚ್ಚುಗೆ ಪಡೆದಿದ್ದಾರೆ. ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡಿರುವ ರಾಜೇಶ್ ನಾಯ್ಕ್ ಕಟ್ಟಾ ಹಿಂದುತ್ವವಾದಿಯೂ ಅಲ್ಲ. ತಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸಾಮರಸ್ಯವನ್ನೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ರಮಾನಾಥ ರೈ ಅವರಿಗೆ ಅನುಕಂಪ ಹಾಗೂ ಅವರ ಅವಧಿಯ ಅಭಿವೃದ್ಧಿ ಮತಕೇಳಲು ಅಸ್ತ್ರವಾಗಿದ್ದರೆ; ರಾಜೇಶ್ ನಾಯ್ಕ್ ಅವರಿಗೂ ಇದೇ ಅಸ್ತ್ರವಾಗಿದೆ. ಹಾಗಾಗಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ ತೀವ್ರ ಹಣಾಹಣಿ ಇದೆ.
ಕಳೆದ ಬಾರಿಯ ಫಲಿತಾಂಶ
ರಮಾನಾಥ ರೈ ( ಕಾಂಗ್ರೆಸ್ )81665 ರಾಜೇಶ್ ನಾಯ್ಕ್ ( ಬಿಜೆಪಿ )97802 ಗೆಲುವಿನ ಅಂತರ : 16137
ಪುತ್ತೂರು: ಬಿಜೆಪಿಗೆ ಬಂಡಾಯದ ಬಿಸಿ, ಸಿಗುವುದೇ ಕಾಂಗ್ರೆಸ್‌ಗೆ ಗೆಲುವಿನ ಖುಷಿ?
ಪುತ್ತೂರು ಬಿಜೆಪಿಯ ಶಕ್ತಿ ಕೇಂದ್ರ. ಅದೀಗ ಒಡೆದ ಮನೆಯಾಗಿದೆ. ಮನೆಯೊಂದು ಮೂರು ಬಾಗಿಲಾಗಿದ್ದು, ಮೂವರು ಬಿಜೆಪಿಗರೇ ಚುನಾವಣಾ ಕಣದಲ್ಲಿದ್ದಾರೆ. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಗೆಲ್ಲುವ ಹೆಚ್ಚು ಅವಕಾಶಗಳು ಸೃಷ್ಟಿಯಾಗಿವೆ. ಬಿಜೆಪಿಯಿಂದ ಮುನಿಸಿಕೊಂಡು ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ಅಶೋಕ್ ರೈಗೆ ಕೈ ಪಕ್ಷದ ಸಾಂಪ್ರದಾಯಿಕ ಮತ ಹಾಗೂ ತಮ್ಮ ವಿಶ್ವಾಸಿಕ ಕಾರ್ಯಕರ್ತರು ಹಾಗೂ ಸಾವಿರಾರು ಫಲಾನುಭವಿಗಳ ಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಸಿಡಿದು ಬಂಡಾಯವೆದ್ದಿರುವ ಹಿಂದೂ ಸಂಘಟನೆ ಮುಖಂಡ ಅರಣ್ ಕುಮಾರ್ ಪುತ್ತಿಲ ಬಿಜೆಪಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರಿಗೆ ಸದ್ಯ ಬಿಜೆಪಿಯ ಕಟ್ಟಾ ಬೆಂಬಲಿಗರ ಬೆಂಬಲ ಇದೆ. ಬಿಜೆಪಿ ಮತಗಳು ಹೀಗೆ ಮೂರು ಹೋಳಾಗಿ ಒಡೆದು ಹೋಗುವ ಸಾಧ್ಯತೆ ಇದೆ. ಸದ್ಯ ಈ ಕ್ಷೇತ್ರದಲ್ಲಿ ಬಿಜೆಪಿಯ ಭಿನ್ನಾಭಿಪ್ರಾಯ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಹಾದಿ ಸುಲಭವಾಗಿಸಿದೆ.
ಬಂಡಾಯದ ಬಿಸಿ: ಈ ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟುತ್ತಿದೆ. ಒಕ್ಕಲಿಗರಿಗೇ ಟಿಕೇಟ್ ನೀಡಲು ತೀರ್ಮಾನಿಸಿ ಒಕ್ಕಲಿಗರು ಬಹು ಸಂಖ್ಯಾತರಾಗಿರೋ ಸುಳ್ಯ ಕ್ಷೇತ್ರದ ಆಶಾ ತಿಮ್ಮಪ್ಪ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಪರಿಣಾಮವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಟಿಕೇಟ್ ನಿರೀಕ್ಷೆಯಲ್ಲಿದ್ದ ಹಿಂದೂ ಸಂಘಟನೆಯ ಮುಖಂಡ ಅರುಣ್ ಪುತ್ತಿಲ್ಲ ಸಿಡಿದೆದ್ದಿದ್ದಾರೆ. ಟಿಕೆಟ್ ಘೋಷಣೆಯಾಗಿ ಎರಡೇ ಗಂಟೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡರು. ಪುತ್ತಿಲ ಅವರ ಬೆನ್ನಿಗೆ ಸಾವಿರಾರು ಕಾರ್ಯಕರ್ತರು ನಿಂತಿದ್ದಾರೆ. ಹಾಗಾಗಿ ಬಿಜೆಪಿಗೆ ಈ ಕ್ಷೇತ್ರದಲ್ಲಿ ಬಿಂಡಾಯದ ಬಿಸಿ ತಗುಲಿದೆ. ಸಂಘ ಪರಿವಾರದ ಹಿರಿಯ ಮುಖಂಡರು, ಯೋಗಿ ಆದಿತ್ಯನಾಥ ಮುಂತಾದ ಪ್ರಭಾವಿ ನಾಯಕರು ಈ ಕ್ಷೇತ್ರದಲ್ಲಿ ಸುತ್ತಾಡಿ ಬಿಜೆಪಿ ಮತ ಒಡೆಯುವುದನ್ನು ತಪ್ಪಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಕಳೆದ ಬಾರಿಯ ಫಲಿತಾಂಶ
ಸಂಜೀವ ಮಠಂದೂರು ( ಬಿಜೆಪಿ) 90,073 ಶಕುಂತಳಾ ಶೆಟ್ಟಿ (ಕಾಂಗ್ರೆಸ್) 66,345 ಗೆಲುವಿನ ಅಂತರ : 33,728
ಸುಳ್ಯ: ಬಿಜೆಪಿ- ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ
30 ವರ್ಷಗಳಿಂದ ಬಿಜೆಪಿ ವಶದಲ್ಲಿರುವ ಸುಳ್ಯ ವಿಧಾನಸಭಾ ಮೀಸಲು ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಸಾಕಷ್ಟು ಹಿಂದೆ ಉಳಿದಿದೆ. ಆರು ಅವಧಿಗೆ ಶಾಸಕರಾಗಿದ್ದ ಎಸ್ ಅಂಗಾರ ಇಲ್ಲಿ ಸೋಲಿಲ್ಲದ ಸರದಾರ ಆಗಿದ್ದರು. ಆದರೆ ಈ ಬಾರಿ ಅಂಗಾರ ಅವರ ವಿರುದ್ದ ಜನಾಕ್ರೋಶವಿದೆ ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಗಿದೆ. ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಭಾಗೀರಥಿ ಮುರಳ್ಯ ಅವರು ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಇಲ್ಲಿ ಕಳೆದ ನಾಲ್ಕು ಬಾರಿ ಡಾ. ರಘು ಅವರನ್ನು ಕಣಕ್ಕಿಳಿಸಿತ್ತಾದ್ರೂ ಗೆಲುವಿನ ಸಮೀಪ ಬಂದಿದ್ದ ಅವರಿಗೆ ಗೆಲುವು ಒಲಿದಿಲ್ಲ. ಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಸದ್ಯ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟೈಟ್ ಫೈಟ್ ಏರ್ಪಟ್ಟಿದ್ದು, ಬಿಜೆಪಿ ಓಟಕ್ಕೆ ಕಾಂಗ್ರೆಸ್ ಬ್ರೇಕ್ ಹಾಕೊತ್ತಾ ನೋಡಬೇಕಿದೆ. ಬಿಜೆಪಿ ಇಲ್ಲಿ ಗೆಲ್ಲುವ ಫೇವರೆಟ್ ಆದ್ರೂ ಅಭಿವೃದ್ಧಿ ವಿಚಾರದಲ್ಲಿ ಜನ ಈ ಬಾರಿ ತಮ್ಮ ಮನಸು ಬದಲಾಯಿಸಿದರೆ ಅಚ್ಚರಿ ಏನಿಲ್ಲ.
ಕಳೆದ ಬಾರಿಯ ಫಲಿತಾಂಶ
ಎಸ್ ಅಂಗಾರ ( ಬಿಜೆಪಿ) 95205 ಡಾ.ರಘು ( ಕಾಂಗ್ರೆಸ್ ) 69137 ಗೆಲುವಿನ ಅಂತರ : 26068